

ಕಲ್ಪೆಟ್ಟ: ಚಾಲಕನ ನಿಯಂತ್ರಣ ಕಳೆದುಕೊಂಡ ಲಾರಿಯೊಂದು ಡಿಕ್ಕಿ ಹೊಡೆದ ಪರಿಣಾಮ ಇಡೀ ಹೋಟೆಲ್ ಕಟ್ಟಡಕ್ಕೆ ಸಂಪೂರ್ಣ ಹಾನಿಯಾಗಿರುವ ಘಟನೆ ಕೇರಳದ ವೆಲ್ಲಾರಾಮ್ಕುನ್ನು ರಾಷ್ಟ್ರೀಯ ಹೆದ್ದಾರಿಯಲ್ಲಿ ಸೋಮವಾರ ನಡೆದಿದೆ.
ಪೂರ್ಣ ಪ್ರಮಾಣದಲ್ಲಿ ಹಾನಿಗೊಳಗಾದ ಕಟ್ಟಡವು ರಸ್ತೆ ಮೇಲೆಯೇ ಬೀಳುವ ಸಾಧ್ಯತೆ ಇರುವುದರಿಂದ ಆ ಮಾರ್ಗದಲ್ಲಿ ಸಂಚಾರ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲಾಗಿದೆ. ವಾಹನ ಚಲಾಯಿಸುತ್ತಲೇ ಚಾಲಕ ನಿದ್ರೆಗೆ ಜಾರಿದ ಪರಿಣಾಮ ಅವಘಡ ಸಂಭವಿಸಿದೆ ಎಂದು ಪ್ರಾಥಮಿಕ ಮೂಲಗಳಿಂದ ತಿಳಿದುಬಂದಿದೆ.
ಈ ಘಟನೆ ಸೋಮವಾರ ಮುಂಜಾನೆ 4 ಗಂಟೆ ಸುಮಾರಿಗೆ ನಡೆದಿದೆ. ಅತಿ ವೇಗದಲ್ಲಿದ್ದ ಲಾರಿ, ನಿಯಂತ್ರಣ ಕಳೆದುಕೊಂದು ಮೊದಲು ಎದುರು ಬರುತ್ತಿದ್ದ ಟ್ರ್ಯಾವೆಲ್ಲರ್ ವ್ಯಾನ್ಗೆ ಡಿಕ್ಕಿ ಹೊಡೆದು, ಕಟ್ಟಡದತ್ತ ನುಗ್ಗಿದೆ. ಮೂರು ಅಂತಸ್ತಿನ ಕಟ್ಟಡ ಮುಂಜಾನೆ ಆರು ಗಂಟೆ ಸಮಯದಲ್ಲಿ ವಾಲುವುದಕ್ಕೆ ಆರಂಭಿಸಿದೆ.
ರಾಷ್ಟ್ರೀಯ ಹೆದ್ದಾರಿ ಮೇಲೆಯೇ ಕಟ್ಟಡ ಬೀಳುವ ಸಾಧ್ಯತೆ ಇರುವುದರಿಂದ ಆ ಮಾರ್ಗದಲ್ಲಿ ಸಂಚಾರ ನಿಷೇಧಿಸಲಾಗಿದೆ. ವಾಹನಗಳನ್ನು ಬೇರೆ ಮಾರ್ಗದತ್ತ ಬದಲಾಯಿಸಲಾಗಿದೆ. ಘಟನಾ ಸ್ಥಳಕ್ಕೆ ಜಿಲ್ಲಾಧಿಕಾರಿ ಅದೀಲಾ ಅಬ್ದುಲ್ಲಾ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಯಾವುದೇ ಸುರಕ್ಷತಾ ಕ್ರಮಗಳನ್ನು ಅನುಸರಿಸದೇ ಕಟ್ಟಡ ನಿರ್ಮಾಣ ಮಾಡಿರುವ ಗುಮಾನಿ ಆರಂಭವಾಗಿದ್ದು, ಈ ಸಂಬಂಧ ತನಿಖೆಗೆ ಆದೇಶಿಸಲಾಗಿದೆ. ಘಟನೆಯಿಂದ ಗಂಭೀರ ಗಾಯಗೊಂಡಿರುವ ಚಾಲಕನನ್ನ ಆಸ್ಪತ್ರೆಗೆ ದಾಖಲಿಸಿದ್ದು, ಆತನ ಆರೋಗ್ಯ ಸ್ಥಿರವಾಗಿದೆ. ಹೋಟೆಲ್ನಲ್ಲಿ ಜನರು ಇಲ್ಲದಿದ್ದರಿಂದ ಯಾರಿಗೂ ಹಾನಿಯಾಗಿಲ್ಲ. ಒಂದು ವೇಳೆ ಗ್ರಾಹಕರಿದ್ದ ಸಮಯದಲ್ಲಿ ಅಪಘಾತ ಸಂಭವಿಸಿದ್ದರೆ ಭಾರಿ ಅನಾಹುತವೇ ನಡೆಯುತ್ತಿತ್ತು. (ಏಜೆನ್ಸೀಸ್)