

ವೃದ್ಧೆಯೂ, ವಯೋವೃದ್ಧೆಯೂ ಆದಂತಹ ಅನಸೂಯೆಯ ಹಿತನುಡಿಗಳನ್ನು ಸೀತೆಯು ಅತ್ಯಂತ ವಿನಯಂದ ಆಲಿಸಿ ಅನಸೂಯೆಯನ್ನು ಕುರಿತು ನಿನ್ನ ಉಪದೇಶವು ನನಗೆ ವಿವಾಹ ಸಮಯದಲ್ಲಿ ನನ್ನ ತಾಯಿಯಿಂದ ಹಾಗೂ ವನವಾಸಕ್ಕೆ ಹೊರಡುವ ಸಂದರ್ಭದಲ್ಲಿ ಅತ್ತಾದ ಕೌಸಲ್ಯಾದೇವಿಯಿಂದ ಮಾಡಲ್ಪಟ್ಟ ಉಪದೇಶವನ್ನು ಮತ್ತೊಮ್ಮೆ ಸ್ಮರಣೆಗೆ ತಂದುಕೊಳ್ಳುವಂತೆ ಭಾಸವಾಯಿತು ಎನ್ನುತ್ತಾಳೆ.
ಯಾರ ದರ್ಶನಮಾತ್ರದಿಂದಲೇ ಪತಿವ್ರತೆಯರು ಪರಮ ಪಾವಿತ್ರ್ಯವನ್ನು ಹೊಂದುತ್ತಾರೆಯೋ, ಯಾರ ಸ್ಮರಣೆಯಿಂದ ಸಮಸ್ತ ಸ್ತ್ರೀಕುಲಕ್ಕೇ ಮಂಗಳ ಉಂಟಾಗುವುದೋ ಅಂತಹ ಸೀತಾಮಾತೆಯು, ಅನಸೂಯಾದೇವಿಯಿಂದ ದೀರ್ಘವಾಗಿ ಉಪದೇಶಿಸಲ್ಪಟ್ಟ ಪತಿವ್ರತಾಧರ್ಮ ಎಂಬ ತಪಸ್ಸಿನ ಮಹಿಮೆಯನ್ನು ವಿನಯ ಹಾಗೂ ಗೌರವಪೂರ್ವಕವಾಗಿ ಆಲಿಸಿ ಆನಂದ ಪಡುತ್ತಾಳೆ. ಅನಸೂಯಾದೇವಿಯಿಂದ ಪ್ರೀತಿಯಿಂದ ಕೊಡಲ್ಪಟ್ಟ ಅಂಗರಾಗ ಹಾಗೂ ದಿವ್ಯವಾದ ಆಭರಣಗಳನ್ನು ಧರಿಸá-ತ್ತಾಳೆ. ಈ ಪ್ರಕರಣದಲ್ಲಿ ಶ್ರೀರಾಮಚಂದ್ರ ಹಾಗೂ ಸೀತಾಮಾತೆಯರ ವಿನಯವೆಂಬ ಸಂಪತ್ತು ಎದ್ದು ತೋರುತ್ತದೆ ಹಾಗೂ ಸರ್ವರಿಗೂ ಆದರ್ಶಪ್ರಾಯವಾಗಿದೆ.
ರಾಮಚಂದ್ರ ಹಾಗೂ ಸೀತಾಮಾತೆಯರು ಜಗದಾದಿ ದಂಪತಿಗಳು. ಅವರಿಗೆ ಯಾವ ಉಪದೇಶದ ಅಗತ್ಯವೂ ಇಲ್ಲ. ಆದರೆ ಮನುಕುಲಕ್ಕೆ ಒಂದು ಆದರ್ಶವಾದ ಜೀವನವನ್ನು ತೋರಿಸುವ ಸಲುವಾಗಿ ಭುವಿಗೆ ಇಳಿದು ಬಂದವರು. ಮಕ್ಕಳು, ಹಿರಿಯರು ಹೇಳಿದ್ದನ್ನು ಮಾಡುವುದಕ್ಕಿಂತ ಹೆಚ್ಚಾಗಿ, ಅವರು ಮಾಡಿದ್ದನ್ನು ಅನುಸರಿಸುವುದೇ ಜಾಸ್ತಿಯಷ್ಟೇ. ಹಾಗಾಗಿ ಜಗನ್ಮಾತಾಪಿತೃಗಳು ಕಾಲ ಕಾಲಕ್ಕೆ ಭುವಿಗೆ ಇಳಿದು ಬಂದು ಧರ್ಮದ ಹಾದಿಯಲ್ಲಿ ತಾವೇ ನಡೆದು ಪ್ರಕೃತಿಯಲ್ಲಿ ಸಿಲುಕಿರುವ ತಮ್ಮ ಮಕ್ಕಳಿಗೆ ಧರ್ಮದ ಹಾದಿಯನ್ನು ತೋರಿಸುವುದುಂಟು.ಭಗವಂತನು ಇಳಿದು ಬರá-ವುದು ಕೆಳಗೆ ಬಿದ್ದಿರುವವರನ್ನು ಮೇಲೆತ್ತಲು. ನೀರಿಗೆ ಬಿದ್ದವರನ್ನು ಮೇಲೆತ್ತಲು ಈಜುಗಾರನು ಬರುವಂತೆ, ಕರ್ಮಚಕ್ರದಲ್ಲಿ ಬಿದ್ದ ಜೀವಿಗಳ ಉದ್ಧಾರಕ್ಕಾಗಿ ಅಜನಾದರೂ (ಹುಟ್ಟಿಲ್ಲದವನು) ಅವನು ಜನಿಸುತ್ತಾನೆ ಎಂಬ ಶ್ರೀರಂಗ ಮಹಾಗುರುಗಳ ವಾಣಿಯಂತೆ ತಮ್ಮ ಕಲ್ಯಾಣಗುಣಗಳ ಮೂಲಕ ಭುವಿಯಲ್ಲಿದ್ದವರನ್ನು ದಿವಿಗೆ ಒಯ್ಯಲು ಅವತರಿಸಿದ ಶ್ರೀರಾಮಚಂದ್ರ-ಸೀತಾಮಾತೆಯರ ನಡೆ ಎಂದೆಂದಿಗೂ ಲೋಕಕ್ಕೆ ಆದರ್ಶಪ್ರಾಯ. ವಿನಯ ಎನ್ನುವುದು ಎಲ್ಲರಲ್ಲಿಯೂ ಇರಲೇಬೇಕಾದಂತಹ ಅಲಂಕಾರಪ್ರಾಯವಾದ ಗುಣ. ವಿಶೇಷವಾಗಿ ನಮ್ಮನ್ನು ಭಗವಂತನೆಡೆಗೆ ನಯನಮಾಡುವಂತಹ (ಒಯ್ಯುವಂತಹ) ಕಲ್ಯಾಣಗುಣ. ಹಾಗಾಗಿಯೇ ಮಹಾತ್ಮರು ವಿನಯವನ್ನು ಸದಾ ತಮ್ಮಲ್ಲಿ ಕಾಪಾಡಿಕೊಂಡಿರುವುದು ನಮಗೆ ಆರ್ಷ ಗ್ರಂಥಗಳಲ್ಲಿ ಕಾಣಸಿಗುತ್ತದೆ. ಶಂಕರಭಗವತ್ಪಾದರು ತಮ್ಮ ಸ್ತೋತ್ರ ಸಾಹಿತ್ಯದಲ್ಲಿ ‘ಅವಿನಯಮ್ ಅಪನಯ ವಿಷ್ಣೋ’ ಎಂಬುದಾಗಿ ಅವಿನಯವನ್ನು ದೂರಮಾಡು ಎಂದು ನಮ್ಮೆಲ್ಲರ ಪರವಾಗಿ ಭಗವಂತನನ್ನು ಪ್ರಾರ್ಥಿಸುತ್ತಾರೆ. ಅನೇಕ ಮಂದಿ ಸುಭಾಷಿತಕಾರರೂ ಸಹ ವಿನಯವೆಂಬ ಗುಣವನ್ನು ಅತಿಶಯವಾಗಿ ಕೊಂಡಾಡಿರುವುದನ್ನು ನಾವು ಸಂಸ್ಕೃತ ಸಾಹಿತ್ಯದಲ್ಲಿ ಕಾಣಬಹುದು. ವಯೋವೃದ್ಧರ ಬಳಿ, ಜ್ಞಾನವೃದ್ಧರ ಬಳಿ ಹೇಗೆ ವಿನಯದಿಂದ ನಡೆದುಕೊಳ್ಳಬೇಕು, ಅದು ನಮ್ಮ ಐಹಿಕ ಹಾಗೂ ಪಾರಮಾರ್ಥಿಕ ಏಳಿಗೆಗೆ ಹೇಗೆ ಕಾರಣವಾಗುತ್ತದೆ ಎಂಬುದನ್ನು ರಾಮಾಯಣ ಮಹಾಭಾರತ ಮುಂತಾದ ಕಾವ್ಯಗಳು ಮನುಕುಲಕ್ಕೆ ಸಾರುತ್ತಿವೆ. ಅಂತಹ ಕಾವ್ಯಗಳ ಹಾಗೂ ಮಹಾಪುರುಷರ ಚರಿತ್ರೆಯ ಅನುಸಂಧಾನದಿಂದ ವಿನಯವೆಂಬ ಗುಣವನ್ನು ಮೈಗೂಡಿಸಿಕೊಂಡು ಕೃತಾರ್ಥರಾಗೋಣ.
(ಲೇಖಕರು ಸಂಸ್ಕೃತಿ ಚಿಂತಕರು, ಅಷ್ಟಾಂಗಯೋಗ ವಿಜ್ಞಾನಮಂದಿರಂ)