ಶ್ವಾನವನ್ನು ನುಂಗಿ ಮುಂದೆ ಚಲಿಸಲಾಗದೇ ನರಳುತ್ತಿದ್ದ 15 ಅಡಿ ಉದ್ದ, 60 ಕೆಜಿ ತೂಕದ ಹೆಬ್ಬಾವು ರಕ್ಷಣೆ!

Huge Python
Published on

ಚಿಕ್ಕಮಗಳೂರು: ನಾಯಿಯನ್ನು ನುಂಗಿ ಮುಂದೆ ಚಲಿಸಲಾಗದೇ ನರಳಾಡುತ್ತಿದ್ದ ಬೃಹತ್​ ಗಾತ್ರದ ಹೆಬ್ಬಾವನ್ನು ಎನ್.ಆರ್.ಪುರ ತಾಲೂಕಿನ ಹಂತುವಾನಿ ಗ್ರಾಮದಲ್ಲಿ ರಕ್ಷಣೆ ಮಾಡಲಾಗಿದೆ.

15 ಅಡಿ ಉದ್ದ ಹಾಗೂ 60 ಕೆ.ಜಿ. ತೂಕವುಳ್ಳ ಹೆಬ್ಬಾವು ಹಂತುವಾನಿ ಗ್ರಾಮದ ಶ್ರೀಮತಿ ಎಂಬುವರ ಮನೆ ಪಕ್ಕದಲ್ಲಿ ಕಾಣಿಸಿಕೊಂಡಿತು. ನಾಯಿಯನ್ನು ನುಂಗಿದ್ದರಿಂದ ಓಡಾಡಲು ಆಗದೆ ಒಂದೇ ಕಡೆ ಮಲಗಿತ್ತು. ಮುಂದೆ ಚಲಿಸುವ ಪ್ರಯತ್ನ ಮಾಡಿದರೂ ಅದರ ಕೈಯಲ್ಲಿ ಆಗದೇ ನರಳಾಡುತ್ತಿತ್ತು.

Huge Python

ಹೆಬ್ಬಾವನ್ನು ನೋಡಿ ಶ್ರೀಮತಿ ಅವರು ತಕ್ಷಣ ಉರಗತಜ್ಞ ಹರೀಂದ್ರ ಅವರಿಗೆ ಕರೆ ಮಾಡಿ ಮಾಹಿತಿ ನೀಡಿದರು. ಸ್ಥಳಕ್ಕೆ ಆಗಮಿಸಿದ ಹರೀಂದ್ರ ಅವರು ಅರಣ್ಯ ಅಧಿಕಾರಿ ರಾಘವೇಂದ್ರ ಅವರ ಸಮ್ಮುಖದಲ್ಲಿ ಹೆಬ್ಬಾವನ್ನು ರಕ್ಷಿಸಿ, ಮರಳಿ ಅರಣ್ಯಕ್ಕೆ ಬಿಡಲಾಯಿತು.

ಹೆಬ್ಬಾವನ್ನು ರಕ್ಷಣೆ ಮಾಡುತ್ತಿರುವ ವಿಡಿಯೋ ಮತ್ತು ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಭಾರೀ ಗಾತ್ರ ಹಾವನ್ನು ನೋಡಿ ನೆಟ್ಟಿಗರು ಹುಬ್ಬೇರಿಸಿದ್ದಾರೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net