Ajit Pawar | ಅಕ್ರಮ ಮಣ್ಣು ತೆಗೆಯುವುದನ್ನು ತಡೆಯಲು ಬಂದ ಮಹಿಳಾ ಐಪಿಎಸ್​​ ಅಧಿಕಾರಿಗೆ ಮಹಾ ಡಿಸಿಎಂ ಅಜಿತ್​ ಅವಾಜ್​​​ !

Ajit Pawar
Published on

Ajit Pawar: ಅಕ್ರಮವಾಗಿ ಮಣ್ಣು ಅಗೆಯುತ್ತಿರುವುದನ್ನು ತಡೆಯಲು ತೆರಳಿದ್ದ ಮಹಿಳಾ ಐಪಿಎಸ್​ ಅಧಿಕಾರಿಯ ಮೇಲೆ ಉಪಮುಖ್ಯಮಂತ್ರಿ ಅಜಿತ್​​ ಪವಾರ್​​ ಒತ್ತಡ ಹೇರಿದ್ದರೆ ಎನ್ನಲಾದ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು, ಈ ನಡೆಯಿಂದ ಡಿಸಿಎಂ ಪವಾರ್​ ಹೊಸ ವಿವಾದಕ್ಕೆ ಸಿಲುಕಿದ್ದಾರೆ ಎನ್ನಲಾಗಿದೆ.

ಮಹಾರಷ್ಟ್ರದ ಸೋಲಾಪುರ ಜಿಲ್ಲೆಯ ಕರ್ಮಲಾ ತಾಲೂಕಿನ ಕುರ್ಡು ಎಂಬ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ರಸ್ತೆ ಕಾಮಗಾರಿಗೆ ಬಳಸುತ್ತಿದ್ದ ಮಣ್ಣನ್ನು ಅಕ್ರಮವಾಗಿ ಅಗೆಯುತ್ತಿದ್ದರು ಎಂಬ ದೂರು ಬಂದ ಹಿನ್ನಲೆಯಲ್ಲಿ, ಉಪವಿಭಾಗೀಯ ಪೊಲೀಸ್​​ ಅಧಿಕಾರಿ ಅಂಜನಾ ಕೃಷ್ಣ, ಸ್ಥಳಕ್ಕೆ ಭೇಟಿ ನೀಡಿದ್ದರು ಎಂದು ಹೇಳಲಾಗುತ್ತಿದೆ. ಈ ವೇಳೆ ಗ್ರಾಮಸ್ಥರು ಪೊಲೀಸ್​ ಅಧಿಕಾರಿಗಳೊಂದಗೆ ವಾಗ್ವಾದಕ್ಕಿಳಿದರು, ಸ್ಥಳೀಯ ಎನ್​ಸಿಪಿ ಕಾರ್ಯಕರ್ತರು ನೇರವಾಗಿ ಅಜಿತ್​​ ಪವಾರ್​ಗೆ ಕರೆ ಮಾಡಿ, ಸ್ಥಳದಲ್ಲಿದ್ದ ಅಂಜನಾ ಕೃಷ್ಣ ಅವರಿಗೆ ನೀಡಿರುವುದು ವಿಡಿಯೋದಲ್ಲಿ ಕಾಣಬಹುದು.

ಸದ್ಯ ವೈರಲ್​​ ಆಗಿರುವ ವಿಡಿಯೋವನ್ನು ಅನೇಕರು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು, ಅದರಲ್ಲಿ ಡಿಸಿಎಂ ಅಜಿತ್​ ಪವಾರ್​, ತಕ್ಷಣ ಕಾರ್ಯಾಚರಣೆಯನ್ನು ನಿಲ್ಲಿಸಿ, ಅಲ್ಲಿಂದ ತೆರಳುವಂತೆ ಸೂಚಿಸುತ್ತಾರೆ, ಆದರೆ ಅಧಿಕಾರಿ ಅಂಜನಾ, ಪವಾರ್​ ಧ್ವನಿಯನ್ನು ಗುರುತಿಸಲಾಗದೆ, ನೀವು ಏನು ಹೇಳುತ್ತಿದ್ದೀರಿ ಎಂದು ನನಗೆ ಅರ್ಥವಾಗುತ್ತಿದೆ, ಆದರೆ ನಾನು ಉಪಮುಖ್ಯಮಂತ್ರಿ ಅವರೊಂದಿಗೆ ಮಾತನಾಡುತ್ತಿದ್ದೇನೆಯೇ ಎಂದು ನನಗೆ ಅರ್ಥವಾಗುತ್ತಿಲ್ಲ, ದಯವಿಟ್ಟು ನನ್ನ ಮೊಬೈಲ್​​ ಸಂಖ್ಯೆಗೆ ನೇರವಾಗಿ ಕರೆ ಮಾಡಬಹುದೇ? ಎಂದಿದ್ದಾರೆ.

ಅಧಿಕಾರಿಯ ಮಾತಿಗೆ ಆಕ್ರೋಶಗೊಂಡ ಡಿಸಿಎಂ, ನಿನಗೆ ಎಷ್ಟು ಧೈರ್ಯ, ನಾನು ಹೇಳಿದರು ಕೇಳುತಿಲ್ಲವಲ್ಲ, ನಿನ್ನ ಮೊಬೈಲ್​ ನಂಬರ್​ ಕೊಡು ನಾನೇ ನಿನಗೆ ವಿಡಿಯೋ ಕರೆ ಮಾಡಿ ಖಾತ್ರಿ ಪಡಿಸುವೆ ಎಂದಿದ್ದಾರೆ.

ಅಜಿತ್ ಪವಾರ್ ನಡೆಯನ್ನು ಸಮರ್ಥಿಸಿಕೊಂಡಿರುವ ಎನ್​ಸಿಪಿ, ಪಕ್ಷದ ಕಾರ್ಯಕರ್ತರನ್ನು ಸಮಾಧಾನಪಡಿಸಲು ಅಜಿತ್ ದಾದಾ ಐಪಿಎಸ್ ಅಧಿಕಾರಿಯನ್ನು ಬೆದರಿಸಿರಬಹುದು, ಅಕ್ರಮ ಮಣ್ಣು ಸಾಗಾಣಿಕೆ ಸಂಪೂರ್ಣವಾಗಿ ನಿಲ್ಲಿಸುವ ಉದ್ದೇಶ ಅವರಿಗೆ ಇರಲಿಲ್ಲ ಎಂದಿದ್ದು, ಪವಾರ್ ಕಾನೂನುಬಾಹಿರ ಚಟುವಟಿಕೆಗಳನ್ನು ಬೆಂಬಲಿಸುವುದಿಲ್ಲ ಎಂದು ತಿಳಿಸಿದ್ದಾರೆ.

ಅಜಿತ್​​ ಪವಾರ್ ಅವರನ್ನು ರಾಜಕೀಯವಾಗಿ ಹಣಿಯಲು ಈ ವಿಡಿಯೋವನ್ನು ಬಳಸಿಕೊಳ್ಳಲಾಗುತ್ತಿದೆ ಎಂದು ಎನ್​ಸಿಪಿ ಆರೋಪಿಸಿದೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net