

ಕೇಂದ್ರ ಮುಂಗಡ ಪತ್ರದಲ್ಲಿ ಪ್ರಧಾನಮಂತ್ರಿ ಆವಾಸ್ ಯೋಜನೆ (ಪಿಎಂಎವೈ)ಗೆ -ಠಿ;48,000 ಕೋಟಿ ಹಂಚಿಕೆ ಆಗಿದೆ. ಇದು, ನಗರ ಪ್ರದೇಶಗಳಲ್ಲಿ ಕೈಗೆಟಕುವ ದರದ ವಸತಿ ಸೌಕರ್ಯ ಪಡೆಯುವ ಅವಕಾಶವನ್ನು ಹೆಚ್ಚಿಸಿದೆ. ಇದರ ಜತೆಗೆ ಹೋಮ್ ಲೋನ್ ಮೂಲಕ ತೆರಿಗೆ ಉಳಿಸು ವುದು ಸಾಧ್ಯವಿದೆ. ಇದಕ್ಕೆ ಸಂಬಂಧಿಸಿದ 5 ಅಂಶಗಳು ಇಲ್ಲಿವೆ.
ಬಿಟ್ಟು ಹೋದ ಆದಾಯ ನಮೂದಿಸಿ ಹೆಚ್ಚುವರಿ ತೆರಿಗೆ ಪಾವತಿ ಮಾಡುವುದಕ್ಕಾಗಿ ಎರಡು ವರ್ಷಗಳ ತನಕ ಐಟಿಆರ್ ಅಪ್ಡೇಟ್ ಮಾಡುವ ಯೋಜನೆ ಯಾವುದೇ ಅಮ್ನೆಸ್ಟಿ ಸ್ಕೀಮ್ ಅಲ್ಲ. ಈ ರೀತಿ ಆದಾಯ ನಮೂದಿಸಲು ಬಿಟ್ಟು ಹೋಗಿರುವುದಕ್ಕೆ ಸಕಾರಣವನ್ನು ಉಲ್ಲೇಖಿಸಬೇಕು. ಬಿಟ್ಟು ಹೋದ ಆದಾಯ ನಮೂದಿಸಿದಾಗ ಶೇಕಡ 25 ತೆರಿಗೆ ಪಾವತಿಸಬೇಕಾಗುತ್ತದೆ. ಐಟಿಆರ್ ಸಲ್ಲಿಸಿದ 12 ತಿಂಗಳ ಒಳಗೆ ಈ ತಿದ್ದುಪಡಿ ಮಾಡಿದಾಗ ಮಾತ್ರ ಶೇಕಡ 25ರ ತೆರಿಗೆ ಅನ್ವಯ. ಈ ಅವಧಿ ಮೀರಿ 24 ತಿಂಗಳ ಒಳಗೆ ಮಾಡಿದಾಗ ಶೇಕಡ 50 ತೆರಿಗೆ ಪಾವತಿಸಬೇಕಾಗುತ್ತದೆ ಎಂದು ಕಂದಾಯ ಕಾರ್ಯದರ್ಶಿ ತರುಣ್ ಬಜಾಜ್ ಬುಧವಾರ ಹೇಳಿದರು.
ಸೆಕ್ಷನ್ 80ಸಿ ಲೆಕ್ಕಾಚಾರ: ಹಳೆಯ ಐಟಿ ನಿಯಮ ಪ್ರಕಾರ, ತೆರಿಗೆ ಸ್ಲ್ಯಾಬ್ನಲ್ಲಿ ಶೇಕಡ 30 ತೆರಿಗೆ ಪಾವತಿಸುವವರು, ಸೆಕ್ಷನ್ 80ಸಿ ಪ್ರಕಾರ 1.5 ಲಕ್ಷ ರೂಪಾಯಿ ಡಿಡಕ್ಷನ್ ಕ್ಲೇಮ್ ಮಾಡಿ 45,000 ರೂಪಾಯಿ ಉಳಿಸಬಹುದು.
ಸೆಕ್ಷನ್ 80ಡಿ ಪ್ರಕಾರ ಉಳಿತಾಯ: ಆರೋಗ್ಯ ವಿಮೆಯ ಪ್ರೀಮಿಯಂ ಗರಿಷ್ಠ 25,000 ರೂ. (ಹಿರಿಯ ನಾಗರಿಕರಿಗೆ 50,000 ರೂ.)ಗೆ ಸೆ.80 ಡಿ ಪ್ರಕಾರ ತೆರಿಗೆ ವಿನಾಯಿತಿ ಇದೆ. ಇದಲ್ಲದೆ, 60 ವರ್ಷ ಮೇಲ್ಪಟ್ಟ ಪಾಲಕರು ಜತೆಗಿದ್ದರೆ ಅವರ ವೈದ್ಯಕೀಯ ವೆಚ್ಚ ಗರಿಷ್ಠ 50,000 ರೂಪಾಯಿಗೆ ತೆರಿಗೆ ವಿನಾಯಿತಿ ಪಡೆಯಬಹುದು.
ತೆರಿಗೆ ಸ್ಲ್ಯಾಬ್ ಬದಲಿಲ್ಲ: ಪ್ರಸಕ್ತ ಬಜೆಟ್ನಲ್ಲಿ ಆದಾಯ ತೆರಿಗೆ ಸ್ಲ್ಯಾಬ್ಗಳಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಈ ಹಿಂದಿನ ತೆರಿಗೆ ದರಗಳೇ ಮುಂದುವರಿಯಲಿದೆ. ಜತೆಗೆ ಹೊಸ ವಿನಾಯಿತಿಗಳನ್ನೂ ನೀಡಿಲ್ಲ. ಈಗಿರುವ ವೈಯಕ್ತಿಕ ತೆರಿಗೆ ವಿವರ ಇಲ್ಲಿದೆ.
(ವಿವಿಧ ಬಗೆಯ ವಿನಾಯಿತಿ, ಡಿಡಕ್ಷನ್ಗಳ ಪ್ರಯೋಜನ ಪಡೆದು ತೆರಿಗೆಯ ಪ್ರಮಾಣವನ್ನು ಕಡಿಮೆ ಮಾಡಿಕೊಳ್ಳಲು ಅವಕಾಶ ಇದೆ.)
ಭಾರತದ ಜಿಡಿಪಿ ಶೇ. 7.8ರ ದರದಲ್ಲಿ ಪ್ರಗತಿಹೊಂದಲಿದೆ ಎಂದು ಸ್ವದೇಶಿ ರೇಟಿಂಗ್ ಸಂಸ್ಥೆ ಕ್ರಿಸೆಲ್ ತಿಳಿಸಿದೆ. ಮಂಗಳವಾರ ಮಂಡನೆಯಾದ ಬಜೆಟ್ನಲ್ಲಿ ಪ್ರಗತಿಯ ದರವನ್ನು ಶೇ. 8.5 ಎಂದು ಅಂದಾಜು ಮಾಡಲಾಗಿತ್ತು. ಈಗ ಕ್ರಿಸೆಲ್ ಇದಕ್ಕಿಂತ ಕಡಿಮೆ ಅಂದಾಜು ವ್ಯಕ್ತಪಡಿಸಿದೆ. ಭಾರತದ ಆರ್ಥಿಕತೆಗೆ ಅಪಾಯಗಳು ಇನ್ನೂ ಸಂಪೂರ್ಣ ದೂರವಾಗಿಲ್ಲ. ಜತೆಗೆ ಜಾಗತಿಕ ಅರ್ಥ ವ್ಯವಸ್ಥೆಯಲ್ಲೂ ಈ ವರ್ಷ ಮಂದಗತಿ ಕಂಡುಬರುವ ಸಾಧ್ಯತೆ ಇದೆ. ಅಮೆರಿಕ ಫೆಡ್ ಸಹಿತ ಪ್ರಮುಖ ದೇಶಗಳಲ್ಲಿ ಬಡ್ಡಿದರ ಏರಿಕೆ ನಿರೀಕ್ಷೆ ಮಾಡಲಾಗಿದೆ. ಇದು ಭಾರತದ ಮೇಲೂ ಪರಿಣಾಮ ಬೀರುವುದು ನಿಶ್ಚಿತವಾಗಿದೆ. ಈಗಾಗಲೇ 85 ಡಾಲರ್ ತಲುಪಿರುವ ಕಚ್ಚಾತೈಲ ದರ ಇನ್ನೂ ಏರಿಕೆ ಕಾಣುವ ಲಕ್ಷಣ ಇದೆ. ಇದರಿಂದ ಭಾರತದ ಆರ್ಥಿಕತೆ ಮೇಲೆ ಒತ್ತಡ ಬೀರಲಿದೆ ಎಂದು ವರದಿಯಲ್ಲಿ ಹೇಳಲಾಗಿದೆ.
ನವದೆಹಲಿ: ಕ್ರಿಪ್ಟೋಕರೆನ್ಸಿಯ ಆದಾಯ ಜೂಜಿನಿಂದ ಬಂದ ಆದಾಯ ಅಥವಾ ಕುದುರೆ ರೇಸ್ ಗೆದ್ದಾಗ ಸಿಗುವ ಆದಾಯಕ್ಕೆ ಸಮ ಎಂದು ಕೇಂದ್ರ ಸರ್ಕಾರ ಪರಿಗಣಿಸಿದೆ. ಹೀಗಾಗಿ ಈ ವರ್ಷದ ಏ.1ರಿಂದ ಅನ್ವಯವಾಗುವಂತೆ ಈ ಆದಾಯದ ಮೇಲೆ ಶೇಕಡ 30 ತೆರಿಗೆ ಮತ್ತು ಶೇಕಡ 15 ಸೆಸ್, ಸಚಾರ್ಜ್ಗಳು ಸೇರಿ ಒಟ್ಟು ಶೇಕಡ 45 ಸರ್ಕಾರದ ಬೊಕ್ಕಸಕ್ಕೆ ಸೇರಲಿದೆ ಎಂದು ಕಂದಾಯ ಕಾರ್ಯದರ್ಶಿ ತರುಣ್ ಬಜಾಜ್ ಬುಧವಾರ ಸ್ಪಷ್ಟಪಡಿಸಿದರು.
ಮುಂದಿನ ಹಣಕಾಸು ವರ್ಷದ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸುವಾಗ ಆ ಅರ್ಜಿಯಲ್ಲಿ ಕ್ರಿಪ್ಟೋ ಆದಾಯಕ್ಕೆ ಒಂದು ಕಾಲಂ ಇರಲಿದೆ. ಅದರಲ್ಲಿ ಕ್ರಿಪ್ಟೋಕರೆನ್ಸಿಯಿಂದ ಬಂದ ಆದಾಯವನ್ನು ನಮೂದಿಸಬೇಕಾಗುತ್ತದೆ. ಕ್ರಿಪ್ಟೋಕರೆನ್ಸಿ, ನಾನ್-ಫಂಗಿಬಲ್ ಟೋಕನ್ಸ್ (ಎನ್ಜಿಟಿ) ಮೇಲಿನ ಹೂಡಿಕೆಯಿಂದ ಬರುವ ಆದಾಯ 50 ಲಕ್ಷ ರೂಪಾಯಿ ಮೇಲ್ಪಟ್ಟು ಇದ್ದರೆ ಆಗ ಶೇಕಡ 30 ತೆರಿಗೆ ಮತ್ತು ಶೇಕಡ 15 ಸೆಸ್ ಮತ್ತು ಸಚಾರ್ಜ್ಗಳು ಅನ್ವಯವಾಗಲಿವೆ. 10,000 ರೂಪಾಯಿ ಮೇಲ್ಪಟ್ಟ ಹೂಡಿಕೆಗೆ ಶೇಕಡ 1 ಟಿಡಿಎಸ್ ಜುಲೈ 1ರಿಂದ ಅನ್ವಯವಾಗಲಿದೆ. ಇದರ ಮೂಲಕ ಹೂಡಿಕೆಯನ್ನು ಟ್ರ್ಯಾಕ್ ಮಾಡುವುದು ಸಾಧ್ಯವಿದೆ. ಅಷ್ಟೇ ಅಲ್ಲ, ವರ್ಷಕ್ಕೆ ವ್ಯಕ್ತಿ/ಹಿಂದು ಅವಿಭಜಿತ ಕುಟುಂಬ 50,000 ರೂಪಾಯಿಗಿಂತ ಹೆಚ್ಚು ಹೂಡಿಕೆ ಮಾಡುವಂತೆ ಇಲ್ಲ ಎಂದು ತರುಣ್ ಬಜಾಜ್ ವಿವರಿಸಿದರು.
ಕ್ರಿಪ್ಟೋಕರೆನ್ಸಿ ಮೇಲಿನ ಹೂಡಿಕೆ ಮತ್ತು ಆದಾಯಕ್ಕೆ ಸಂಬಂಧಿಸಿದ ನಿಯಮ ಪರಿಷ್ಕರಣೆ ಹೊಂದಿದ ಹಣಕಾಸು ಮಸೂದೆ ಸಂಸತ್ತಿನಲ್ಲಿ ಮಂಡನೆ ಆಗಿದೆ. ಆದರೆ, ಕ್ರಿಪ್ಟೋಕರೆನ್ಸಿಯ ಕಾನೂನುಮಾನ್ಯತೆಯ ಬಗ್ಗೆ ಮಸೂದೆಯಲ್ಲಿ ಏನೂ ಹೇಳಿಲ್ಲ. ಬಿಟ್ಕಾಯಿನ್, ಎಥೀರಿಯಂ, ಎನ್ಎಫ್ಟಿ ಮುಂತಾದ ಕ್ರಿಪ್ಟೋಕರೆನ್ಸಿ, ಟೋಕನ್ಗಳು ಎಂದಿಗೂ ಕಾನೂನು ಮಾನ್ಯತೆ ಹೊಂದಿದವು ಆಗಿಲ್ಲ. ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಬೆಂಬಲಿತ ಡಿಜಿಟಲ್ ಕರೆನ್ಸಿ ಎಂದಿಗೂ ಮಾನ್ಯತೆ ಕಳೆದುಕೊಳ್ಳುವುದಿಲ್ಲ. ಕ್ರಿಪ್ಟೋ ಅಸೆಟ್ಗಳ ಮೌಲ್ಯ ಇಬ್ಬರು ವ್ಯಕ್ತಿಗಳ ನಡುವೆ ಅಂದಾಜಿಸಲ್ಪಡುತ್ತದೆ. ಇದನ್ನು ಸರ್ಕಾರ ದೃಢೀಕರಿಸುವ ಕೆಲಸ ಮಾಡುವುದಿಲ್ಲ ಎಂದು ಕೇಂದ್ರ ಹಣಕಾಸು ಕಾರ್ಯದರ್ಶಿ ಟಿವಿ ಸೋಮನಾಥನ್ ಸ್ಪಷ್ಟಪಡಿಸಿದರು.
ಮುಂಬೈ: ಬಜೆಟ್ ಮಾರನೇ ದಿನ ಬುಧವಾರವೂ ಭಾರತೀಯ ಷೇರುಪೇಟೆ ಭರ್ಜರಿ ಏರಿಕೆ ಕಂಡಿದ್ದು, ಕೇಂದ್ರ ಸರ್ಕಾರ ಮಂಡಿಸಿರುವ ಮುಂಗಡ ಪತ್ರ ಹೂಡಿಕೆದಾರರಲ್ಲಿ ಉತ್ಸಾಹ ಮೂಡಿಸಿದಂತಿದೆ. ಸೆನ್ಸೆಕ್ಸ್ 695.76 ಅಂಕ ಏರಿಕೆ ಕಂಡು 59,558.33ಕ್ಕೆ ಏರಿಕೆ ಕಂಡಿದ್ದರೆ. ನಿಫ್ಟಿ 203 ಅಂಕ ಏರಿಕೆ ಕಂಡು, 17,780ಕ್ಕೆ ಹೆಚ್ಚಳವಾಗಿದೆ. ಇಂಡಸ್ಇಂಡ್ಬ್ಯಾಂಕ್ ಶೇ. 5 ಏರಿಕೆ ಕಂಡಿದೆ. ಬಜಾಜ್ ಫೈನಾನ್ಸ್ ಎಚ್ಸಿಎಲ್ ಟೆಕ್, ಕೊಟಕ್ ಬ್ಯಾಂಕ್, ಆಕ್ಸಿಸ್ ಬ್ಯಾಂಕ್ ಏರಿಕೆ ದಾಖಲಿಸಿವೆ. ಟೆಕ್ ಮಹಿಂದ್ರಾ, ನೆಸ್ಲೆ, ಮಾರುತಿ, ಎಲ್ಎನ್ಟಿ ಇಳಿಕೆ ಕಂಡಿವೆ. ಸೆನ್ಸೆಕ್ಸ್ ಪಟ್ಟಿಯಲ್ಲಿ 21 ಷೇರುಗಳು ಏರಿಕೆ ಕಂಡಿದ್ದರೆ, 9 ಷೇರುಗಳು ಇಳಿಕೆ ಕಂಡಿವೆ. ಏಷ್ಯಾ ರಾಷ್ಟ್ರಗಳ ಮಾರುಕಟ್ಟೆಯಲ್ಲೂ ತುಸು ಏರಿಕೆ ಕಂಡುಬಂದಿದೆ.