

ಕರಾಚಿ: ಪಾಕಿಸ್ತಾನದ ಬಲೂಚಿಸ್ತಾನ್ ಪ್ರಾಂತ್ಯದ ಕ್ವೆಟ್ಟಾದಲ್ಲಿ ಬಾಂಬ್ ಸ್ಫೋಟ ಸಂಭವಿಸಿದ್ದು, ಅನೇಕರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಪಾಕಿಸ್ತಾನಿ ಮಾಧ್ಯಮಗಳ ವರದಿಯ ಪ್ರಕಾರ, ಭಾನುವಾರ ಬೆಳಗ್ಗೆ ಎಫ್‌ಸಿ ಮುಸ್ಸಾ ಚೆಕ್‌ಪಾಯಿಂಟ್ ಬಳಿ ಸ್ಫೋಟ ಸಂಭವಿಸಿದ್ದು, ಐದಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎನ್ನಲಾಗಿದೆ.
ಕ್ವೆಟ್ಟಾದ ಪೊಲೀಸ್ ಪ್ರಧಾನ ಕಚೇರಿ ಮತ್ತು ಕ್ವೆಟ್ಟಾ ಕಂಟೋನ್ಮೆಂಟ್ ಪ್ರವೇಶದ್ವಾರದ ಬಳಿ ಬಾಂಬ್ ಸ್ಫೋಟ ಸಂಭವಿಸಿದೆ. ಘಟನೆಯಲ್ಲಿ ಗಾಯಗೊಂಡವರನ್ನು ಕೂಡಲೇ ಸ್ಥಳೀಯ ಆಸ್ಪತ್ರೆಗೆ ರವಾನಿಸಿ ಚಿಕಿತ್ಸೆ ಮಾಡಲಾಗಿದೆ ಎಂದು ಪಾಕಿಸ್ತಾನದ ಮಾಧ್ಯಮಗಳ ವರದಿ ಮಾಡಿವೆ. ಘಟನೆಯಿಂದ ಸಾವು ನೋವುಗಳಾಗಿರುವ ಬಗ್ಗೆ ಯಾವುದೇ ವರದಿ ಈವರೆಗೆ ಆಗಿಲ್ಲ.
ಇದೀಗ ಬಾಂಬ್ ಸ್ಫೋಟಗೊಂಡಿರುವ ಘಟನೆಯ ವೀಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ. ಬಾಂಬ್ ಸ್ಫೋಟ ಸಂಭವಿಸುತ್ತಿದ್ದಂತೆ ಪೊಲೀಸರು ಮತ್ತು ತುರ್ತು ರಕ್ಷಣಾ ತಂಡಗಳು ಸ್ಥಳಕ್ಕೆ ಆಗಮಿಸಿದ್ದು, ಪ್ರದೇಶವನ್ನು ಸುತ್ತುವರಿದು ರಕ್ಷಣಾ ಕಾರ್ಯಾಚರಣೆ ಆರಂಭಿಸಿವೆ.
ಕಳೆದ ವಾರ ಪಾಕಿಸ್ತಾನದ ಪೇಶಾವರದಲ್ಲಿ ಮಧ್ಯಾಹ್ನದ ಪ್ರಾರ್ಥನೆಯ ವೇಳೆ ಮಸೀದಿಯಲ್ಲಿ ತಾಲಿಬಾನ್ ಉಗ್ರನೊಬ್ಬ ಆತ್ಮಾಹುತಿ ಬಾಂಬ್ ದಾಳಿ ನಡೆಸಿದ್ದ. ಈ ಘಟನೆಯಲ್ಲಿ ಸುಮಾರು 75ಕ್ಕೂ ಅಧಿಕ ಜನರು ಸಾವನ್ನಪ್ಪಿದ್ದು, 150ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. ಇದೀಗ ಮತ್ತೆ ಒಂದು ವಾರಗಳ ಅಂತರದಲ್ಲಿ ಪಾಕಿಸ್ತಾನದಲ್ಲಿ ಮತ್ತೆ ಬಾಂಬ್ ಸ್ಫೋಟ ಸಂಭವಿಸಿದೆ. (ಏಜೆನ್ಸೀಸ್)