

ಇಸ್ಲಾಮಾಬಾದ್: ಭಯೋತ್ಪಾದನಾ ಚಟುವಟಿಕೆಗೆ ಕುಖ್ಯಾತಿ ಗಳಿಸಿರುವ ಪಾಕಿಸ್ತಾನ ಇತ್ತೀಚೆಗೆ ಚೀನಾಕ್ಕೆ ಕತ್ತೆಗಳನ್ನು ರಫ್ತು ಮಾಡುತ್ತಿರುವುದು ಭಾರಿ ಸುದ್ದಿಯಾಗಿತ್ತು. ಈಗ ಪಾಕಿಸ್ತಾನ ತನ್ನ ದೇಶದ ಭಿುಕ್ಷುಕರನ್ನೂ ಇತರ ದೇಶಗಳಿಗೆ ಕಳುಹಿಸುತ್ತಿರುವ ವಿಚಾರ ಬೆಳಕಿಗೆ ಬಂದಿದೆ.
ಸೌದಿ ಅರೇಬಿಯಾ ಮತ್ತು ಇರಾಕ್ನಂತಹ ದೇಶಗಳಿಗೆ ಪಾಕಿಸ್ತಾನದ ಭಿುಕ್ಷುಕರು ದೊಡ್ಡ ಪ್ರಮಾಣದಲ್ಲಿ ವಲಸೆ ಹೋಗುತ್ತಿರುವುದು ಅಲ್ಲಿನ ಸರ್ಕಾರಕ್ಕೆ ತಲೆನೋವು ತಂದಿದೆ. ಭಿಕ್ಷುಕರನ್ನು ನಮ್ಮ ದೇಶಕ್ಕೆ ಕಳಿಸಬೇಡಿ ಎಂದು ಪಾಕಿಸ್ತಾನಕ್ಕೆ ಈ ದೇಶಗಳು ತಾಕೀತು ಮಾಡಿವೆ. ಮುಸ್ಲಿಮರ ಪವಿತ್ರ ಶ್ರದ್ಧಾ ಕೇಂದ್ರ ಮೆಕ್ಕಾದ ಮಸೀದಿಯೊಳಗೆ ಬಂಧಿತರಾಗಿರುವ ಹೆಚ್ಚಿನ ಜೇಬುಗಳ್ಳರು ಪಾಕಿಸ್ತಾನಿಯರು! ಈಗಲೂ ಸಾವಿರಾರು ಪಾಕ್ ಕಳ್ಳರು ಅಲ್ಲಿನ ಜೈಲುಗಳಲ್ಲಿ ಕಂಬಿ ಎಣಿಸುತ್ತಿದ್ದಾರೆ.
ದಾಖಲೆಯ ಹಣದುಬ್ಬರ ಮತ್ತು ಗಗನಕ್ಕೇರುತ್ತಿರುವ ಆಹಾರ, ಇಂಧನ ಬೆಲೆ ಹಿನ್ನೆಲೆಯಲ್ಲಿ ಪಾಕಿಸ್ತಾನದ ಸಾಮಾನ್ಯ ನಾಗರಿಕರೇ ಹೈರಾಣಾಗಿದ್ದಾರೆ. ಹೀಗಿರುವಾಗ ಭಿಕ್ಷುಕರಿಗೆ ಹೇಗೆ ಬದುಕಲು ಸಾಧ್ಯ? ಹೀಗಾಗಿ ಪಾಕಿಸ್ತಾನದ ಭಿುಕ್ಷುಕರು ಹೆಚ್ಚಿನ ಸಂಖ್ಯೆಯಲ್ಲಿ ಪಶ್ಚಿಮ ಏಷ್ಯಾ ದೇಶಗಳಿಗೆ ಅಕ್ರಮವಾಗಿ ವಲಸೆ ಹೋಗುತ್ತಿದ್ದಾರೆ. ಸಾಗರೋತ್ತರ ಪಾಕಿಸ್ತಾನಿಗಳ ಸ್ಥಾಯಿ ಸಮಿತಿಯೇ ಈ ಬಗ್ಗೆ ಈ ಕಳವಳ ವ್ಯಕ್ತಪಡಿಸಿದೆ. ಪಶ್ಚಿಮ ಏಷ್ಯಾ ರಾಷ್ಟ್ರಗಳಲ್ಲಿ ಬಂಧಿತರಾಗಿರುವ ಶೇ. 90 ಭಿುಕ್ಷುಕರು ಪಾಕಿಸ್ತಾನದವರಾಗಿದ್ದಾರೆ. ಹೆಚ್ಚಿನ ಭಿುಕ್ಷುಕರು ಇರಾಕ್ ಮತ್ತು ಸೌದಿ ಅರೇಬಿಯಾದ ಜೈಲುಗಳಲ್ಲಿ ಬಂಧಿಸಲ್ಪಟ್ಟಿದ್ದಾರೆ ಎಂದು ಸಾಗರೋತ್ತರ ಪಾಕಿಸ್ತಾನಿಗಳ ಕಾರ್ಯದರ್ಶಿ ಜೀಶಾನ್ ಖಂಜಾದಾ ಹೇಳಿದ್ದಾರೆ.
ಪಾಕಿಸ್ತಾನಿ ಭಿುಕ್ಷುಕರು ಉಮ್ರಾ ವೀಸಾ ಪಡೆದು ತೀರ್ಥಯಾತ್ರೆ ನೆಪದಲ್ಲಿ ವಿದೇಶಕ್ಕೆ ತೆರಳಿ ನಂತರ ಬೀದಿಗಳಲ್ಲಿ ಭಿಕ್ಷಾಟನೆಯಲ್ಲಿ ತೊಡಗುತ್ತಾರೆ. ಕೆಲವರು ವೀಸಾ ಮುಗಿದರೂ ವಾಪಸ್ ಬರುವುದಿಲ್ಲ ಎಂದು ಪಾಕಿಸ್ತಾನದ ಜಿಯೋ ನ್ಯೂಸ್ ವರದಿ ಮಾಡಿದೆ.
ಪಾಕಿಸ್ತಾನದ ಸುಮಾರು ಒಂದು ಕೋಟಿ ಜನ ವಿದೇಶದಲ್ಲಿ ವಾಸಿಸುತ್ತಿದ್ದಾರೆ. ಅವರಲ್ಲಿ ಗಣನೀಯ ಸಂಖ್ಯೆಯ ಜನ ಭಿಕ್ಷಾಟನೆಯಲ್ಲಿ ತೊಡಗಿದ್ದಾರೆ. ಈ ವ್ಯಕ್ತಿಗಳು ಮೊದಲು ಮುಸ್ಲಿಂ ದೇಶಗಳ ವೀಸಾಗಳನ್ನು ಪಡೆದುಕೊಳ್ಳುತ್ತಾರೆ. ಅಲ್ಲಿಗೆ ತೆರಳಿದ ನಂತರ ಭಿಕ್ಷಾಟನೆ ಆರಂಭಿಸುತ್ತಾರೆ. ಪಾಕಿಸ್ತಾನದಿಂದ ಮಧ್ಯಪ್ರಾಚ್ಯಕ್ಕೆ ತೆರಳುವ ವಿಮಾನಗಳು ಭಿಕ್ಷುಕರಿಂದ ತುಂಬಿರುತ್ತವೆ. ಯುಎಇಯಲ್ಲಿ 16 ಲಕ್ಷ ಮತ್ತು ಕತಾರ್ನಲ್ಲಿ 2 ಲಕ್ಷ ಪಾಕಿಸ್ತಾನಿಗಳು ಇರುವ ಬಗ್ಗೆ ಸಮಿತಿಗೆ ತಿಳಿಸಲಾಗಿದೆ ಎಂದು ಪಾಕಿಸ್ತಾನದ ದಿ ಎಕ್ಸ್ಪ್ರೆಸ್ ಟ್ರಿಬ್ಯೂನ್ ವರದಿ ಮಾಡಿದೆ.
ಇರಾಕ್ ಮತ್ತು ಸೌದಿ ಅರೇಬಿಯಾದ ಜೈಲುಗಳು ಪಾಕಿಸ್ತಾನಿ ಭಿುಕ್ಷುಕರಿಂದ ತುಂಬಿ ತುಳುಕುತ್ತಿವೆ. ಜಾಗತಿಕ ವೇದಿಕೆಯಲ್ಲಿ ಪಾಕಿಸ್ತಾನಕ್ಕೆ ಇದು ನಾಚಿಕೆಗೇಡಿನ ಸಂಗತಿ ಎಂದು ಅಲ್ಲಿನ ರಾಯಭಾರಿಗಳು ಹೇಳಿದ್ದಾರೆ. ಈಗಾಗಲೇ ಆರ್ಥಿಕ ಬಿಕ್ಕಟ್ಟಿನಲ್ಲಿರುವ ಪಾಕಿಸ್ತಾನಕ್ಕೆ ಭಿುಕ್ಷುಕರು ಹೊಸ ಸಮಸ್ಯೆ ಸೃಷ್ಟಿಸುತ್ತಿದ್ದಾರೆ.
ಕಳೆದ ಹಣಕಾಸು ವರ್ಷದಲ್ಲಿ ಪಾಕಿಸ್ತಾನದಲ್ಲಿ ಬಡತನ ಶೇ. 39.4ಕ್ಕೆ ಏರಿಕೆ ಕಂಡಿದೆ. 1.25 ಕೋಟಿ ಜನರು ಬಡತನಕ್ಕೆ ತಳ್ಳಲ್ಪಟ್ಟಿದ್ದಾರೆ ಎಂದು ವಿಶ್ವ ಬ್ಯಾಂಕ್ ತಿಳಿಸಿದೆ. ಕೃಷಿ ಮತ್ತು ರಿಯಲ್ ಎಸ್ಟೇಟ್ ಮೇಲೆ ತೆರಿಗೆ ಹೆಚ್ಚಿಸದಲು ತುರ್ತು ಕ್ರಮಗಳನ್ನು ತೆಗೆದುಕೊಳ್ಳುವಂತೆ ಐಎಂಎಫ್ ಒತ್ತಾಯಿಸಿದೆ.