ನಾರದ ಲಂಚ ಪ್ರಕರಣ : ಟಿಎಂಸಿ ನಾಯಕರಿಗೆ ಗೃಹಬಂಧನ

house
Published on

ಕೊಲ್ಕತ : ನಾರದ ಲಂಚ ಪ್ರಕರಣದಲ್ಲಿ ಆರೋಪಿಗಳಾಗಿರುವ ಇಬ್ಬರು ಟಿಎಂಸಿ ಸಚಿವರು ಸೇರಿದಂತೆ ನಾಲ್ಕು ರಾಜಕಾರಣಿಗಳಿಗೆ ಕೊಲ್ಕತ ಹೈಕೋರ್ಟ್ ಗೃಹಬಂಧನ ವಿಧಿಸಿದೆ. ನ್ಯಾಯಾಲಯದ ತ್ರಿಸದಸ್ಯ ಪೀಠವೊಂದು ಅವರ ಮಧ್ಯಂತರ ಜಾಮೀನಿನ ವಿಚಾರಣೆಯನ್ನು ಪೂರೈಸುವವರೆಗೆ, ಈ ಗೃಹಬಂಧನ ಆದೇಶ ಜಾರಿಯಲ್ಲಿರುತ್ತದೆ ಎಂದಿದೆ.

ಪಶ್ಚಿಮ ಬಂಗಾಳದ ಸಚಿವರಾದ ಫಿರ್ಹಾದ್​ ಹಕೀಂ ಮತ್ತು ಸುಬ್ರತ ಮುಖರ್ಜಿ ಅವರನ್ನು ಟಿಎಂಸಿ ಶಾಸಕ ಮದನ್​ ಮಿತ್ರ ಮತ್ತು ಟಿಎಂಸಿ ಸದಸ್ಯರಾಗಿದ್ದ ಸೊವನ್ ಚಟರ್ಜಿ ಅವರೊಂದಿಗೆ ಮೇ 17 ರಂದು ಸಿಬಿಐ ಬಂಧಿಸಿತ್ತು. ಈ ನಾಲ್ವರಿಗೆ ಕೊಲ್ಕತದ ಸೆಷನ್ಸ್​ ನ್ಯಾಯಾಲವು ನೀಡಿದ್ದ ಜಾಮೀನಿನ ವಿರುದ್ಧ ಸಿಬಿಐ ಸಲ್ಲಿಸಿದ ಮನವಿಯ ಮೇಲೆ ಜಾಮೀನಿಗೆ ತಡೆಯಾಜ್ನೆ ನೀಡಲಾಗಿದೆ. ಅಂದಿನಿಂದ ಜೈಲಿನಲ್ಲಿರುವ ಸಚಿವರು, ಮಧ್ಯಂತರ ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು.

ಜಾಮೀನು ಅರ್ಜಿಯ ವಿಚಾರಣೆ ನಡೆಸಿದ ಉಸ್ತುವಾರಿ ಮುಖ್ಯ ನ್ಯಾಯಮೂರ್ತಿಗಳಾದ ರಾಜೇಶ್​ ಬಿಂಡಾಲ್ ಮತ್ತು ನ್ಯಾಯಮೂರ್ತಿ ಅರಿಜಿತ್ ಬ್ಯಾನರ್ಜಿ ಅವರ ದ್ವಿಸದಸ್ಯ ನ್ಯಾಯಪೀಠವು ಒಮ್ಮತದ ನಿರ್ಧಾರ ತಲುಪಿಲ್ಲ. ನ್ಯಾಯಮೂರ್ತಿ ಬಿಂಡಾಲ್ ಗೃಹಬಂಧನ ನೀಡಬೇಕೆಂದು ತೀರ್ಪು ನೀಡಿದ್ದರೆ, ನ್ಯಾಯಮೂರ್ತಿ ಬ್ಯಾನರ್ಜಿ ಮಧ್ಯಂತರ ಜಾಮೀನು ನೀಡಿದ್ದಾರೆ. ಹೀಗಾಗಿ ಈ ವಿಚಾರವನ್ನು ಹಿರಿದಾದ ತ್ರಿಸದಸ್ಯ ನ್ಯಾಯಪೀಠಕ್ಕೆ ಒಪ್ಪಿಸಲಾಗಿದೆ.

"ಒಬ್ಬ ಸದಸ್ಯರು ಮಧ್ಯಂತರ ಜಾಮೀನು ನೀಡಬೇಕು ಎಂದರೆ, ಮತ್ತೊಬ್ಬರು ಒಪ್ಪಲಿಲ್ಲ. ಆದ್ದರಿಂದ ಈ ವಿಚಾರವನ್ನು ಹಿರಿದಾದ ನ್ಯಾಯಪೀಠವು ಪರಿಗಣಿಸಬೇಕಾಗಿದೆ. ಏತನ್ಮಧ್ಯೆ, ಕರೊನಾ ಸಾಂಕ್ರಾಮಿಕ ಹಿನ್ನೆಲೆಯಲ್ಲಿ ಗೃಹಬಂಧನ ವಿಧಿಸಲಾಗಿದೆ" ಎಂದು ಕೋರ್ಟ್​ ಹೇಳಿದೆ.

ಏನಿದು ನಾರದ ಕೇಸ್​ : ​2014 ರಲ್ಲಿ ನಡೆದ ಸ್ಟಿಂಗ್ ಆಪರೇಷನ್​ನ ಫಲಿತಾಂಶ ಇದು. ಪತ್ರಕರ್ತರೊಬ್ಬರು ಬಿಸಿನೆಸ್​ಮನ್​ ರೀತಿಯಲ್ಲಿ ಬಂಗಾಳದಲ್ಲಿ ಹೂಡಿಕೆ ಮಾಡುವುದಾಗಿ ಹೋಗಿ 7 ಟಿಎಂಸಿ ಸಂಸದರು, 4 ಸಚಿವರು, ಒಬ್ಬ ಶಾಸಕ ಮತ್ತು ಒಬ್ಬ ಪೊಲೀಸ್ ಅಧಿಕಾರಿಗೆ ಲಂಚವಾಗಿ ಹಣ ನೀಡಿದ್ದರು. ಎಲ್ಲವನ್ನೂ ರೆಕಾರ್ಡ್ ಮಾಡಿದ್ದರು. ಈ ಟೇಪ್​ಗಳನ್ನು 2016 ರ ವಿಧಾನಸಭಾ ಚುನಾವಣೆಗಳ ಮುಂಚೆ ಬಿಡುಗಡೆ ಮಾಡಲಾಗಿತ್ತು ಎನ್ನಲಾಗಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net