

Ajit Pawar: ಅಕ್ರಮವಾಗಿ ಮಣ್ಣು ಅಗೆಯುತ್ತಿರುವುದನ್ನು ತಡೆಯಲು ತೆರಳಿದ್ದ ಮಹಿಳಾ ಐಪಿಎಸ್ ಅಧಿಕಾರಿಯ ಮೇಲೆ ಉಪಮುಖ್ಯಮಂತ್ರಿ ಅಜಿತ್ ಪವಾರ್ ಒತ್ತಡ ಹೇರಿದ್ದರೆ ಎನ್ನಲಾದ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಈ ನಡೆಯಿಂದ ಡಿಸಿಎಂ ಪವಾರ್ ಹೊಸ ವಿವಾದಕ್ಕೆ ಸಿಲುಕಿದ್ದಾರೆ ಎನ್ನಲಾಗಿದೆ.
ಮಹಾರಷ್ಟ್ರದ ಸೋಲಾಪುರ ಜಿಲ್ಲೆಯ ಕರ್ಮಲಾ ತಾಲೂಕಿನ ಕುರ್ಡು ಎಂಬ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ರಸ್ತೆ ಕಾಮಗಾರಿಗೆ ಬಳಸುತ್ತಿದ್ದ ಮಣ್ಣನ್ನು ಅಕ್ರಮವಾಗಿ ಅಗೆಯುತ್ತಿದ್ದರು ಎಂಬ ದೂರು ಬಂದ ಹಿನ್ನಲೆಯಲ್ಲಿ, ಉಪವಿಭಾಗೀಯ ಪೊಲೀಸ್ ಅಧಿಕಾರಿ ಅಂಜನಾ ಕೃಷ್ಣ, ಸ್ಥಳಕ್ಕೆ ಭೇಟಿ ನೀಡಿದ್ದರು ಎಂದು ಹೇಳಲಾಗುತ್ತಿದೆ. ಈ ವೇಳೆ ಗ್ರಾಮಸ್ಥರು ಪೊಲೀಸ್ ಅಧಿಕಾರಿಗಳೊಂದಗೆ ವಾಗ್ವಾದಕ್ಕಿಳಿದರು, ಸ್ಥಳೀಯ ಎನ್ಸಿಪಿ ಕಾರ್ಯಕರ್ತರು ನೇರವಾಗಿ ಅಜಿತ್ ಪವಾರ್ಗೆ ಕರೆ ಮಾಡಿ, ಸ್ಥಳದಲ್ಲಿದ್ದ ಅಂಜನಾ ಕೃಷ್ಣ ಅವರಿಗೆ ನೀಡಿರುವುದು ವಿಡಿಯೋದಲ್ಲಿ ಕಾಣಬಹುದು.
ಸದ್ಯ ವೈರಲ್ ಆಗಿರುವ ವಿಡಿಯೋವನ್ನು ಅನೇಕರು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು, ಅದರಲ್ಲಿ ಡಿಸಿಎಂ ಅಜಿತ್ ಪವಾರ್, ತಕ್ಷಣ ಕಾರ್ಯಾಚರಣೆಯನ್ನು ನಿಲ್ಲಿಸಿ, ಅಲ್ಲಿಂದ ತೆರಳುವಂತೆ ಸೂಚಿಸುತ್ತಾರೆ, ಆದರೆ ಅಧಿಕಾರಿ ಅಂಜನಾ, ಪವಾರ್ ಧ್ವನಿಯನ್ನು ಗುರುತಿಸಲಾಗದೆ, ನೀವು ಏನು ಹೇಳುತ್ತಿದ್ದೀರಿ ಎಂದು ನನಗೆ ಅರ್ಥವಾಗುತ್ತಿದೆ, ಆದರೆ ನಾನು ಉಪಮುಖ್ಯಮಂತ್ರಿ ಅವರೊಂದಿಗೆ ಮಾತನಾಡುತ್ತಿದ್ದೇನೆಯೇ ಎಂದು ನನಗೆ ಅರ್ಥವಾಗುತ್ತಿಲ್ಲ, ದಯವಿಟ್ಟು ನನ್ನ ಮೊಬೈಲ್ ಸಂಖ್ಯೆಗೆ ನೇರವಾಗಿ ಕರೆ ಮಾಡಬಹುದೇ? ಎಂದಿದ್ದಾರೆ.
ಅಧಿಕಾರಿಯ ಮಾತಿಗೆ ಆಕ್ರೋಶಗೊಂಡ ಡಿಸಿಎಂ, ನಿನಗೆ ಎಷ್ಟು ಧೈರ್ಯ, ನಾನು ಹೇಳಿದರು ಕೇಳುತಿಲ್ಲವಲ್ಲ, ನಿನ್ನ ಮೊಬೈಲ್ ನಂಬರ್ ಕೊಡು ನಾನೇ ನಿನಗೆ ವಿಡಿಯೋ ಕರೆ ಮಾಡಿ ಖಾತ್ರಿ ಪಡಿಸುವೆ ಎಂದಿದ್ದಾರೆ.
ಅಜಿತ್ ಪವಾರ್ ನಡೆಯನ್ನು ಸಮರ್ಥಿಸಿಕೊಂಡಿರುವ ಎನ್ಸಿಪಿ, ಪಕ್ಷದ ಕಾರ್ಯಕರ್ತರನ್ನು ಸಮಾಧಾನಪಡಿಸಲು ಅಜಿತ್ ದಾದಾ ಐಪಿಎಸ್ ಅಧಿಕಾರಿಯನ್ನು ಬೆದರಿಸಿರಬಹುದು, ಅಕ್ರಮ ಮಣ್ಣು ಸಾಗಾಣಿಕೆ ಸಂಪೂರ್ಣವಾಗಿ ನಿಲ್ಲಿಸುವ ಉದ್ದೇಶ ಅವರಿಗೆ ಇರಲಿಲ್ಲ ಎಂದಿದ್ದು, ಪವಾರ್ ಕಾನೂನುಬಾಹಿರ ಚಟುವಟಿಕೆಗಳನ್ನು ಬೆಂಬಲಿಸುವುದಿಲ್ಲ ಎಂದು ತಿಳಿಸಿದ್ದಾರೆ.
ಅಜಿತ್ ಪವಾರ್ ಅವರನ್ನು ರಾಜಕೀಯವಾಗಿ ಹಣಿಯಲು ಈ ವಿಡಿಯೋವನ್ನು ಬಳಸಿಕೊಳ್ಳಲಾಗುತ್ತಿದೆ ಎಂದು ಎನ್ಸಿಪಿ ಆರೋಪಿಸಿದೆ.(ಏಜೆನ್ಸೀಸ್)