

ಮೈಸೂರು: ನಾವು ಹಿಂದೆ ಬಿಜೆಪಿಯವರ ವಿರುದ್ಧ ಮಾಡಿರುವ ಆರೋಪಗಳನ್ನು ಸಾಬೀತುಪಡಿಸಬೇಕಿದೆ. ಹೀಗಿರುವಾಗ ಗುತ್ತಿಗೆದಾರರ ಬಿಲ್ ಪಾವತಿಗೆ ಆತುರಪಟ್ಟರೆ ಹೇಗೆ, ತನಿಖೆಯಾಗದೆ ಬಾಕಿ ಮೊತ್ತವನ್ನು ಪಾವತಿಸಲಾಗದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಸಿಎಂ ಗುತ್ತಿಗೆದಾರರಿಂದ ಶೇ. 40ರಷ್ಟು ಕಮಿಷನ್ ಪಡೆದಿರುವ ಬಿಜೆಪಿಯವರಿಗೆ ನಮ್ಮ ವಿರುದ್ಧ ಹೋರಾಟ ನಡೆಸುವ ನೈತಿಕತೆ ಇಲ್ಲ. ಅವರು ಮಾಡುತ್ತಿರುವ ಆರೋಪಗಳೆಲ್ಲಾ ಸುಳ್ಳು ಎಂದಿದ್ದಾರೆ.
ಶೇ. 40ರಷ್ಟು ಕಮಿಷನ್ ಬಗ್ಗೆ ತನಿಖೆ ನಡೆಸದೆ ಗುತ್ತಿಗೆದಾರರಿಗೆ ಹೇಗೆ ಬಿಲ್ ಪಾವತಿಸಲು ಸಾಧ್ಯ. ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಎಸ್ಐಟಿಗೆ ಸೂಚಿಸಿದ್ದೇನೆ. ಪ್ರಾಮಾಣಿಕವಾಗಿ ಕೆಲಸ ಮಾಡಿರುವವರಿಗೆ ಯಾವುದೇ ಕಾರಣಕ್ಕೂ ತೊಂದರೆಯಾಗುವುದಿಲ್ಲ. ಒಂದು ವೇಳೆ ಭ್ರಷ್ಟಾಚಾರ ಹಾಗೂ ಕಾಮಗಾರಿಗಳಲ್ಲಿ ಲೋಪ ಎಸಗಿರುವವರಿಗೆ ತೊಂದರೆಯಾಗುತ್ತದೆ ಎಂದು ತಿಳಿಸಿದ್ದಾರೆ.
ಕಾವೇರಿ ನದಿ ನೀರಿನ ಕುರಿತು ತಮಿಳುನಾಡು ಸರ್ಕಾರ ತಗಾದೆ ಪ್ರಶ್ನಗೆ ಉತ್ತರಿಸಿದ ಸಿಎಂ ಈ ಬಾರಿ ನಮ್ಮಲ್ಲಿ ಮಳೆ ಕಡಿಮೆಯಾಗಿರುವುದರಿಂದ ಜೂನ್ ತಿಂಗಳಿಗೆ ನಿಗದಿಪಡಿಸಿದ ನೀರನ್ನು ನಾವು ಬಿಟ್ಟಿಲ್ಲ. ಮಳೆ ಕಡಿಮೆಯಾಗಿರುವುದರಿಂದ ನಮ್ಮಲ್ಲಿ ಉಂಟಾಗಿರುವ ಸಂಕಷ್ಟದ ಪರಿಸ್ಥಿತಿ ಕುರಿತು ತಮಿಳುನಾಡು ಸರ್ಕಾರ ಅರಿಯಬೇಕಿದೆ.
ಈ ಬಾರಿ ಸರಿಯಾಗಿ ಮಳೆಯಾಗದೆ ನಮ್ಮಲ್ಲಿ ತೊಂದರೆಯಾಗಿದೆ. ಕೇರಳ ಹಾಗೂ ಕೊಡಗಿನ ಭಾಗದಲ್ಲಿ ಮಳೆ ಕಡಿಮೆಯಾಗಿದ್ದು, ನಮ್ಮ ಜಲಾಶಯಗಳಿಗೆ ಒಳಹರಿವು ಕುಂಠಿತಗೊಂಡಿದೆ. ಹೆಚ್ಚುವರಿ ನೀರು ಬಂದಾಗಲೆಲ್ಲಾ ತಮಿಳುನಾಡಿಗೆ ನಾವು ಹರಿಸಿದ್ದೇವೆ. ಈ ಬಾರಿ ಕೊಡಲಾಗಿಲ್ಲ. ನಮ್ಮ ಪರಿಸ್ಥಿತಿ ಹಾಗೂ ಬೆಳೆಯನ್ನೂ ನಾವು ಮೊದಲು ನೋಡಬೇಕಿದೆ.
ನಿಗಮ ಮಂಡಳಿಗಳಿಗೆ ಅಧ್ಯಕ್ಷರನ್ನೂ ನೇಮಕ ಮಾಡುವ ಕುರಿತು ಪ್ರತಿಕ್ರಿಯಿಸಿ ಈ ಸಂಬಂಧ ಸಮಿತಿ ಒಂದನ್ನೂ ರಚಿಸಲಾಗಿದ್ದು, ಅವರು ನೀಡುವ ವರದಿ ಆಧರಿಸಿ ಮುಂದಿನ ಕ್ರಮ ಕೈಗೊಳ್ಳುತ್ತೇವೆ. ಶಾಸಕರಿಗೂ ನಿಗಮ ಮಂಡಳಿಗಳಲ್ಲಿ ಸ್ಥಾನ ಕೊಡಬೇಕಿದೆ. ಯಾವ ಅನುಪಾತದಲ್ಲಿ ಕೊಡಬೇಕಿದೆ ಎಂಬುದರ ಕುರಿತು ಸಮಿತಿ ನೀಡುವ ವರದಿ ಆಧರಿಸಿ ನಿರ್ಧರಿಸುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.