

ಬೆಂಗಳೂರು: ತುಮಕೂರು ಅರಸಿಕೆರೆಯಿಂದ ನಗರಕ್ಕೆ ಬಂದು ಮನೆ ಕಳ್ಳತನ ಮಾಡುತ್ತಿದ್ದ ಆರೋಪಿಯನ್ನು ಸೋಲದೇವನಹಳ್ಳಿ ಪೊಲೀಸರು ಬಂಧಿಸಿದ್ದಾರೆ.
ಹಾಸನ ಜಿಲ್ಲೆ ಅರಸಿಕೆರೆ ತಾಲೂಕಿನ ಜೆ.ಸಿ.ಪುರ ಗ್ರಾಮದ ಮುಸ್ಲಿಂ ಕಾಲನಿ ನಿವಾಸಿ ಶೋಯೆಬ್ ಪಾಷ ಅಲಿಯಾಸ್ ತುರ್ಕ ಬಾಬು ಬಂಧಿತ. 101 ಗ್ರಾಂ ಚಿನ್ನಾಭರಣ ಹಾಗೂ 2 ಲ್ಯಾಪ್‌ಟಾಪ್‌ಗಳು ಸೇರಿ 8 ಲಕ್ಷ ರೂ. ಮೌಲ್ಯದ ಜಪ್ತಿ ಮಾಡಲಾಗಿದೆ. ಕೆಲ ತಿಂಗಳ ಹಿಂದೆ ಚಿಕ್ಕಬಾಣವಾರದ ವಿನಾಯಕ ಲೇಔಟ್‌ನಲ್ಲಿ ಪುಷ್ಪಾ ಎಂಬುವರ ಮನೆಯಲ್ಲಿ ಕಳ್ಳತನವಾಗಿತ್ತು. ಈ ಕೃತ್ಯದ ತನಿಖೆ ನಡೆಸಿದ ಪೊಲೀಸರು, ಸಿಸಿ ಕ್ಯಾಮರಾ ಮತ್ತು ಬೆರಳಚ್ಚು ಮಾದರಿ ಸೇರಿ ತಾಂತ್ರಿಕ ಮಾಹಿತಿ ಆಧರಿಸಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವೃತ್ತಿಪರ ಕ್ರಿಮಿನಲ್ ಆಗಿರುವ ಪಾಷ, ಹಲವು ವರ್ಷಗಳಿಂದ ಕಾನೂನು ಬಾಹಿರ ಕೃತ್ಯಗಳಲ್ಲಿ ತೊಡಗಿದ್ದಾನೆ. 9ನೇ ತರಗತಿ ಓದಿರುವ ಆರೋಪಿ, ಮೊದಲು ಉಮೇಶ್ ಅಲಿಯಾಸ್ ಸಿ.ಕೆ.ಬಾಬು ಎಂಬಾತನ ಜತೆ ಸೇರಿ ಖೋಟಾ ನೋಟು ದಂಧೆಯಲ್ಲಿ ತೊಡಗಿದ್ದ.
ಈ ಕೃತ್ಯದಲ್ಲಿ ರಾಜಗೋಪಾಲನಗರ ಪೊಲೀಸರು ಬಂಧಿಸಿ ಜೈಲಿಗೆ ಬಿಟ್ಟಿದ್ದರು. ಪ್ರಕರಣದಲ್ಲಿ ಜಾಮೀನು ಪಡೆದು ಜೈಲಿನಿಂದ ಹೊರಬಂದ ಬಳಿಕ ಪಾಷ ಮನೆಗಳ್ಳತನ ಕೃತ್ಯಕ್ಕಿಳಿದಿದ್ದ.
ಅರಸಿಕೆರೆಯಿಂದ ರೈಲಿನಲ್ಲಿ ಬಂದು ನೆಲಮಂಗಲದ ಲಾಡ್ಜ್‌ನಲ್ಲಿ ಉಳಿದುಕೊಳ್ಳುತ್ತಿದ್ದ. ಅಲ್ಲಿಂದ ಕದ್ದ ಬೈಕ್‌ನಲ್ಲಿ ನಗರಕ್ಕೆ ಬಂದು ಎಲ್ಲೆಡೆ ಸುತ್ತಾಡಿ ಬೀಗ ಹಾಕಿರುವ ಮನೆಗಳನ್ನು ಟಾರ್ಗೆಟ್ ಮಾಡಿ ಒಳ ನುಗ್ಗಿ ಬೆಲೆ ಬಾಳುವ ವಸ್ತುಗಳನ್ನು ಕಳವು ಮಾಡುತ್ತಿದ್ದ. ಆರೋಪಿಯ ಬಂಧನದಿಂದ ಐದು ರಾತ್ರಿ ಕನ್ನ ಕಳವು ಪ್ರಕರಣ ಬೆಳಕಿಗೆ ಬಂದಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.