ಯೂಕ್ರೇನ್​ನಲ್ಲಿ ಸಿಲುಕಿಕೊಂಡ ಭಾರತೀಯರೆಷ್ಟು?!; ಕೆಲವು ದಿನಗಳ ಹಿಂದೆಯೇ ಮರಳಿದ್ದರು ಸಾವಿರಾರು ಮಂದಿ..

Ukraine
Published on

ನವದೆಹಲಿ: ರಷ್ಯಾ-ಯೂಕ್ರೇನ್​ ಯುದ್ಧ ಹಿನ್ನೆಲೆಯಲ್ಲಿ ಕೇಳಿಬಂದ ಅತಿಹೆಚ್ಚಿನ ಸುದ್ದಿ ಎಂದರೆ ಅಲ್ಲಿ ಸಿಲುಕಿರುವ ಭಾರತೀಯರ ಕುರಿತಾದ್ದು. ದೇಶದ ವಿವಿಧ ರಾಜ್ಯಗಳ ನೂರಾರು ಮಂದಿ ಅಲ್ಲಿರುವ ಮಾಹಿತಿ ಹೊರಬೀಳುತ್ತಲೇ ಇದ್ದು, ಕರ್ನಾಟಕದಿಂದಲೂ ಬಹಳಷ್ಟು ಯುವಕ-ಯುವತಿಯರು ಅಲ್ಲಿ ಸಿಲುಕಿಕೊಂಡಿದ್ದಾರೆ.

ಈ ನಡುವೆ ಅಲ್ಲಿ ಸಿಲುಕಿರುವ ಭಾರತೀಯರನ್ನು ಸುರಕ್ಷಿತವಾಗಿ ಕರೆತರುವ ಪ್ರಯತ್ನವನ್ನು ಕೇಂದ್ರ ಸರ್ಕಾರ ಮಾಡುತ್ತಿದ್ದು, ಆ ಕುರಿತ ಪ್ರಕ್ರಿಯೆಗಳಿಗೆ ಚಾಲನೆ ಸಿಕ್ಕಿದೆ. ಈ ಎಲ್ಲದರ ಕುರಿತು ವಿದೇಶಾಂಗ ಕಾರ್ಯದರ್ಶಿ ಹರ್ಷ ವಿ. ಶೃಂಗ್ಲ ಒಂದಷ್ಟು ಮಾಹಿತಿ ನೀಡಿದ್ದಾರೆ.

ಒಂದು ತಿಂಗಳ ಹಿಂದೆಯೇ ನಾವು ಯೂಕ್ರೇನ್​ನಲ್ಲಿರುವ ಭಾರತೀಯ ಮಾಹಿತಿ ಕಲೆ ಹಾಕಲು ನೋಂದಣಿ ಆರಂಭಿಸಿದ್ದೆವು. ಹೀಗೆ ಲಭ್ಯ ಇರುವ ನೋಂದಣಿ ಪ್ರಕಾರ ಯೂಕ್ರೇನ್​ನಲ್ಲಿ 20 ಸಾವಿರ ಮಂದಿ ಇದ್ದರು ಹಾಗೂ ಕೆಲವೇ ದಿನಗಳ ಹಿಂದೆ ಅಲ್ಲಿಂದ 4 ಸಾವಿರ ಭಾರತೀಯರು ಸ್ವದೇಶಕ್ಕೆ ಮರಳಿದ್ದರು. ಇನ್ನು ದೆಹಲಿಯಲ್ಲಿನ ಕಂಟ್ರೋಲ್ ರೂಮ್​ಗೆ 980 ಕರೆಗಳು ಬಂದಿದ್ದು, 850 ಇ-ಮೇಲ್​ಗಳು ಬಂದಿವೆ ಎಂದೂ ಅವರು ಹೇಳಿದ್ದಾರೆ. ಅದಾಗ್ಯೂ ಸದ್ಯ ಅಲ್ಲಿ ಎಷ್ಟು ಜನ ಸಿಲುಕಿದ್ದಾರೆ ಎಂಬ ಕುರಿತು ನಿಖರವಾದ ಮಾಹಿತಿ ಹೊರಬಿದ್ದಿಲ್ಲ.

ರಷ್ಯಾದ ಅಧ್ಯಕ್ಷ ವ್ಲಾದಿಮರ್​ ಪುಟಿನ್​ ಜತೆ ಶೀಘ್ರದಲ್ಲೇ ಪ್ರಧಾನಿ ಮೋದಿ ಮಾತನಾಡಲಿದ್ದಾರೆ. ಮಾತ್ರವಲ್ಲ, ಯೂಕ್ರೇನ್​ನಲ್ಲಿರುವ ಭಾರತೀಯರಿಗಾಗಿ ನಮ್ಮ ವಿದೇಶಾಂಗ ಸಚಿವಾಲಯ ಎಲ್ಲ ಅಗತ್ಯ ನೆರವು ನೀಡಲಿದೆ ಎಂದು ಮೋದಿಯವರು ತಿಳಿಸಿದ್ದಾರೆ. ಅಲ್ಲದೆ ಯೂಕ್ರೇನ್​ನಲ್ಲಿರುವ ಎಲ್ಲ ವಿಶ್ವವಿದ್ಯಾಲಯಗಳು ಆನ್​ಲೈನ್​ನಲ್ಲಿ ತರಗತಿ ನಡೆಸುವಂತೆ ಕೋರುವ ಮಹತ್ವದ ಮಾತುಕತೆಯನ್ನೂ ಮಾಡಲಿರುವುದಾಗಿ ವಿದೇಶಾಂಗ ಕಾರ್ಯದರ್ಶಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net