

FASTag Pass: ರಾಷ್ಟ್ರೀಯ ಹೆದ್ದಾರಿಗಳ ಮೂಲಕ ಊರಿಂದ ಊರಿಗೆ ಕಾರಿನಲ್ಲಿ ಪ್ರಯಾಣಿಸುವವರಿಗೆ ಕೇಂದ್ರ ಸರ್ಕಾರವು ಸಿಹಿ ಸುದ್ದಿಯನ್ನೇ ನೀಡಿದೆ. ಟೋಲ್ ಪ್ಲಾಜಾಗಳಲ್ಲಿ ಪದೇ ಪದೇ ಹಣವನ್ನು ಪಾವತಿ ಮಾಡುವ ಮೂಲಕ ರಿಚಾರ್ಚ್ ಮಾಡಿಕೊಳ್ಳುತ್ತಿದ್ದ ಪ್ರಯಾಣಿಕರಿಗೆ ಕೇಂದ್ರ ಘೋಷಿಸಿರುವ ವಾರ್ಷಿಕ ಪಾಸ್ ಬಂಪರ್ ಆಫರ್ ಆಗಿ ಪರಿಣಮಿಸಿದೆ. ಇದು ವಾಹನ ಚಾಲಕರಿಗೆ ಖಂಡಿತ ಒಳ್ಳೆ ಸುದ್ದಿಯೇ ನಿಜ.
ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಫಾಸ್ಟ್ಟ್ಯಾಗ್ ವಾರ್ಷಿಕ ಪಾಸ್ ಅನ್ನು ಪರಿಚಯಿಸಲಿದೆ. ಇದು ಈ ವರ್ಷದ ಆಗಸ್ಟ್ 15ರಿಂದಲೇ ಜಾರಿಗೆ ಬರಲಿದೆ. ರಾಷ್ಟ್ರೀಯ ಹೆದ್ದಾರಿಗಳಲ್ಲಿ ಆಗಾಗ್ಗೆ ಪ್ರಯಾಣಿಸುವವರಿಗೆ ಪದೇ ಪದೇ ರೀಚಾರ್ಜ್ ಮಾಡಿಕೊಳ್ಳುವ ತೊಂದರೆಯನ್ನು ತಪ್ಪಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಈ ಕ್ರಮವನ್ನು ಕೈಗೊಂಡಿದೆ. ಪ್ರಯಾಣಿಕರ ಪ್ರಯಾಣವನ್ನು ಇನ್ನಷ್ಟು ಸುಲಭಗೊಳಿಸುವುದರ ಜೊತೆಗೆ, ಟೋಲ್ ಹಣವನ್ನು ಅಗ್ಗವಾಗಿಸುವುದು ಇದರ ಉದ್ದೇಶವಾಗಿದೆ.
ಪದೇ ಪದೇ ರೀಚಾರ್ಜ್ ಮಾಡುವ ತೊಂದರೆಯನ್ನು ಇಳಿಸುವುದು, ಟೋಲ್ ವಹಿವಾಟುಗಳನ್ನು ವೇಗಗೊಳಿಸುವುದು, ಪ್ಲಾಜಾಗಳಲ್ಲಿ ಹೆಚ್ಚಿನ ವಾಹನ ದಟ್ಟಣೆಯನ್ನು ಕಡಿತಗೊಳಿಸುವುದು ಮತ್ತು ಟೋಲ್ ಪ್ಲಾಜಾಗಳಲ್ಲಿ ಪಾವತಿಗಳನ್ನು ಸುಲಭಗೊಳಿಸುವುದು ವಾರ್ಷಿಕ್ ಪಾಸ್ನ ಮೂಲ ಉದ್ದೇಶವಾಗಿದೆ. ಇದು ವಾಹನ ಸವಾರರಿಗೆ ಭಾರೀ ಅನುಕೂಲಕವಾಗಲಿದೆ ಎಂಬುದರಲ್ಲಿ ಅನುಮಾನವೇ ಇಲ್ಲ.
ವಾರ್ಷಿಕ ಪಾಸ್ನ ಬೆಲೆ 3,000 ರೂ. ಈ ಮೊತ್ತವನ್ನು ಪಾವತಿಸುವ ಖಾಸಗಿ ವಾಹನ ಮಾಲೀಕರು, ಒಂದು ವರ್ಷ ಅಥವಾ 200 ಟೋಲ್ ಕ್ರಾಸಿಂಗ್ಗಳವರೆಗೆ ಟೋಲ್ ಪಾವತಿಸುವ ಅಗತ್ಯವಿಲ್ಲ. ಈ ಸೌಲಭ್ಯ ಕಾರು, ಜೀಪು, ವ್ಯಾನ್ಗಳಂತಹ ವಾಣಿಜ್ಯೇತರ ವಾಹನಗಳಿಗೆ ಮಾತ್ರ ಅನ್ವಯಿಸುತ್ತದೆ. ಈ ಪಾಸ್ ಖರೀದಿಸಲು, ವಾಹನವು ಈಗಾಗಲೇ ಸಕ್ರಿಯ ಫಾಸ್ಟ್ಟ್ಯಾಗ್ ಅನ್ನು ಹೊಂದಿರಬೇಕು. ನೀವು 'ರಾಜ್ಮಾರ್ಗ್ ಯಾತ್ರಾ' ಅಪ್ಲಿಕೇಶನ್ ಅಥವಾ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರದ ಅಧಿಕೃತ ವೆಬ್ಸೈಟ್ ಮೂಲಕ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಬಹುದು.
ಇನ್ನೊಂದು ಮುಖ್ಯವಾದ ವಿಷಯವೆಂದರೆ ಈ ಪಾಸ್ NHAI ಮತ್ತು ಕೇಂದ್ರ ಸಾರಿಗೆ ಸಚಿವಾಲಯದ ಅಡಿಯಲ್ಲಿ ಬರುವ ರಾಷ್ಟ್ರೀಯ ಹೆದ್ದಾರಿಗಳು ಮತ್ತು ಎಕ್ಸ್ಪ್ರೆಸ್ವೇಗಳಲ್ಲಿ ಮಾತ್ರ ಮಾನ್ಯವಾಗಿರುತ್ತದೆ. ಮುಂಬೈ-ಪುಣೆ ಎಕ್ಸ್ಪ್ರೆಸ್ವೇ, ಸಮೃದ್ಧಿ ಮಹಾಮಾರ್ಗ್, ಅಟಲ್ ಸೇತು ಮುಂತಾದ ರಾಜ್ಯ ಸರ್ಕಾರಿ ರಸ್ತೆಗಳಲ್ಲಿ ಮಾನ್ಯವಾಗಿಲ್ಲ. ಇದು ಗಮನಿಸಬೇಕಾದ ವಿಷಯ. ಈ ಮಾರ್ಗಗಳಲ್ಲಿ ಪ್ರಯಾಣಿಸುವಾಗ, ಟೋಲ್ ಶುಲ್ಕವನ್ನು ಎಂದಿನಂತೆ ಫಾಸ್ಟ್ಟ್ಯಾಗ್ ವ್ಯಾಲೆಟ್ನಿಂದಲೇ ಕಡಿತಗೊಳಿಸಲಾಗುತ್ತದೆ.
ಮತ್ತೊಂದು ಮುಖ್ಯ ವಿಷಯ, ಒಂದು ವಾಹನದಲ್ಲಿ ತೆಗೆದುಕೊಂಡ ಪಾಸ್ ಅನ್ನು ಮತ್ತೊಂದು ವಾಹನಕ್ಕೆ ವರ್ಗಾಯಿಸಲು ಸಾಧ್ಯವಿಲ್ಲ. ಅಲ್ಲದೆ, 200 ಟ್ರಿಪ್ ಅಥವಾ ಒಂದು ವರ್ಷದ ನಂತರ ಪಾಸ್ ಅವಧಿ ಮುಕ್ತಾಯಗೊಳ್ಳುತ್ತದೆ. ಬಳಕೆದಾರರು ಬಯಸಿದರೆ ಮತ್ತೆ ಅರ್ಜಿ ಸಲ್ಲಿಸಬೇಕಾಗುತ್ತದೆ. ಈ ಪಾಸ್ಗೆ ಯಾವುದೇ ಸ್ವಯಂ ನವೀಕರಣ ಸೌಲಭ್ಯವಿಲ್ಲ.