

ನಾಗ್ಪುರ: ಕಳೆದ 10 ದಿನಗಳಿಂದ ನಾಪತ್ತೆಯಾಗಿದ್ದ ಮಹಾರಾಷ್ಟ್ರ ಬಿಜೆಪಿ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷೆ ಸನಾ ಖಾನ್ರನ್ನು ಅವರ ಪತಿ ಅಮಿತ್ ಸಾಹು ಕೊಲೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಮಧ್ಯಪ್ರದೇಶದ ಜಬಲ್ಪುರದಲ್ಲಿ ಕೊಲೆ ನಡೆದಿದ್ದು, ಅವರ ಮೃತದೇಹಕ್ಕಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.
ಸನಾ ಖಾನ್ ಹಾಗೂ ಅಮಿತ್ ಆರು ತಿಂಗಳ ಹಿಂದೆ ವಿವಾಹವಾಗಿದ್ದರು ಎಂದು ತಿಳಿದು ಬಂದಿದೆ. ಹಣಕಾಸು ವಿಚಾರವಾಗಿ ದಂಪತಿಗಳ ನಡುವೆ ವೈಮನಸ್ಸು ಇದ್ದ ಕಾರಣ ಕೊಲೆ ನಡೆದಿರಬಹುದು ಎಂದು ಶಂಕಿಸಲಾಗಿದೆ. ಪ್ರಕರಣ ಸಂಬಂಧ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.
ಪತಿಯನ್ನು ಭೇಟಿ ಮಾಡಿಕೊಂಡು ಬರುತ್ತೇನೆಂದು ಸನಾ ಆಗಸ್ಟ್ 2ರಂದು ಮಧ್ಯಪ್ರದೇಶದ ಜಬಲ್ಪುರಕ್ಕೆ ತೆರಳಿದ್ದರು. ಮೂರು ದಿನಗಳಾದರು ಮಗಳು ಮೊಬೈಲ್ ಕರೆ ಸ್ವೀಕರಿಸದೆ ಇದ್ದಾಗ ಭಯಗೊಂಡ ಆಕೆಯ ಪೋಷಕರು ನಾಗ್ಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಅಧಿಕಾರಿಗಳು ಜಬಲ್ಪುರ ಪೊಲೀಸರಿಗೆ ವಿಷಯ ತಿಳಿಸಿ ಜಂಟಿ ಕಾರ್ಯಾಚರಣೆ ಆರಂಭಿಸಿದ್ದಾರೆ.
ಸನಾ ಖಾನ್ ಪತ್ತೆಗಾಗಿ ವಿಶೇಷ ತಂಡ ರಚಿಸಿದ ಪೊಲೀಸರು ಎಷ್ಟೇ ಪ್ರಯತ್ನಿಸಿದರೂ ಮಹಿಳೆಯನ್ನೂ ಪತ್ತೆ ಮಾಡಲು ಸಾಧ್ಯವಾಗಿರಲಿಲ್ಲ. ಸಂಶಯದ ಮೇಲೆ ಆಕೆಯ ಪತಿಯನ್ನೂ ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದಾಗ ಆರೋಪಿ ಆಗಸ್ಟ್ 2ರಂದು ಕೊಲೆ ಮಾಡಿ ಆಕೆಯ ಮೃತದೇಹವನ್ನೂ ಜಬಲ್ಪುರದಿಂದ 45 ಕಿಲೋಮೀಟರ್ ದೂರದಲ್ಲಿರುವ ಹಿರಾನ್ ನದಿಗೆ ಎಸೆದಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ. ಸನಾ ಖಾನ್ರ ಮೃತದೇಹ ಇನ್ನೂ ಸಹ ಪತ್ತೆಯಾಗಿಲ್ಲ ಎಂದು ತಿಳಿದು ಬಂದಿದೆ.
ಮದುವೆಯಾಗಿ ಆರು ತಿಂಗಳೂ ಕಳದರೂ ಸಹ ಸನಾ ತನ್ನ ತಾಯಿಯ ಮನೆಯಲ್ಲಿಯೇ ಉಳಿದಿದ್ದಳು. ಆರೋಪಿ ಅಮಿತ್ ಜಬಲ್ಪುರದಲ್ಲಿ ವಾಸವಿದ್ದ. ಇದಲ್ಲದೆ ದಂಪತಿಗಳಿಬ್ಬರ ನಡುವೆ ಹಣಕಾಸು ವಿಚಾರವಾಗಿ ಜಗಳವಾಗುತ್ತಿತ್ತು ಎಂದು ತಿಳಿದು ಬಂದಿದೆ. ಅದರಂತೆ ಆಗಸ್ಟ್ 2ರಂದು ದಂಪತಿಗಳ ನಡುವೆ ಇದೇ ವಿಚಾರಕ್ಕೆ ಗಲಾಟೆಯಾಗಿದ್ದು, ಆರೋಪಿಯೂ ಸಿಟ್ಟಿನಿಂದ ಆಕೆಯನ್ನು ಕೊಲೆ ಮಾಡಿ ಬಳಿಕ ಮೃತದೇಹವನ್ನು ಹಿರಾನ್ ನದಿಗೆ ಎಸೆದಿರುವುದಾಗಿ ವಿಚಾರಣೆ ವೇಳೆ ಹೇಳಿರುವುದಾಗಿ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.