

ಚಿಕ್ಕೋಡಿ: ಎರಡು ದಿನಗಳ ಹಿಂದೆ ನಾಪತ್ತೆಯಾಗಿದ್ದ ಜೈನಮುನಿಯ ಕೊಲೆಯಾಗಿರುವುದು ಬೆಳಕಿಗೆ ಬಂದಿದ್ದು, ಶವಕ್ಕಾಗಿ ಭಾರಿ ಹುಡುಕಾಟ ನಡೆದಿತ್ತು. ಕೊನೆಗೂ ಸ್ವಾಮೀಜಿಯ ಶವ ಪತ್ತೆಯಾಗಿದೆ. ಅವರ ದೇಹವನ್ನು ಕತ್ತರಿಸಿ ಪೀಸ್ ಪೀಸ್ ಮಾಡಲಾಗಿದ್ದು, ಶವದ ತುಂಡುಗಳನ್ನು ಬೋರ್ವೆಲ್ನೊಳಕ್ಕೆ ಎಸೆಯಲಾಗಿತ್ತು.
ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನ ಹಿರೇಕೋಡಿ ಗ್ರಾಮದ ನಂದಿಪರ್ವತ ಜೈನ ಆಶ್ರಮದ ಆಚಾರ್ಯ ಶ್ರೀ 108 ಕಾಮಕುಮಾರ ನಂದಿ ಮಹಾರಾಜರು ಜುಲೈ 5ರ ರಾತ್ರಿ ಹತ್ತರವರೆಗೂ ಆಶ್ರಮದಲ್ಲೇ ಇದ್ದಿದ್ದು, ಜು. 6ರ ಬೆಳಗ್ಗೆ ನಾಪತ್ತೆಯಾಗಿರುವುದು ಕಂಡುಬಂದಿತ್ತು.
ಈ ಸಂಬಂಧ ಭಕ್ತರು ನಿನ್ನೆ ಚಿಕ್ಕೋಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದು, ತನಿಖೆ ಆರಂಭಿಸಿದ ಪೊಲೀಸರು ಅನುಮಾನದ ಮೇರೆಗೆ ಇಬ್ಬರನ್ನು ಇಂದು ವಶಕ್ಕೆ ಪಡೆದಿದ್ದರು. ಅವರನ್ನು ತೀವ್ರ ವಿಚಾರಣೆಗೆ ಒಳಪಡಿಸಿದಾಗ ಸ್ವಾಮೀಜಿಯ ಕೊಲೆ ನಡೆದಿರುವುದು ಗೊತ್ತಾಗಿತ್ತು.
ಸ್ವಾಮೀಜಿಯ ಶವಕ್ಕಾಗಿ ಪೊಲೀಸರು ಬೆಳಗ್ಗೆ 7ರಿಂದಲೇ ಕಾರ್ಯಾಚರಣೆ ನಡೆಸುತ್ತಿದ್ದು, ಕೊನೆಗೂ ಶವ ಪತ್ತೆಯಾಗಿದೆ. ಬೆಳಗಾವಿಯ ರಾಯಬಾಗ ತಾಲೂಕಿನ ಕಟಕಬಾವಿ ಗ್ರಾಮದ ಕೊಳವೆ ಬಾವಿಯಲ್ಲಿ ಶವದ ತುಂಡುಗಳು ಪತ್ತೆಯಾಗಿವೆ. ಸ್ವಾಮೀಜಿಯನ್ನು ಕೊಲೆ ಮಾಡಿ ಕತ್ತರಿಸಿ ಶವದ ತುಂಡುಗಳನ್ನು 400 ಅಡಿ ಬೋರ್ವೆಲ್ನೊಳಕ್ಕೆ ಎಸೆಯಲಾಗಿದೆ. ಬೆಳಗಾವಿ ಎಸ್‌ಪಿ ಡಾ.ಸಂಜೀವ ಪಾಟೀಲ್ ನಿನ್ನೆಯಿಂದ ಕಟಕಬಾವಿ ಗ್ರಾಮದಲ್ಲೇ ಬೀಡುಬಿಟ್ಟಿದ್ದು, ಸ್ಥಳದಲ್ಲೇ ಮರಣೋತ್ತರ ಪರೀಕ್ಷೆ ನಡೆಯುವ ಸಾಧ್ಯತೆ ಇದೆ.