ಬಸದಿಯಿಂದ ಇದ್ದಕ್ಕಿದ್ದಂತೆ ಜೈನಮುನಿ ನಾಪತ್ತೆ; ಭಕ್ತರಲ್ಲಿ ಆತಂಕ

Kamakumara Nandi Maharaj
Published on

ಬೆಳಗಾವಿ: ಜೈನಮುನಿಯೊಬ್ಬರು ಬಸದಿಯಿಂದ ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದು, ಭಕ್ತರದಲ್ಲಿ ತೀವ್ರ ಆತಂಕ ಉಂಟಾಗಿದೆ. ಅವರು ನಾಪತ್ತೆಯಾಗಿರುವುದು ನಿನ್ನೆಯೇ ಬೆಳಕಿಗೆ ಬಂದಿದ್ದರೂ ಇನ್ನೂ ಯಾವುದೇ ಸುಳಿವು ಪತ್ತೆಯಾಗಿಲ್ಲ.

ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನ ಹಿರೇಕೋಡಿ ಗ್ರಾಮದಲ್ಲಿ ಈ ಪ್ರಕರಣ ನಡೆದಿದೆ. ಹಿರೇಕೋಡಿ ಗ್ರಾಮದ ನಂದಿಪರ್ವತ ಜೈನ ಆಶ್ರಮದ ಆಚಾರ್ಯ ಶ್ರೀ 108 ಕಾಮಕುಮಾರ ನಂದಿ ಮಹಾರಾಜರು ನಾಪತ್ತೆಯಾದವರು. ಮೊನ್ನೆ ರಾತ್ರಿ ಹತ್ತರ ವರೆಗೆ ಆಶ್ರಮದ ತಮ್ಮ ಕೋಣೆಯಲ್ಲೇ ಇದ್ದ ಸ್ವಾಮೀಜಿ, ನಿನ್ನೆ ಬೆಳಗ್ಗೆ 8ರಿಂದ ನಾಪತ್ತೆ ಆಗಿದ್ದಾರೆ. ನಿನ್ನೆ ಬೆಳಗ್ಗೆ ಭಕ್ತರು ಆಶ್ರಮಕ್ಕೆ ಆಗಮಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.

ಕಾಮಕುಮಾರ ನಂದಿ ಮಹಾರಾಜರು ಕಳೆದ 15 ವರ್ಷಗಳಿಂದ ನಂದಿಪರ್ವತದಲ್ಲಿ ವಾಸವಿದ್ದರು. ಅವರ ಪಿಂಚಿ, ಕಮಂಡಲು ಹಾಗೂ ಮೊಬೈಲ್​​ಫೋನ್​ ಅವರ ವಾಸದ ಕೋಣೆಯಲ್ಲೇ ಇದೆ. ಜೈನಮುನಿಗಳು ಎಲ್ಲೇ ಹೋಗಬೇಕಿದ್ದರೂ ಪಿಂಚಿ-ಕಮಂಡಲು ತಗೆದುಕೊಂಡು ಹೋಗುವ ಪ್ರತೀತಿ. ಆದರೆ ಅವರ ಪಿಂಚಿ-ಕಮಂಡಲು ಕೋಣೆಯಲ್ಲಿಯೇ ಇರುವುದರಿಂದ ಭಕ್ತರಲ್ಲಿ ಆತಂಕ ಉಂಟಾಗಿದೆ. ಆಶ್ರಮಕ್ಕೆ ಸಂಬಂಧಿಸಿದ ಕೆಲವು ದಾಖಲೆ ಪತ್ರ ಸಹ ನಾಪತ್ತೆಯಾಗಿದೆ.

ನಿನ್ನೇ ಇಡೀ ದಿನ ಜೈನ ಆಶ್ರಮದ ಸುತ್ತಮುತ್ತ ಭಕ್ತರಿಂದ ಹುಡುಕಾಟ ನಡೆಸಲಾಗಿದ್ದು, ಇಂದು ಚಿಕ್ಕೋಡಿ ಪೊಲೀಸ್ ಠಾಣೆಗೆ ನಾಪತ್ತೆಯಾದ ಬಗ್ಗೆ ದೂರು ನೀಡಲಾಗಿದೆ. ಆಚಾರ್ಯ ಕಾಮಕುಮಾರ ನಂದಿ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಭೀಮಪ್ಪ ಉಗಾರೆ ದೂರು ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net