ಮೂತ್ರ ವಿಸರ್ಜನೆ ಘಟನೆ ಮಾಸುವ ಮುನ್ನವೇ ಮತ್ತೊಂದು ದೌರ್ಜನ್ಯ: ದಲಿತ ವ್ಯಕ್ತಿಯಿಂದ ಚಪ್ಪಲಿ ನೆಕ್ಕಿಸಿದ ದುಷ್ಟ

Dalit Man
Published on

ಲಖನೌ: ದಲಿತ ವ್ಯಕ್ತಿಯ ಮೇಲೆ ಮೂತ್ರ ವಿಸರ್ಜನೆ ಮಾಡಿ ದೌರ್ಜನ್ಯ ಎಸಗಿದ ಘಟನೆ ಮಾಸುವ ಮುನ್ನವೇ ಅದೇ ರಿತಿಯ ಮತ್ತೊಂದು ಆತಂಕಕಾರಿ ಘಟನೆ ನಡೆದಿದೆ. ಮಧ್ಯಪ್ರದೇಶದಲ್ಲಿ ದಲಿತ ವ್ಯಕ್ತಿಯ ಮೇಲೆ ಮೂತ್ರ ವಿಸರ್ಜನೆ ಮಾಡಲಾಗಿತ್ತು. ಇದು ಭಾರೀ ಚರ್ಚೆಗೆ ಗ್ರಾಸವಾಗಿ ಆರೋಪಿಯ ಬಂಧವೂ ಆಗಿದೆ. ಇದೀಗ ಉತ್ತರ ಪ್ರದೇಶದಲ್ಲಿ ದಲಿತ ವ್ಯಕ್ತಿಯೊಬ್ಬನಿಂದ ಕಾಲನ್ನು ಬಲವಂತವಾಗಿ ನೆಕ್ಕಿಸಿರುವ ವಿಡಿಯೋ ವೈರಲ್​ ಆಗಿದೆ.

ಮಂಚದ ಮೇಲೆ ದುಷ್ಟ ವ್ಯಕ್ತಿಯೊಬ್ಬ ಕುಳಿತಿರುತ್ತಾನೆ. ಆತನ ಮುಂದೆ ನಿಂತಿರುವ ಸಂತ್ರಸ್ತ ತನ್ನ ಮಂಡಿಯೂರಿ ಕೆಳಗೆ ಬಾಗಿ ಚಪ್ಪಲಿ ಸಹಿತ ಆ ವ್ಯಕ್ತಿಯ ಕಾಲು ನೆಕ್ಕುವ ದೃಶ್ಯ ವಿಡಿಯೋದಲ್ಲಿದೆ. ಬಳಿಕ ವ್ಯಕ್ತಿಯ ಮೇಲೆ ಹಲ್ಲೆ ಮಾಡಿರುವ ದೃಶ್ಯವೂ ಇದೆ.

ಸಂತ್ರಸ್ತನನ್ನು ರಾಜೇಂದ್ರ ಎಂದು ಗುರುತಿಸಲಾಗಿದೆ. ಕಾಲು ನೆಕ್ಕುವಂತೆ ಮಾಡಿದ್ದಲ್ಲದೆ, ಬಸ್ಕಿ ಹೊಡೆಸಿ, ಹಲ್ಲೆ ಮಾಡಿ ದೌರ್ಜನ್ಯ ಎಸಗಿದ್ದಾರೆ. ಈ ಘಟನೆ ಈ ವಾರದ ಆರಂಭದಲ್ಲಿ ನಡೆದಿದ್ದು, ಇದೀಗ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಈ ಘಟನೆ ಉತ್ತರ ಪ್ರದೇಶದ ಸೊನಭದ್ರ ಜಿಲ್ಲೆಯಲ್ಲಿ ನಡೆದಿದೆ.

ಪ್ರಕರಣ ದಾಖಲು

ವಿಡಿಯೋ ವೈರಲ್​ ಆದ ಬೆನ್ನಲ್ಲೇ ಉತ್ತರ ಪ್ರದೇಶ ಪೊಲೀಸರು 1989ರ ಪರಿಶಿಷ್ಠ ಜಾತಿ ಮತ್ತು ಪರಿಶಿಷ್ಠ ಪಂಗಡ ಕಾಯ್ದೆ (ದೌರ್ಜನ್ಯ ತಡೆ ಕಾಯ್ದೆ) ಸೇರಿದಂತೆ ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್​ಗಳ ಅಡಿಯಲ್ಲಿ ಆರೋಪಿ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಆರೋಪಿ ಲೈನ್​ಮ್ಯಾನ್​

ಆರೋಪಿಯನ್ನು ತೇಜ್​ಬಲಿ ಸಿಂಗ್​ ಎಂದು ಗುರುತಿಸಲಾಗಿದೆ. ಈತ ಇಂಧನ ಇಲಾಖೆಯ ಲೈನ್​ಮ್ಯಾನ್​ ಎಂದು ತಿಳಿದುಬಂದಿದೆ. ಸಂತ್ರಸ್ತನ ಚಿಕ್ಕಪ್ಪನ ಮನೆಯಲ್ಲಿ ವಿದ್ಯುತ್ ಸಮಸ್ಯೆ ಇತ್ತು. ಈ ವೇಳೆ ಲೈನ್‌ಮ್ಯಾನ್ ಸ್ಥಳಕ್ಕಾಗಮಿಸಿದ್ದ. ಯಾವುದೋ ವಿಚಾರವಾಗಿ ಆಕ್ರೋಶಗೊಂಡ ತೇಜ್​ಬಲಿ ಸಿಂಗ್​, ಸಂತ್ರಸ್ತನನ್ನು ಥಳಿಸಲು ಪ್ರಾರಂಭಿಸಿದನು ಮತ್ತು ಚಪ್ಪಲಿ ನೆಕ್ಕುವಂತೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಮತ್ತೆ ಬರದಂತೆ ಬೆದರಿಕೆ

ಮತ್ತೊಂದು ವೀಡಿಯೊದಲ್ಲಿ, ಲೈನ್‌ಮ್ಯಾನ್, ಸಂತ್ರಸ್ತ ರಾಜೇಂದ್ರನನ್ನು ನೆಲಕ್ಕೆ ಬೀಳಿಸಿ ಮನಬಂದಂತೆ ಥಳಿಸುತ್ತಾನೆ. ಅಲ್ಲದೆ, ಪದೇಪದೆ ಕಪಾಳಮೋಕ್ಷ ಮಾಡುತ್ತಾನೆ. ಅಶ್ಲೀಲ ಪದಗಳಿಂದ ನಿಂದಿಸುತ್ತಾನೆ. ಮತ್ತೆ ಈ ಪ್ರದೇಶಕ್ಕೆ ಭೇಟಿ ನೀಡದಂತೆ ಬೆದರಿಕೆ ಹಾಕುತ್ತಾನೆ. ಅಂದರೆ, ಸಂತ್ರಸ್ತ ರಾಜೇಂದ್ರ ಅಂಕಲ್​ ಮನೆಗೆ ಭೇಟಿ ನೀಡಿದ್ದ ಎಂದು ತಿಳಿದುಬಂದಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net