ಉತ್ತರ ಕರ್ನಾಟಕ ಅಭಿವೃದ್ಧಿಗೆ ನೂರಾರು ಬೇಡಿಕೆ!

ವಿಜಯವಾಣಿ (6)
Published on

ಬೆಳಗಾವಿಯಲ್ಲಿ ರಾಜ್ಯ ವಿಧಾನಮಂಡಲದ 13ನೇ ಅಧಿವೇಶನ ನಡೆಯುತ್ತಿದೆ. ಆದರೆ, ಉತ್ತರ ಕರ್ನಾಟಕಕ್ಕೆ ನೀರಾವರಿ, ಸಂಪರ್ಕ, ಆರೋಗ್ಯ, ಪ್ರವಾಸೋದ್ಯಮ ಅಭಿವೃದ್ಧಿ, ಶಿಕ್ಷಣ, ಉದ್ಯೋಗ ಕ್ಷೇತ್ರಗಳಲ್ಲಿ ಆಗಿರುವ ಪ್ರಗತಿ ಅಷ್ಟಕ್ಕಷ್ಟೇ. ಈ ಭಾಗದಲ್ಲಿ ಸಾಕಷ್ಟು ಅಭಿವೃದ್ಧಿ ಮಾಡಲಾಗಿದೆ ಎಂಬ ಸಮರ್ಥನೆಯನ್ನು ಸರ್ಕಾರಗಳು ನೀಡುತ್ತಲೇ ಬಂದಿವೆ. ಈ ಭಾಗದ ಜನ ಮಾತ್ರ ಅಭಿವೃದ್ಧಿ ಕಾರ್ಯಗಳು ನಮಗೆ ಸಮಾಧಾನ ತಂದಿಲ್ಲ. ಇನ್ನೂ ಹಲವು ಬಹುಮುಖ್ಯ ಯೋಜನೆಗಳು ಜಾರಿಯಾಗ ಬೇಕಿವೆ. ಈ ಬಾರಿಯ ಅಧಿವೇಶನದಲ್ಲಾದರೂ ಒಂದಷ್ಟು ವಿಷಯ ಚರ್ಚೆಗೊಳಪಟ್ಟು, ನಿರ್ಣಯವಾಗಬೇಕು ಎಂದು ಒತ್ತಾಯಿಸಿದ್ದಾರೆ. ಈ ನಿಟ್ಟಿನಲ್ಲಿ ‘ವಿಜಯವಾಣಿ’ ಉತ್ತರ ಕರ್ನಾಟಕ ಭಾಗದ ಜಿಲ್ಲೆಗಳಲ್ಲಿ ಅನುಷ್ಠಾನಗೊಳ್ಳಬೇಕಾದ, ಅಧಿವೇಶನದಲ್ಲಿ ಜನಪ್ರತಿನಿಧಿಗಳು ರ್ಚಚಿಸಲೇಬೇಕಾದ ವಿಷಯಗಳನ್ನು ಇಲ್ಲಿ ಪ್ರಕಟಿಸಿದೆ.

ಹಾವೇರಿ

ರಾಣೆಬೆನ್ನೂರಿನಲ್ಲಿ ಬೀಜೋತ್ಪಾದನೆಗೆ ಬಹಳಷ್ಟು ಅನುಕೂಲ ವಾತಾವರಣವಿದ್ದರೂ ಹಾಗೂ ಏಷ್ಯಾ ಖಂಡದಲ್ಲಿಯೇ ಹೆಸರುವಾಸಿಯಾಗಿದ್ದರೂ ಒಂದೇ ಒಂದು ಕಂಪನಿ ಸ್ಥಾಪನೆಯಾಗಿಲ್ಲ. ತುಂಗಾ ಮೇಲ್ದಂಡೆ ಯೋಜನೆ, ಏತ ನೀರಾವರಿ ಕಾಮಗಾರಿಗಳು ಹೆಸರಿಗೆ ಮಾತ್ರ ಎನ್ನುವಂತಿವೆ. ಮೇಜ್ ಪಾರ್ಕ್, ಚಿಲ್ಲಿ ಪಾರ್ಕ್, ಸಾಂಬಾರ್ ಪದಾರ್ಥಗಳ ಪಾರ್ಕ್ ಯೋಜನೆ ಘೋಷಣೆ ಆಗಿವೆ. ಆದರೆ, ಒಂದೂ ಸ್ಥಾಪನೆಯಾಗಿಲ್ಲ. ಜಿಲ್ಲೆಯಲ್ಲಿ ತುಂಗಭದ್ರಾ, ಕುಮದ್ವತಿ, ವರದಾ, ಧರ್ವ ನದಿಗಳಿವೆ. ನೀರಿನ ಸೌಕರ್ಯವಿದ್ದರೂ ನೀರಾವರಿ ಪ್ರದೇಶ ಅಭಿವೃದ್ಧಿಯಾಗಿಲ್ಲ. ಘೊಷಿತ ಏತ ನೀರಾವರಿ ಯೋಜನೆಗಳು ಅನುದಾನದ ಕೊರತೆಯಿಂದ ಕುಂಠಿತಗೊಂಡಿವೆ. ಬ್ಯಾಡಗಿಯಲ್ಲಿ ಕೈಗಾರಿಕೆ ಹಬ್ ಸ್ಥಾಪನೆ ಕಾರ್ಯರೂಪಕ್ಕೆ ಬಂದಿಲ್ಲ. ಹಾವೇರಿ ಮೆಡಿಕಲ್ ಕಾಲೇಜ್​ಗೆ ಉಪನ್ಯಾಸಕರ, ಉಪಕರಣಗಳ ಕೊರತೆ ನೀಗಿಸಬೇಕು. ವಿವಿ ಘೋಷಣೆಗೆ ಸೀಮಿತವಾಗಿದ್ದು, ಸೌಲಭ್ಯಗಳು ದೊರೆಯುತ್ತಿಲ್ಲ.

ಧಾರವಾಡ

ಹುಬ್ಬಳ್ಳಿ-ಅಂಕೋಲಾ ರೈಲು ಮಾರ್ಗ ವಿಳಂಬ. ಹುಬ್ಬಳ್ಳಿ- ಧಾರವಾಡ ಬಿಆರ್​ಟಿಎಸ್ ಅವಾಂತರ. ಧಾರವಾಡಕ್ಕೆ ಪ್ರತ್ಯೇಕ ಮಹಾ ನಗರ ಪಾಲಿಕೆ ರಚನೆ. ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಗೆ ವಿಶೇಷ ಅನುದಾನ ಬಿಡುಗಡೆ.  ಹುಬ್ಬಳ್ಳಿ ಕೆಎಂಸಿಆರ್​ಸಿ (ಕಿಮ್ಸ್​) ಹೆಚ್ಚುವರಿ ಅನುದಾನಕ್ಕೆ ಬೇಡಿಕೆ.

ಬೆಳಗಾವಿ

ಎರಡು ದಶಕದಿಂದ ನನೆಗುದಿಗೆ ಬಿದ್ದಿರುವ ಬೆಳಗಾವಿ ಜಿಲ್ಲಾ ವಿಭಜನೆ. ಘಟಪ್ರಭಾ, ಮಲಪ್ರಭಾ ಎಡ ಮತ್ತು ಬಲ ದಂಡೆ ನೀರಾವರಿ ಯೋಜನೆಗಳ ಅನುಷ್ಠಾನ. ಅರ್ಧಕ್ಕೆ ಮೊಟಕುಗೊಂಡಿರುವ ಏತ ನೀರಾವರಿ ಯೋಜನೆ (ಪ್ರಮುಖವಾಗಿ ಕುಡಿವ ನೀರಿನ ಯೋಜನೆ). ಹೊಸ ತಾಲೂಕುಗಳಲ್ಲಿ ಇಲಾಖೆಗಳ ಕಚೇರಿಗಳ ಸ್ಥಾಪನೆ. ತಾಲೂಕು ಮಟ್ಟದಲ್ಲಿ ಸರ್ಕಾರಿ ಇಂಜಿನಿಯರಿಂಗ್ ಪದವಿ ಕಾಲೇಜು ಸ್ಥಾಪನೆ. ಜಿಲ್ಲಾ ರಸ್ತೆಗಳನ್ನು ಹೆದ್ದಾರಿಗಳಾಗಿ ಮೇಲ್ದರ್ಜೆಗೇರಿಸುವುದು. ಬೆಂಗಳೂರು-ಪುಣೆ ಮಧ್ಯೆ ಭಾಗದಲ್ಲಿರುವ ಬೆಳಗಾವಿಯಲ್ಲಿ ಕೈಗಾರಿಕೆಗಳ ಅಭಿವೃದ್ಧಿಗೆ ವಿಶೇಷ ಒತ್ತು ಕೊಟ್ಟು, ಉದ್ಯಮ ಬಲಗೊಳಿಸಬೇಕಿದೆ. ಗುಡಿ ಕೈಗಾರಿಕೆಗಳಿಗೆ ಉತ್ತೇಜನ ಬೇಕಿದೆ. ಕಳಸಾ ಬಂಡೂರಿ, ಕೃಷ್ಣಾ ಮೇಲ್ದಂಡೆ ಯೋಜನೆ.  ಸುವರ್ಣ ವಿಧಾನಸೌಧಕ್ಕೆ ರಾಜ್ಯಮಟ್ಟದ ಕಚೇರಿಗಳ ಸ್ಥಳಾಂತರ. ಖಾನಾಪುರ ತಾಲೂಕಿನ ಕಾಡಂಚಿನ ಬಹುತೇಕ ಗ್ರಾಮಗಳಿಗೆ ರಸ್ತೆ, ಬಸ್, ವಿದ್ಯುತ್ ಸೌಕರ್ಯ. ಕೊಪ್ಪಳ ತುಂಗಭದ್ರಾ ಜಲಾಶಯದಲ್ಲಿರುವ ಹೂಳಿಗೆ ಪರ್ಯಾಯ ಯಾವಾಗ? ಪ್ರಸ್ತಾವಕ್ಕಷ್ಟೇ ಸೀಮಿತವಾದ ನವಲಿ ಸಮಾನಾಂತರ ಜಲಾಶಯ.ಅಂಜನಾದ್ರಿ, ಆನೆಗೊಂದಿ, ಹುಲಿಗೆಮ್ಮ, ಇಟಗಿ ಮಹಾದೇವ ದೇವಾಲಯ, ಕುಮಾರ ರಾಮಬೆಟ್ಟ ಪ್ರವಾಸೋದ್ಯಮ ಪ್ರದೇಶಗಳ ಅಭಿವೃದ್ಧಿಗೆ ಕೈಗೊಳ್ಳಬೇಕಾದ ಅನುದಾನ, ಯೋಜನೆ. ಕಳೆದ 15 ವರ್ಷಗಳಿಂದ ಪ್ರಸ್ತಾವ ಹಂತದಲ್ಲೇ ರೈಸ್​ಟೆಕ್ನಾಲಜಿ ಪಾರ್ಕ್. ಕಾರಟಗಿಯಲ್ಲಿ ಆರಂಭವಾಗಬೇಕಾದ ಈ ಪಾರ್ಕ್​ಗೆ ಇನ್ನೆಷ್ಟು ವರ್ಷ ಕಾಯಬೇಕು? ಜಿಲ್ಲೆಯ ಕನಕಗಿರಿಯಲ್ಲಿ ಬಹುಕಾಲದ ನಿರೀಕ್ಷೆಯಾದ ತೋಟಗಾರಿಕೆ ಪಾರ್ಕ್ ಈವರೆಗೆ ಶುರುವಾಗಿಲ್ಲವೇಕೆ?

ಯಾದಗಿರಿ

ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಬ್ಲಡ್​ಬ್ಯಾಂಕ್ ಇಲ್ಲ. ಗುರುಮಠಕಲ್ ತಾಲೂಕಿನ ಕಡೇಚೂರು ಕೈಗಾರಿಕೆ ಪ್ರದೇಶದಲ್ಲಿ ಸ್ವಾಧೀನಪಡಿಸಿಕೊಂಡ 2200 ಎಕರೆಯಲ್ಲಿ ಕೈಗಾರಿಕಾ ವಲಯ ಆರಂಭವಾಗಿಲ್ಲ. ಪ್ರಾಥಮಿಕ, ಪ್ರೌಢ ಶಾಲೆಗಳಲ್ಲಿ 3500ಕ್ಕೂ ಹೆಚ್ಚು ಶಿಕ್ಷಕರ ಹುದ್ದೆ ಖಾಲಿ. ಪ್ರವಾಸೋದ್ಯಮ ಅಭಿವೃದ್ಧಿಗಿಲ್ಲ ಕಿಂಚಿತ್ತೂ ಗಮನ. ಆಯುಷ್ ಇಲಾಖೆ ಜಾಗ ಇದ್ದರೂ ಕಟ್ಟಡ ನಿರ್ವಣಕ್ಕಿಲ್ಲ ಅನುದಾನ.

ಬೀದರ್

ಜಿಲ್ಲಾಡಳಿತ ಭವನ ನಿರ್ಮಾಣ ನನೆಗುದಿಗೆ. ಕಾರಂಜಾ ಸಂತ್ರಸ್ತರಿಗೆ ಸಿಗದ ವೈಜ್ಞಾನಿಕ ಪರಿಹಾರ. ಬಸವಕಲ್ಯಾಣದಲ್ಲಿ ವಚನ ವಿವಿ ಸ್ಥಾಪನೆ.

ಉತ್ತರ ಕನ್ನಡ

ಜಿಲ್ಲೆಗೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ. ಅರಣ್ಯ ಅತಿಕ್ರಮಣ ಸಕ್ರಮ ವಿಚಾರ.

ವಿಜಯಪುರ

ಹಮಾವಾನ ವೈಪರಿತ್ಯ ಹಾಗೂ ಕಳಪೆ ಬಿತ್ತನೆ ಬೀಜ ವಿತರಣೆಯಿಂದ ತೊಗರಿ ಬೆಳೆ ಹಾನಿಯಾಗಿದ್ದು, ಅಂದಾಜು ಐದು ಸಾವಿರ ಕೋಟಿ ರೂ. ಮೌಲ್ಯದ ಬೆಳೆ ನಾಶಕ್ಕೆ ಸಿಗದ ಪರಿಹಾರ.ವಿಜಯಪುರ ವಿಮಾನ ನಿಲ್ದಾಣ ಕಾಮಗಾರಿ ಉದ್ಘಾಟನೆಗೆ ಮೀನಮೇಷ. ಈವರೆಗೆ ಸ್ಥಾಪನೆಯಾಗದ ವಿಜಯಪುರ ಜಿಲ್ಲಾ ಸರ್ಕಾರಿ ವೈದ್ಯಕೀಯ ಕಾಲೇಜ್. ರಾಜ್ಯದ ಏಕೈಕ ಮಹಿಳಾ ವಿವಿ ಖ್ಯಾತಿಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯಕ್ಕೆ ಕಾಯಕಲ್ಪ ನೀಡುವುದು, ಅನುದಾನ, ಸಿಬ್ಬಂದಿ ಕೊರತೆ ನೀಗಿಸುವುದು. ಬಸವನಬಾಗೇವಾಡಿ ಪ್ರತ್ಯೇಕ ಅಭಿವೃದ್ಧಿ ಪ್ರಾಧಿಕಾರ ರಚನೆಯಾದರೂ ವಚನಗಳ ಸಂಶೋಧನೆಗಾಗಿ ವಚನ ವಿಶ್ವವಿದ್ಯಾಲಯ ಸ್ಥಾಪಿಸುವ ಬೇಡಿಕೆ ಈಡೇರಿಲ್ಲ

ಗದಗ

ಮಹದಾಯಿ ನೀರಾವರಿ ಯೋಜನೆ (ಕಳಸಾ-ಬಂಡೂರಿ) ನಾಲಾ ಯೋಜನೆ.

ಗದಗ- ವಾಡಿ ರೈಲು ಮಾರ್ಗ ವಿಳಂಬ.

ಗದಗ- ಹರಪನಹಳ್ಳಿ ಮಾರ್ಗ ವಿಳಂಬ.

ಗದಗನಲ್ಲಿ ಕೈಗಾರಿಕೆ ಸ್ಥಾಪನೆ ನನೆಗುದಿಗೆ.

ಕಪ್ಪತಗುಡ್ಡದಲ್ಲಿ ಗಣಿಗಾರಿಕೆ ತಡೆಯಬೇಕು.

ಲಕ್ಷ್ಮೇಶ್ವರದಲ್ಲಿ ಕುಡಿಯುವ ನೀರಿನ ಸಮಸ್ಯೆ.

ಸಿಂಗಟಾಲೂರು ಬ್ಯಾರೇಜ್ ಎತ್ತರ ನನೆಗುದಿಗೆ.

ರಾಯಚೂರು

ರಾಯಚೂರಿನಲ್ಲಿ ಮೆಗಾ ಟೆಕ್ಸ್​ಟೈಲ್ ಪಾರ್ಕ್ ನಿರ್ಮಾಣಕ್ಕೆ ಎಲ್ಲ ಸೌಲಭ್ಯಗಳಿದ್ದರೂ ಆ ಬಗ್ಗೆ ಪ್ರಸ್ತಾಪವಿಲ್ಲವೇಕೆ? ತೆಲಂಗಾಣ, ಆಂಧ್ರ ಗಡಿನಾಡು ಪ್ರಾಂತ್ಯವೆಂದು ಘೊಷಣೆಯಾದಲ್ಲಿ ಅಲ್ಲಿ 10ನೇ ತರಗತಿ ಓದಿದ ಕನ್ನಡ ಶಾಲೆ ಮಕ್ಕಳು ಕರ್ನಾಟಕಕ್ಕೆ ಬಂದು ಹೆಚ್ಚಿನ ವಿದ್ಯಾಭ್ಯಾಸ ಸಾಧ್ಯ. ಈ ಬಗ್ಗೆ ಚರ್ಚೆ ಅಗತ್ಯ. ರಾಯಚೂರು ಜಿಲ್ಲಾಡಳಿತ ಭವನ ನಿರ್ಮಾಣವಾಗಿ ವರ್ಷಗಳೇ ಕಳೆದಿವೆ. ಉದ್ಘಾಟನೆಗೇಕೆ ಇನ್ನು ಕಾಲ ಕೂಡಿಬಂದಿಲ್ಲ? ಪೌಷ್ಟಿಕತೆ, ಶಿಕ್ಷಣ, ಅಭಿವೃದ್ಧಿ ಯಥಾಸ್ಥಿತಿಯಲ್ಲಿ. ಆರ್​ಟಿಪಿಎಸ್-ವೈಟಿಪಿಎಸ್ ಗುತ್ತಿಗೆ ಕಾರ್ವಿುಕರಿಗೆ ಸರಿಯಾಗಿ ಸಿಗದ ವೇತನ.

ಬಳ್ಳಾರಿ

ಬಳ್ಳಾರಿ ಜಿಲ್ಲೆಯಲ್ಲಿ ಐದು ಸಾವಿರ ಕೋಟಿ ರೂ. ವೆಚ್ಚದಲ್ಲಿ ಜೀನ್ಸ್ ಅಪರೆಲ್ ಪಾರ್ಕ್ ನಿರ್ಮಾಣ ಈವರೆಗೂ ಆಗಿಲ್ಲವೇಕೆ? ಕಳೆದ 10 ವರ್ಷಗಳಿಂದ ಬಳ್ಳಾರಿಯಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಕಾಮಗಾರಿ ನಡೆಯುತ್ತಿದ್ದು, ಪೂರ್ಣಗೊಳ್ಳುವುದು ಯಾವಾಗ? ಬಳ್ಳಾರಿಯಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ, ವಿಮಾನ ನಿಲ್ದಾಣ ಹಾಗೂ ರಿಂಗ್ ರಸ್ತೆಯ ಬಗ್ಗೆ ಪ್ರಸ್ತಾಪ ಮಾಡುತ್ತಿರುವ ಜನಪ್ರತಿನಿಧಿಗಳು ಅದರ ಮುಂದಿನ ಹಂತಕ್ಕೆ ಹೋಗುತ್ತಿಲ್ಲವೇಕೆ? ಬಳ್ಳಾರಿಯಲ್ಲಿ ಮೆಣಸಿನಕಾಯಿ ಮಾರುಕಟ್ಟೆ ಸ್ಥಳ ಗುರುತಿಸುವಲ್ಲಿ ಕಾಲಹರಣವೇಕೆ?

ಬಾಗಲಕೋಟೆ

ಕೃಷ್ಣಾ ಮೇಲ್ದಂಡೆ ಯೋಜನೆ ಹಂತ-3 ಪೂರ್ಣಗೊಳಿಸುವುದು ಮತ್ತು ಚುನಾವಣೆ ಪೂರ್ವ ಕೃಷ್ಣಾ ಜಲಾಂದೋಲನ ನಡೆಸಿ ಕೃಷ್ಣೆಗಾಗಿ 75 ಸಾವಿರ ಕೋಟಿ ರೂ. ಅನುದಾನ ಮೀಸಲಿಡುವ ಸಂಕಲ್ಪ 2 ವರ್ಷ ಕಳೆದರೂ ಈಡೇರಿಲ್ಲ. ಅಂತಾರಾಷ್ಟ್ರೀಯವಾಗಿ ಖ್ಯಾತಿ ಹೊಂದಿರುವ ಬಾದಾಮಿ, ಪಟ್ಟದಕಲ್ಲು, ಐಹೊಳೆ ಐತಿಹಾಸಿಕ ತಾಣಗಳ ಜತೆಗೆ ಕೂಡಲಸಂಗಮ, ಮಹಾಕೂಟೇಶ್ವರ, ಶಿವಯೋಗಮಂದಿರ ಅಭಿವೃದ್ಧಿಗೆ ಗಮನ. ದೆಹಲಿಯ ಅಕ್ಷರಧಾಮ ಮಾದರಿಯಲ್ಲಿ ಕೂಡಲಸಂಗಮ ಅಭಿವೃದ್ಧಿಗೆ ಸಿದ್ದರಾಮಯ್ಯ ಸರ್ಕಾರದ ಮೊದಲ ಅವಧಿಯಲ್ಲಿ ಯೋಜನೆ ಸಿದ್ಧಪಡಿಸಿ ಅನುದಾನ ಬಿಡುಗಡೆ ಮಾಡಿದ್ದರೂ ಸಮರ್ಪಕವಾಗಿ ಕಾಮಗಾರಿ ನಡೆಯದೇ ಯೋಜನೆ ನನೆಗುದಿಗೆ. ಸಿದ್ದರಾಮಯ್ಯ ಸರ್ಕಾರದ ಮೊದಲ ಅವಧಿಯಲ್ಲಿ ಬಾಗಲಕೋಟೆಗೆ ಸರ್ಕಾರಿ ಮೆಡಿಕಲ್ ಕಾಲೇಜ್ ಮಂಜೂರಾಗಿ ಒಂದು ದಶಕವೇ ಕಳೆದಿದೆ. ಕಾಲೇಜ್ ಆರಂಭ ಯಾವಾಗ? ಬಜೆಟ್​ನಲ್ಲಿ ಜವಳಿ ಪಾರ್ಕ್ ಸ್ಥಾಪನೆ ಬಗ್ಗೆ ಪ್ರಸ್ತಾಪವಾದರೂ ಬೇಡಿಕೆ ಈಡೇರಿಲ್ಲ. ಕುಡಚಿ-ಬಾಗಲಕೋಟೆ ರೈಲ್ವೆ ಮಾರ್ಗ ನಿರ್ಮಾಣ ಕುಂಟುತ್ತ ಸಾಗಿದ್ದು, ಶೀಘ್ರದಲ್ಲಿ ಕಾಮಗಾರಿ ಮುಗಿಸಲು ಕ್ರಮ ಕೈಗೊಳ್ಳಬೇಕಿದೆ. ಅನುದಾನ ಕೊರತೆಯಿಂದ ಬಾಗಲಕೋಟೆ ತೋಟ ಗಾರಿಕೆ ವಿವಿಯಲ್ಲಿ ಉನ್ನತ ಸಂಶೋಧನೆಗಳು ನಡೆಯದೆ ತೋಟಗಾರಿಕೆ ಪ್ರದೇಶ ವಿಸ್ತರಣೆಗೂ ತೊಡಕು. ವಿವಿಗೆ ಬೇಕು ಅಗತ್ಯ ಅನುದಾನ. ನಿಧಾನಗತಿಯಲ್ಲಿ ಸಾಗಿರುವ ಸಸಾಲಟ್ಟಿ ಏತ ನೀರಾ ವರಿ ಯೋಜನೆ ಅನುಷ್ಠಾನ, ಬೀಳಗಿ ಏತನೀರಾವರಿ ಯೋಜನೆ ಅನುಷ್ಠಾನಕ್ಕೆ ಸಿಗದ ಅನುಮೋದನೆ.

ಕಲಬುರಗಿ

ಹೊನ್ನಕಿರಣಗಿ ಬಳಿ ಮೆಗಾ ಟೆಕ್ಸ್ ಟೈಲ್ ಪಾರ್ಕ್ ನನೆಗುದಿಗೆ. ನನಸಾಗದ ತಾಯಿ-ಮಕ್ಕಳ ಪ್ರತ್ಯೇಕ ಆಸ್ಪತ್ರೆ ಕನಸು. ಜಯದೇವ ಹೃದ್ರೋಗ ಆಸ್ಪತ್ರೆಗೆ ಇನ್ನೂ ಸಿಗದ ಉದ್ಘಾಟನೆಯ ಭಾಗ್ಯ. ಕರ್ನಾಟಕ ತೊಗರಿ ಅಭಿವೃದ್ಧಿ ಮಂಡಳಿ ಬಲಪಡಿಸಲು ಯೋಜನೆ. ಅಮರ್ಜಾ, ಬೆಣ್ಣೆತೊರಾ ಯೋಜನೆ ಮೂಲಕ ಹೊಲಗಳಿಗೆ ಹರಿಯದ ನೀರು, ನೂರಾರು ಕೋಟಿ ಆಪೋಷಣ. ಕಲಬುರಗಿ ನಗರದಲ್ಲಿ ದಶಕದಿಂದ ನಡೆದಿರುವ 24/7 ನೀರು ಸರಬರಾಜು ಕಾಮಗಾರಿಗೆ ಆಮೆವೇಗ. ಕಲಬುರಗಿಯಲ್ಲಿ ಭಾರಿ ವಾಹನ ಸಂಚಾರ ಪರಿಹಾರಕ್ಕೆ ಯೋಜಿಸಿದ್ದ ಫ್ಲೈಓವರ್ ಕಾಗದಕ್ಕೆ ಸೀಮಿತ. ಜೇವರ್ಗಿ ತಾಲೂಕು ಮಲ್ಲಾಬಾದ್ ಏತ ನೀರಾವರಿ ಯೋಜನೆ ತುರ್ತು ಕೈಗೆತ್ತಿಕೊಳ್ಳಬೇಕಿದೆ. ಪ್ರತಿ ಬೇಸಿಗೆಯಲ್ಲಿ ಕುಡಿಯುವ ನೀರಿನ ಗಂಭೀರ ಪರಿಸ್ಥಿತಿ ತಲೆದೋರುತ್ತಿದ್ದರೂ ಶಾಶ್ವತ ಪರಿಹಾರ ಸಾಧ್ಯವಾಗಿಲ್ಲ.

ವಿಜಯನಗರ

ವಿಜಯನಗರ ನೂತನ ಜಿಲ್ಲೆಯಾಗಿ ನಾಲ್ಕು ವರ್ಷ ಕಳೆದಿದ್ದು, ಜಿಲ್ಲಾ ಕೇಂದ್ರ ಸೇರಿ ತಾಲೂಕುಗಳ ಅಭಿವೃದ್ಧಿ ಇನ್ನೂ ಯಾವಾಗ? ದಕ್ಷಿಣದ ಕಾಶಿ, ಐತಿಹಾಸಿಕ ಸ್ಮಾರಕಗಳ ನಗರಿ ಎನಿಸಿಕೊಂಡಿರುವ ಪ್ರವಾಸಿ ತಾಣ ಹಂಪಿಯಲ್ಲಿ ಪ್ರವಾಸಿಗರಿಗೆ ಪೂರ್ಣಪ್ರಮಾಣದಲ್ಲಿ ಸಿಗುತ್ತಿಲ್ಲ ಮೂಲಸೌಕರ್ಯ. ಭರವಸೆಯಲ್ಲೇ ಉಳಿದ ಹಂಪಿಯ ಅಭಿವೃದ್ಧಿ. ಹೊಸಪೇಟೆ ರೈತರ ಪ್ರಮುಖ ಬೇಡಿಕೆ ಯಾದ ಸಕ್ಕರೆ ಕಾರ್ಖಾನೆ ಕನಸು ನನಸಾಗುವುದು ಯಾವಾಗ? ಹೊಸಪೇಟೆ ಭಾಗದ ರೈತರು ಹೆಚ್ಚಾಗಿ ಬಾಳೆ ಬೆಳೆಯುವುದರಿಂದ ಬಾಳೆ ಸಂಶೋಧನಾ ಕೇಂದ್ರ, ಕೃಷಿ ಕಾಲೇಜು ಸ್ಥಾಪನೆಯ ನಿರೀಕ್ಷೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net