

ಬೆಳಗಾವಿ: ಬಸದಿಯಿಂದ ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದ ಜೈನಮುನಿ ಬರ್ಬರ ಹತ್ಯೆಯಾಗಿರುವುದಾಗಿ ವರದಿಯಾಗಿದೆ. ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನ ಹಿರೇಕೋಡಿ ಗ್ರಾಮದಲ್ಲಿ ಈ ಪ್ರಕರಣ ನಡೆದಿದೆ.
ಹಿರೇಕೋಡಿ ಗ್ರಾಮದ ನಂದಿಪರ್ವತ ಜೈನ ಆಶ್ರಮದ ಆಚಾರ್ಯ ಶ್ರೀ 108 ಕಾಮಕುಮಾರ ನಂದಿ ಮಹಾರಾಜರು ಹತ್ಯೆಯಾದವರು. ಜುಲೈ 6ರಂದು ಬೆಳಗ್ಗೆ ತಮ್ಮ ಆಶ್ರಮದಿಂದ ನಾಪತ್ತೆಯಾಗಿದ್ದರು. ಮೊನ್ನೆ ಬೆಳಗ್ಗೆ ಭಕ್ತರು ಆಶ್ರಮಕ್ಕೆ ಆಗಮಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಜೈನ ಮುನಿ ಕಳೆದ 15 ವರ್ಷಗಳಿಂದ ನಂದಿಪರ್ವತ ಆಶ್ರಮದಲ್ಲಿ ವಾಸವಿದ್ದರು.
ಆಶ್ರಮದ ಸುತ್ತಮುತ್ತ ಶೋಧ ನಡೆಸಿದ್ದ ಭಕ್ತರಿಗೆ ಜೈನಮುನಿ ಸುಳಿವು ಸಿಗದಿದ್ದಾಗ ನಿನ್ನೆ ಚಿಕ್ಕೋಡಿ ಪೊಲೀಸ್ ಠಾಣೆಗೆ ಜೈನಮುನಿಗಳು ನಾಪತ್ತೆಯಾಗಿರುವ ಬಗ್ಗೆ ಭಕ್ತರು ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದ ಚಿಕ್ಕೋಡಿ ಪೊಲೀಸರು, ಅನುಮಾನದ ಮೇಲೆ ಇಬ್ಬರನ್ನು ವಶಕ್ಕೆ ಪಡೆದಿದ್ದರು. ತನಿಖೆಯ ವೇಳೆ ಜೈನಮುನಿ ಕಾಮಕುಮಾರ ನಂದಿ ಮಹಾರಾಜರ ಹತ್ಯೆಯ ರಹಸ್ಯ ಬಯಲಾಯಿತು.
ಜೈನಮುನಿಯನ್ನು ಹತ್ಯೆ ಮಾಡಿ ಶವ ಎಲ್ಲಿ ಬಿಸಾಕಿದ್ದೇವೆ ಎಂದು ಸ್ಪಷ್ಟ ಮಾಹಿತಿ ನೀಡದೇ ಆರೋಪಿಗಳು ಪೊಲೀಸರು ಸತಾಯಿಸುತ್ತಿರುದ್ದಾರೆ. ಒಂದು ಬಾರಿ ಕೊಲೆ ಮಾಡಿ ಮೃತದೇಹ ಕತ್ತರಿಸಿ ಕಟಕಬಾವಿ ಗ್ರಾಮದಲ್ಲಿ ತೆರೆದ ಕೊಳವೆಬಾವಿಯಲ್ಲಿ ಎಸೆದ್ದೇವೆ ಎಂದು ಹೇಳಿದರು. ಮತ್ತೊಂದು ಬಾರಿ ಮೃತದೇಹವನ್ನು ಬಟ್ಟೆಯಲ್ಲಿ ಸುತ್ತಿ ನದಿಗೆ ಎಸೆದಿದ್ದೇವೆ ಎಂದು ಹೇಳುತ್ತಿದ್ದಾರೆ. ಕಟಕಬಾವಿ ಗ್ರಾಮದಲ್ಲಿ ರಾತ್ರಿಯಿಡಿ ಪರಿಶೀಲನೆ ನಡೆಸಿದರು ಶವ ಪತ್ತೆಯಾಗಲಿಲ್ಲ. ಇಂದು ಬೆಳಗ್ಗೆ 6.30 ರಿಂದ ಜೈನಮುನಿ ಕಾಮಕುಮಾರನಂದಿ ಮೃತದೇಹದ ಶೋಧಕಾರ್ಯ ಮತ್ತೆ ಆರಂಭವಾಗಿದೆ. ಆಶ್ರಮದಿಂದಲೆ ಸ್ವಾಮೀಜಿಯನ್ನು ಅಪಹರಿಸಿ ಕೊಲೆ ಮಾಡಿರುವುದಾಗಿ ಆರೋಪಿಳು ಹೇಳಿಕೆ ನೀಡಿದ್ದಾರೆ.
ಶೋಧ ಕಾರ್ಯಾಚರಣೆ ಸ್ಥಳದಲ್ಲಿ ಸಾರ್ವಜನಿಕರು, ಮಾಧ್ಯಮಗಳಿಗೆ ನಿರ್ಬಂಧ ಹೇರಲಾಗಿದೆ. ಸ್ಥಳದಲ್ಲೇ ಎಸ್‌ಪಿ ಡಾ.ಸಂಜೀವ್ ಪಾಟೀಲ್ ಮೊಕ್ಕಾಂ ಹೂಡಿದ್ದಾರೆ. ಶೋಧ ಕಾರ್ಯ ಸ್ಥಳಕ್ಕೆ SDRF ತಂಡ ಹಾಗೂ ಫಾರೆನಸಿಕ್ ತಂಡ ಆಗಮಿಸಿದೆ.
ಹಿರೇಕೋಡಿ ಗ್ರಾಮದ ನಂದಿ ಪರ್ವತ ಆಶ್ರಮದಲ್ಲಿ ನೀರವಮೌನ ಆವರಿಸಿದೆ. ಮುಂಜಾಗ್ರತಾ ಕ್ರಮವಾಗಿ ಹಿರೇಕೋಡಿ ಗ್ರಾಮದಲ್ಲಿ ಪೊಲೀಸ್ ಬಿಗಿ ಭದ್ರತೆ ಏರ್ಪಡಿಸಲಾಗಿದೆ. ಜೈನ ಮುನಿಗೆ ನಿತ್ಯ ಆಹಾರ ನೀಡಿ ಆರೈಕೆ ಮಾಡುತ್ತಿದ್ದ ಮಹಿಳೆ ಕುಸು ಗೌರವ ಜೈನಮುನಿಯನ್ನು ನೆನೆದು ಕಣ್ಣೀರು ಹಾಕುತ್ತಿದ್ದಾರೆ. ಕಾಮಕುಮಾರ ನಂದಿ ಸ್ವಾಮೀಜಿ ಸಹೋದರ ಲಕ್ಷ್ಮಣ ಕೂಡ ಕಣ್ಣೀರು ಹಾಕುತ್ತಿದ್ದಾರೆ.