ಸಚಿನ್​ ಒಬ್ಬರೇ ನನ್ನ ಮಗನಿಗೆ...! ಕೊಹ್ಲಿ, ಧೋನಿ ಬೆನ್ನಿಗೆ ಚೂರಿ ಹಾಕಿದವರು: ಯುವಿ ತಂದೆ ಗಂಭೀರ ಆರೋಪ | Yograj Singh

ವಿಜಯವಾಣಿ (21)
Published on

Yograj Singh: 2011ರ ವಿಶ್ವಕಪ್​ ಹೀರೋ ಎಂದೇ ಕರೆಯಲ್ಪಡುವ ಟೀಮ್ ಇಂಡಿಯಾ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ ಅವರ ತಂದೆ ಯೋಗರಾಜ್ ಸಿಂಗ್ ಇದೀಗ ಮತ್ತೊಮ್ಮೆ ಭಾರೀ ವಿವಾದವನ್ನು ಹುಟ್ಟುಹಾಕಿದ್ದಾರೆ. ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಮತ್ತು 'ದಾಖಲೆಗಳ ಸರದಾರ' ವಿರಾಟ್ ಕೊಹ್ಲಿ ವಿರುದ್ಧ ಯುವಿ ತಂದೆ ಗಂಭೀರ ಆರೋಪಗಳನ್ನು ಮಾಡಿರುವುದು ಸದ್ಯ ಜಾಲತಾಣಗಳಲ್ಲಿ ವ್ಯಾಪಕ ಟೀಕೆಗೆ ಗುರಿಯಾಗಿದೆ.

ಇತ್ತೀಚೆಗಷ್ಟೇ ಧೋನಿ ಅವರ ಬಗ್ಗೆ ಮಾಜಿ ವೇಗಿ ಇರ್ಫಾನ್ ಪಠಾಣ್ ಹೇಳಿಕೆಯ ಹಳೆಯ ವಿಡಿಯೋವೊಂದು ಜಾಲತಾಣಗಳಲ್ಲಿ ದೊಡ್ಡ ವಿವಾದವನ್ನೇ ಹುಟ್ಟುಹಾಕಿದ್ದು, ಹಲವು ವಿಚಾರಗಳನ್ನು ಪ್ರಶ್ನಿಸುವಂತೆ ಮಾಡಿದೆ. ಇರ್ಫಾನ್​ರ ಸ್ಫೋಟಕ ಹೇಳಿಕೆ ನೇರವಾಗಿ ಧೋನಿ ಅವರತ್ತ ಬೆಟ್ಟು ಮಾಡಿ ತೋರಿಸಿರುವುದು ಹಲವರ ಅಸಮಾಧಾನಕ್ಕೆ ಕಾರಣವಾಗಿದೆ. ಸದ್ಯ ಇದೇ ವಿಚಾರವನ್ನು ಮುಂದಿಟ್ಟು ಕಿಡಿಕಾರಿರುವ ಯುವಿ ತಂದೆ, ಮತ್ತೊಮ್ಮೆ ಧೋನಿ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

ತಮ್ಮ ಕುರ್ಚಿಗೆ ಕುತ್ತು!

"ಮಹೇಂದ್ರ ಸಿಂಗ್ ಧೋನಿ ಮತ್ತು ವಿರಾಟ್​ ಕೊಹ್ಲಿಗೆ ಯುವಿ ಬಗ್ಗೆ ಭಯವಿತ್ತು. ಯುವಿ ದೇವರು ಸೃಷ್ಟಿಸಿದ ಶ್ರೇಷ್ಠ ಆಟಗಾರ. ಶ್ರೇಷ್ಠ ಆಟಗಾರರಲ್ಲಿ ಶ್ರೇಷ್ಠ. ಧೋನಿಯಿಂದ ಹಿಡಿದು ಬಹುತೇಕ ಆಟಗಾರರು ಯುವರಾಜ್ ಬೆಳವಣಿಗೆ ಕಂಡು ಹೆದರುತ್ತಿದ್ದರು. ಅವನ ಆಟದ ವೈಖರಿಯಿಂದ ತಮ್ಮ ಕುರ್ಚಿಗೆ ಕುತ್ತು ಬರಲಿದೆ ಎಂಬ ಆತಂಕ ಅವರಲ್ಲಿ ಕಾಡುತ್ತಿತ್ತು" ಎಂದು ಯೋಗರಾಜ್ ಆರೋಪಿಸಿದ್ದಾರೆ.

'ಇನ್‌ಸೈಡ್ ಸ್ಪೋರ್ಟ್‌' ಸಂದರ್ಶನದಲ್ಲಿ ಮಾತನಾಡಿದ ಯೋಗರಾಜ್ ಸಿಂಗ್, "ಕ್ರಿಕೆಟ್ ಜಗತ್ತಿನಲ್ಲಿ ನನ್ನ ಮಗನಿಗೆ ಸಚಿನ್ ತೆಂಡೂಲ್ಕರ್ ಹೊರತುಪಡಿಸಿ ಇನ್ಯಾರು ಒಳ್ಳೆಯ ಸ್ನೇಹಿತರಿರಲಿಲ್ಲ. ಧೋನಿ ಮತ್ತು ಕೊಹ್ಲಿ ಭಯದಿಂದಲೇ ತಮ್ಮ ಮಗನ ವೃತ್ತಿಜೀವನವನ್ನು ಕೊನೆಗೊಳಿಸಿದರು" ಎಂದು ಭಾವುಕರಾಗಿ ಮಾತನಾಡಿದ್ದಾರೆ. ಯುವಿ ತಂದೆ ಧೋನಿ ವಿರುದ್ಧ ಆರೋಪಿಸುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆಯೂ ಹಲವಾರು ಬಾರಿ ಮಾಜಿ ಕ್ಯಾಪ್ಟನ್ ವಿರುದ್ಧ ಯೋಗರಾಜ್ ಸಿಂಗ್, ಗಂಭೀರ ಆರೋಪಗಳನ್ನೇ ಹೊರಿಸಿದ್ದಾರೆ.

ಓರ್ವ ಶ್ರೇಷ್ಠ ಆಲ್‌ರೌಂಡರ್

ಎಡಗೈ ಬ್ಯಾಟ್ಸ್‌ಮನ್ ಹಾಗೂ ಸ್ಪಿನ್ನರ್​ ಆಗಿದ್ದ ಯುವರಾಜ್ ಸಿಂಗ್, 2000ರಿಂದ 2017 ರವರೆಗೆ ಅಂತರರಾಷ್ಟ್ರೀಯ ಕ್ರಿಕೆಟ್​ನಲ್ಲಿ ತಮ್ಮ ಅದ್ಭುತ ಇನ್ನಿಂಗ್ಸ್​ ಪ್ರದರ್ಶಿಸಿದ ಸ್ಟಾರ್​ ಆಲ್​ರೌಂಡರ್​. ಭಾರತ ಪರ 40 ಟೆಸ್ಟ್‌ಗಳಲ್ಲಿ 1,900 ರನ್, 304 ಏಕದಿನ ಪಂದ್ಯಗಳಲ್ಲಿ 8,701 ರನ್ ಮತ್ತು 58 ಟಿ20 ಪಂದ್ಯಗಳಲ್ಲಿ 1,177 ರನ್ ದಾಖಲಿಸಿದ್ದಾರೆ. ಟೆಸ್ಟ್‌ ಕ್ರಿಕೆಟ್​ನಲ್ಲಿ 9, ಏಕದಿನ ಪಂದ್ಯಗಳಲ್ಲಿ 111 ಮತ್ತು ಟಿ20ನಲ್ಲಿ 28 ವಿಕೆಟ್‌ಗಳನ್ನು ಬೌಲರ್ ಆಗಿ ಪಡೆದಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net