More

    ಅವಕಾಶ ಕೊಡಿ, ಲೋಕಸಭೆಯಲ್ಲಿ ನಿಮ್ಮ ಧ್ವನಿಯಾಗುವೆ

    ದಾವಣಗೆರೆ : ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ 4 ಬಾರಿ ಸತತವಾಗಿ ಒಬ್ಬರನ್ನೇ ಆಯ್ಕೆ ಮಾಡುತ್ತ ಬಂದಿದ್ದು, ನೀವು ಅವರನ್ನು ಗೆಲ್ಲಿಸಿದ್ದಕ್ಕೆ ಅವರಿಂದ ಸಿಕ್ಕ ಕೊಡುಗೆ ಏನು ಎಂದು ಕಾಂಗ್ರೆಸ್ ಅಭ್ಯರ್ಥಿ ಡಾ. ಪ್ರಭಾ ಮಲ್ಲಿಕಾರ್ಜುನ್ ಪ್ರಶ್ನಿಸಿದರು.
     ಚನ್ನಗಿರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಅಗರಬನ್ನಿಹಟ್ಟಿ ಗ್ರಾಮದಿಂದ ಶನಿವಾರ ಪ್ರಚಾರ ಆರಂಭಿಸಿದ ಅವರು ಮುದಿಗೆರೆ, ಹಿರೇಮಳಲಿ, ಚನ್ನೇಶಪುರ, ಜೋಳದಾಳ್, ಹರೋನಹಳ್ಳಿ, ಅಜ್ಜಿಹಳ್ಳಿ, ಹೊನ್ನೆಬಾಗಿ, ತಿಪ್ಪಗೊಂಡನಹಳ್ಳಿ, ರಾಜಗೊಂಡನಹಳ್ಳಿ, ಪಾಂಡೋಮಟ್ಟಿ, ಮರವಂಜಿ, ನೆಲ್ಲಿಹಂಕಲು, ತಾವರಕೆರೆ, ದುರ್ವಿಗೆರೆ, ಗೊಪ್ಪೇನಹಳ್ಳಿ, ಮಲ್ಲಹಾಳ್, ಕಂಚಿಗನಾಳ್, ವಡ್ನಾಳ್ ಹಾಗೂ ಚನ್ನಗಿರಿ ಪುರಸಭಾ ವ್ಯಾಪ್ತಿಯಲ್ಲಿ ಸಂಚರಿಸಿ ಮತದಾರರನ್ನು ಉದ್ದೇಶಿಸಿ ಮಾತನಾಡಿದರು.
     ಸಂಸದರು ಒಮ್ಮೆಯಾದರೂ ಅಡಕೆ ಬೆಳೆಗಾರರು ಸೇರಿ ಯಾವ ರೈತರ ಪರವಾಗಿಯೂ ಧ್ವನಿ ಎತ್ತಿಲ್ಲ. ಅಂತಹವರನ್ನು ಮತ್ತೆ ಆಯ್ಕೆ ಮಾಡುವ ಬದಲು ಲೋಕಸಭೆ ಒಳಗೂ, ಹೊರಗೂ ನಿಮ್ಮ ಧ್ವನಿಯಾಗಿ ಕೆಲಸ ಮಾಡುವ ನನ್ನನ್ನು ಗೆಲ್ಲಿಸಿ ಎಂದು ಮನವಿ ಮಾಡಿದರು.
     ಈ ಬಾರಿ ದೇಶದಲ್ಲಿ ಖಂಡಿತ ಬದಲಾವಣೆ ಆಗಲಿದ್ದು, ಕಾಂಗ್ರೆಸ್ ನೇತೃತ್ವದಲ್ಲಿ ಅಧಿಕಾರ ಹಿಡಿಯಲಿದ್ದೇವೆ. ನಮ್ಮ ಸರ್ಕಾರದಲ್ಲಿ ಅಡಕೆಗೆ ಸ್ಥಿರ ಬೆಲೆ ಕೊಡಿಸುವುದು, ಅಡಕೆ ಸಂಸ್ಕರಣಾ ಘಟಕ ಆರಂಭಿಸುವುದು ಸೇರಿ ಪೂರಕ ವಾತಾವರಣ ನಿರ್ಮಿಸಿ ರೈತರಿಗೆ ಕನಿಷ್ಠ ಬೆಂಬಲ ಬೆಲೆ ನೀಡುತ್ತೇವೆ ಎಂದರು.
     ರಾಜ್ಯದಲ್ಲಿ ಅಧಿಕಾರಕ್ಕೆ ಬರುವ ಮುನ್ನ ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ 5 ಗ್ಯಾರಂಟಿ ಯೋಜನೆಗಳ ಭರವಸೆ ನೀಡಿತ್ತು. ಅದರಂತೆ ನಡೆದುಕೊಂಡಿದೆ. ಚನ್ನಗಿರಿ ವಿಧಾನಸಭಾ ಕ್ಷೇತ್ರವೊಂದಕ್ಕೆ ಮಾರ್ಚ್ ಅಂತ್ಯಕ್ಕೆ ಸುಮಾರು 177 ಕೋಟಿ ರೂ.ಗಳಷ್ಟು ಹಣವನ್ನು ಫಲಾನುಭವಿಗಳಿಗೆ ವಿತರಿಸಲಾಗಿದೆ ಎಂದು ಹೇಳಿದರು.
     ಮಾಜಿ ಶಾಸಕ ವಡ್ನಾಳ್ ರಾಜಣ್ಣ ಮಾತನಾಡಿ 50 ವರ್ಷ ಕಾಂಗ್ರೆಸ್ ಆಡಳಿತವಿದ್ದಾಗ ದೇಶದ ಸಾಲ 65 ಲಕ್ಷ ಕೋಟಿ ರೂ. ಇತ್ತು. ಈಗ ಅದು 205 ಲಕ್ಷ ಕೋಟಿ ರೂ. ಆಗಿದೆ. 10 ವರ್ಷದಲ್ಲಿ 140 ಲಕ್ಷ ಕೋಟಿ ರೂ. ಸಾಲ ಮಾಡಿರುವ ಬಿಜೆಪಿ ಮತ್ತು ಮೋದಿ ಸರ್ಕಾರದ ಸಾಧನೆ ಎಂದು ವ್ಯಂಗ್ಯವಾಡಿದರು.
     ಬಿಜೆಪಿಯ ಮನೆದೇವರೇ ಸುಳ್ಳು. ಆ ಪಕ್ಷದ ನಾಯಕರು ತಮ್ಮ ಅಭ್ಯರ್ಥಿಗಳ ಮೇಲೆ ನಂಬಿಕೆ ಇಲ್ಲದೆ ಮೋದಿ ನೋಡಿ ಮತ ನೀಡಿ ಎಂದು ಕೇಳುತ್ತಿದ್ದಾರೆ ಎಂದು ಆರೋಪಿಸಿದರು.
     ನಾವು ಧೈರ್ಯವಾಗಿ ಕೇಳುತ್ತಿದ್ದೇವೆ. ಕ್ಷೇತ್ರದ ಅಭಿವೃದ್ಧಿಗಾಗಿ ಚಿಂತನೆಗಳೊಂದಿಗೆ ಸಿದ್ಧರಾಗಿರುವ ನಮ್ಮ ಅಭ್ಯರ್ಥಿ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರನ್ನು ನೋಡಿ ಮತ ಕೊಡಿ ಎಂದು ಮನವಿ ಮಾಡಿದರು.
     ಬ್ಲಾಕ್ ಅಧ್ಯಕ್ಷರಾದ ಜಬಿವುಲ್ಲಾ, ಶ್ರೀನಿವಾಸ್, ಪಕ್ಷದ ಮುಖಂಡರಾದ ಹೊದಿಗೆರೆ ರಮೇಶ್, ವೀರೇಶ್ ನಾಯ್ಕ, ವಡ್ನಾಳ್ ಜಗದೀಶ್, ಅಮಾನುಲ್ಲಾ ಸೇರಿ ಅನೇಕ ಮುಖಂಡರು, ಕಾರ್ಯಕರ್ತರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts