

ಹೆಜ್ಜೆಯ ಮೇಲೊಂದ್ ಹೆಜ್ಜೆಯ ನಿಕ್ಕುತ ಬಾರಮ್ಮ.. ಎಂದು ಅತೀವ ಭಕ್ತಿ ಮತ್ತು ಆರ್ತತೆಯಿಂದ, ಆ ಮಹಾಲಕ್ಷ್ಮಿಯನ್ನು ಕರೆದ ಹರಿದಾಸರ ಪದವನ್ನು ನಾವು-ನೀವೆಲ್ಲರೂ ಕೇಳಿದ್ದೇವೆ, ಹಾಡಿದ್ದೇವೆ. ಆದರೆ ಆ ಕ್ಷೀರಾಭ್ದೀಕನ್ನಿಕೆ ನಮ್ಮೆಲ್ಲರ ಮನೆಗಳಲ್ಲಿ ಬಂದು ನಿಂದು, ನೆಲೆಸಿರುವಳೇ ಎಂದು ತಿಳಿಯುವದಾದರೂ ಹೇಗೆ? ಚಂಚಲಳಾದ ಆ ಮಾತೆಯು ಅಚಂಚಲತೆಯಿಂದ ನಮ್ಮಲ್ಲೇ ನೆಲೆಸಿರಲಿ ಎಂಬ ಷರತ್ತಿದ್ದರೆ, ನಮ್ಮ ಚಾರಿತ್ರ್ಯ ಹೇಗಿರಬೇಕು.. ಇವಕ್ಕೆಲ್ಲ ನಮ್ಮ ಅನೇಕ ಶಾಸ್ತ್ರೀಯ ಗ್ರಂಥಗಳು ವಿವರಿಸಿವೆ.
ಎಲ್ಲಿ ವಾಸಿಸುವಳು?: ಹಿಂದೊಮ್ಮೆ ಬಲಿ ಚಕ್ರವರ್ತಿಯು, ‘ನೀನು ಇಂದ್ರನ ಬಳಿ ನಿತ್ಯ ನೆಲೆಸಿರುವದಕ್ಕೆ ಕಾರಣವೇನು? ಎಂದು ಲಕ್ಷ್ಮೀದೇವಿಯಲ್ಲಿ ಪ್ರಶ್ನಿಸಿದಾಗ, ನಿನ್ನ ಸುತ್ತಲೂ ವಾಸಿಸುವ ಜನರು ಯಾವಾಗ ಧರ್ಮವನ್ನು ತ್ಯಜಿಸಿ, ಅಹಿಂಸೆ, ಅನ್ಯಾಯದ ಹಾದಿ ಹಿಡಿದರೊ ಅಂದೆ ನಾನು ನಿನ್ನಿಂದ ದೂರ ಸಾಗಿದೆ. ನನಗೆ ಪ್ರಿಯವಾದುದನ್ನು ಮಾಡುವ, ಕೇವಲ ಇಂದ್ರನಲ್ಲಿ ಮಾತ್ರವಲ್ಲ, ಪ್ರತೀ ಧಾರ್ವಿುಕರ ಸಜ್ಜನರ ಮನೆಮನದಲ್ಲಿ ನಾನು ಸದಾ ವಾಸಿಸುವೆ’ ಎಂದು ಮರು ನುಡಿದಳಂತೆ ಹರಿಮಡದಿ.
ಜಗದ್ಗುರುಗಳಾದ ಶ್ರೀಮಧ್ವಾಚಾರ್ಯರು ಸಮಸ್ತ ವೇದ, ಉಪನಿಷತ್ತು ಮತ್ತು ಪುರಾಣಗಳಲ್ಲಿ ಉಲ್ಲೇಖಿತ ಲಕ್ಷ್ಮೀ ತತ್ವಗಳನ್ನು ಸಂಗ್ರಹಿಸಿ, ರಚಿಸಿದ ಅಪ್ರತಿಮ ದ್ವಾದಶ ಸ್ತೋತ್ರದಲ್ಲಿ ಮಹಾಲಕ್ಷಿಯನ್ನು ಸುಂದರವಾಗಿ ವರ್ಣಿಸಿದ್ದಾರೆ.
ವಿಶ್ವ ಸ್ಥಿತಿ ಪ್ರಲಯ ಸರ್ಗ ಮಹಾ ವಿಭೂತಿವೃತ್ತಿ ಪ್ರಕಾಶ ನಿಯಮಾವೃತಿ ಬಂಧ ಮೋಕ್ಷಾಃ | ಯಸ್ಯಾ ಅಪಾಂಗಲವ ಮಾತ್ರತ ಊರ್ಜಿತಾ ಸಾ ಶ್ರೀರ್ಯತ್ ಕಟಾಕ್ಷ ಬಲವತ್ತಯ ನಮಾಮಿ || 1 ||
ಅರ್ಥ- ವಿಶ್ವದ ಸಕಲ ಚೇತನಾಚೇತನ ವಸ್ತುವಿನ ಸೃಷ್ಟಿಯನ್ನು ಬ್ರಹ್ಮದೇವರು, ಲಯವನ್ನು ರುದ್ರ ದೇವರು, ಮತ್ತಿನ್ನಿತರ ಕಾರ್ಯಗಳನ್ನು ಎಂದರೆ ವರುಣನಿಂದ ಮಳೆ, ಸೂರ್ಯನಿಂದ ಬೆಳಕು, ಹೀಗೆ ಕೇವಲ ತನ್ನ ಕುಡಿ ನೋಟದಿಂದ, ಪ್ರತಿ ಜೀವದ ನಿಯಮ ಮಾಡಲು ಆಯಾ ದೇವತೆಗಳಿಗೆ, ಪ್ರೇರಣೆ ಮಾಡುವಳು ಲಕ್ಷ್ಮೀದೇವಿ ಅಂತಹ ಸಾಮರ್ಥ್ಯವನ್ನು ತನ್ನ ಪತಿಯಾದ ನಾರಾಯಣನಿಂದ ಪಡೆದಿರುವಳು.
ಪ್ರಕೃತಿ ಪುರುಷ ಇವರು ಅನಾದಿ ಸತ್ಯ. ಪ್ರಕೃತಿ-ಲಕ್ಷ್ಮೀ(ಸ್ತ್ರಿ), ಪುರುಷ ವಿಷ್ಣು(ಪತಿ). ಇವರೇ ಆದಿ ದಂಪತಿಯೆನಿಸಿಕೊಂಡ ಲಕ್ಷ್ಮೀನಾರಾಯಣರು. ಪುರುಷ ತನ್ನ ಶಕ್ತಿಯ ಅಭಿವ್ಯಕ್ತಿಗೆ ಪ್ರಕೃತಿಯನ್ನು ಮಾಧ್ಯಮವಾಗಿರಿಸಿದ. ಶ್ರೀಸೂಕ್ತ, ಪಂಚರಾತ್ರ ಇನ್ನನೇಕ ಆಗಮ ನಿಗಮಗಳಲ್ಲಿ ಅನೇಕ ದೇವತೆಗಳು ಹಾಗೂ ಇಂದ್ರದೇವನು ಮಾಡಿದ ಮಹಾಲಕ್ಷ್ಮಿಯ ಸ್ತುತಿಯನ್ನು ಕಾಣಬಹುದು. ಇಂಥ ಮಹಾಲಕ್ಷ್ಮಿಯನ್ನು ತನ್ನ ಪತಿಸಹಿತವಾಗಿ ಪೂಜಿಸಿದರೆ ಮಾತ್ರ ಅನುಗ್ರಹಿಸುವಳು. ಪ್ರತಿದಿನ ಹಾಗೂ ಪ್ರತಿ ಶುಕ್ರವಾರದಂದು ಉಪಾಸಿಸಬಹುದು. ಆಶ್ವಿನ ಮಾಸದ ಬಹುಳ ಅಮಾವಾಸ್ಯೆಯಂದು ಲಕ್ಷ್ಮೀಯನ್ನು ಪೂಜಿಸುವ ಸಂಪ್ರದಾಯವಿದೆ. ದೀಪಾವಳಿಯ ಪರ್ವಕಾಲದಲ್ಲಿ ಹರಿಸಹಿತ ಲಕುಮಿಯನ್ನು ಪೂಜಿಸಿದವರು ದೈವಾನುಗ್ರಹಕ್ಕೆ ಪಾತ್ರರಾಗುವರು. ಸಾಮಾನ್ಯವಾಗಿ ಅಮಾವಾಸ್ಯೆಯನ್ನು ಅಶುಭದಿನವೆಂದು ಪರಿಗಣಿಸ ಲಾಗುತ್ತದೆ; ಆದರೆ ಈ ಅಮಾವಾಸ್ಯೆಯು ಅದಕ್ಕೆ ಅಪವಾದವಾಗಿದೆ. ಈ ದಿನವು ಶುಭದಿನ. ಆದರೆ ಎಲ್ಲ ಕಾರ್ಯಗಳಿಗಲ್ಲ.
ಪೂಜೆ ಹೇಗೆ?: ಈ ದಿನ ಪ್ರಾತಃಕಾಲದಲ್ಲಿ ಮಂಗಲಸ್ನಾನ ಮಾಡಿ ದೇವರ ಪೂಜೆಯ ನಂತರ (ದಂಪತಿ)/ ಬ್ರಾಹ್ಮಣಭೋಜನ ಮಾಡಿಸಲು ವಿಧಿವಿಧಾನಗಳು ಪ್ರಾಶಸ್ಱ ನೀಡಿವೆ. ಪ್ರದೋಷಕಾಲ ಅಂದರೆ ಗೋಧೂಳಿ ಮೂಹೂರ್ತದಲ್ಲಿ, ಶೃಂಗರಿಸಿದ ಮಂಟಪದಲ್ಲಿ, ಶ್ರೀನಾರಾಯಣ ಸಹಿತಲಕ್ಷ್ಮೀಯನ್ನು ಆವಾಹನೆ ಮಾಡಬೇಕು. ಒಂದು ಪೀಠದ ಮೇಲೆ ಅಕ್ಷತೆಗಳಿಂದ ಅಷ್ಟದಳ ಕಮಲ ಅಥವಾ ಸ್ವಸ್ತಿಕವನ್ನು ಬಿಡಿಸಿ ಅದರ ಮೇಲೆ ಲಕ್ಷ್ಮೀಯ ಮೂರ್ತಿಯನ್ನು ಸ್ಥಾಪಿಸುತ್ತಾರೆ. ಕೆಲವು ಕಡೆಗಳಲ್ಲಿ ಕಲಶಕ್ಕೆ ಮುಖವಿರಿಸಿ ಅಥವಾ ಅದರ ಮೇಲೆ ತಾಮ್ರದ ತಟ್ಟೆಯನ್ನಿಟ್ಟು ಮೂರ್ತಿಯನ್ನು ಇಡುತ್ತಾರೆ. ಆರಂಭದಲ್ಲಿ ವಿನಾಯಕನ ಪೂಜೆಯಿಂದ ಪ್ರಾರಂಭಿಸಿ, ಹರಿದ್ರಾ ಕುಂಕುಮಾಕ್ಷತೆಗಳಿಂದ, ಸಕಲ ವೇದೋಕ್ತ ಮಂತ್ರಗಳಿಂದ, ಯಥಾಶಕ್ತಿ ಪೂಜಾ ಕೈಂಕರ್ಯ ನೆರವೇರಿಸಬೇಕು. ವಿಹಿತವಾದ ಅನೇಕ ಭಕ್ಷ್ಯಾದಿ ನೈವೇದ್ಯಕ್ಕೆ ಇರಿಸಬೇಕು. ಲಕ್ಷ್ಮೀದೇವಿಯ ಅನೇಕ ಸ್ತೋತ್ರಗಳು ಅಥವಾ ಹಾಡು ಭಕ್ತಿಯಿಂದ ಪಠಿಸಬೇಕು. ಆಶ್ವ ಯುಜ ಅಮಾವಾಸ್ಯೆಯ ರಾತ್ರಿ ಲಕ್ಷ್ಮಿಯು ಎಲ್ಲೆಡೆಗೆ ಸಂಚರಿಸಿ ತನ್ನ ನಿವಾಸಕ್ಕಾಗಿ ಯೋಗ್ಯ ಸ್ಥಾನವನ್ನು ಹುಡುಕುತ್ತಾಳೆ ಎಂದು ಪುರಾಣದಲ್ಲಿ ಹೇಳಲಾಗಿದೆ. ಎಲ್ಲಿ ಸ್ವಚ್ಛತೆ, ಸತ್ಯ, ಧಾರ್ವಿುಕ ವಾತಾವರಣ ಇರುವುದೋ ಅಲ್ಲಿ ಅವಳು ಆಗಮಿಸುವಳು. ಅಲ್ಲದೆ ಯಾವ ಮನೆಯಲ್ಲಿ ಚಾರಿತ್ರ್ಯವುಳ್ಳ, ಧರ್ಮನಿಷ್ಠ ದೈವಭಕ್ತರು ಮತ್ತು ಕ್ಷಮಾಶೀಲ ಪುರುಷರು, ಪತಿವ್ರತಾ ಸ್ತ್ರೀಯರು ಇರುವರೋ ಅಲ್ಲಿ ವಾಸಿಸಲು ಲಕ್ಷ್ಮೀಯು ಇಷ್ಟಪಡುತ್ತಾಳೆ. ಐಹಿಕ ಸುಖ ಮಾತ್ರ ವಲ್ಲದೇ ಪಾರಮಾರ್ಥಿಕ ಭೋಗವನ್ನಿತ್ತು ಸಲಹುವ ಸಕಲ ಚರಾಚರ ಜೀವರ ಮಾತೆಯೆನಿಸಿದ ಆ ಮಹಾಲಕ್ಷ್ಮಿಯನ್ನು ಆರಾಧಿಸಿ ಕರುಣೆಗೆ ಪಾತ್ರರಾಗೋಣ.