

ತುಮಕೂರು: ಕ್ಯಾಂಟರ್ ಹಾಗೂ ಆಟೋ ಮಧ್ಯೆ ಸಂಭವಿಸಿದ ಭೀಕರ ಅಪಘಾತದಲ್ಲಿ ಸ್ಥಳದಲ್ಲೇ ಇಬ್ಬರು ಸಾವಿಗೀಡಾಗಿದ್ದು, ಆಟೋ ಚಾಲಕನ ಎರಡೂ ಕೈ ಕಟ್ ಆಗಿದ್ದು, ಮೂವರ ಪರಿಸ್ಥಿತಿ ಗಂಭೀರವಾಗಿದೆ. ತುಮಕೂರು ಜಿಲ್ಲೆಯಲ್ಲಿ ಈ ಅಪಘಾತ ಸಂಭವಿಸಿದೆ.
ತುಮಕೂರು ಜಿಲ್ಲೆ ಕೊರಟಗೆರೆ ತಾಲೂಕಿನ ಗಡಿಭಾಗವಾದ ಅರಸಾಪುರ - ಕಾಶಾಪುರ ಬಳಿ ಕೊರಟಗೆರೆಯಿಂದ ಗೌರಿಬಿದನೂರಿಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಈ ಅಪಘಾತ ಸಂಭವಿಸಿದೆ. ಅಪಘಾತದ ತೀವ್ರತೆಗೆ ಆಟೋದಲ್ಲಿದ್ದ ಇಬ್ಬರೂ ಸ್ಥಳದಲ್ಲೇ ಸಾವಿಗೀಡಾದರು.
ಕೊರಟಗೆರೆ ಪಟ್ಟಣದ ಮೀಲಾನಿ (25), ಜೈರಬಿ (70) ಸಾವಿಗೀಡಾದವರು. ಆಟೋ ಚಾಲಕ ಕಲಂಧರ್ (35) ಎಂಬಾತನ ಎರಡೂ ಕೈ ಕಟ್ ಆಗಿದ್ದು, ಅವರ ಇಬ್ಬರು ಮಕ್ಕಳಾದ ಅರ್ಪ (5), ಅಸೀತಾ (3) ಪರಿಸ್ಥಿತಿ ಚಿಂತಾಜನಕವಾಗಿದೆ. ಮೂವರ ಪರಿಸ್ಥಿತಿ ಗಂಭೀರವಾಗಿದ್ದು, ಮೂವರನ್ನೂ ಗೌರಿಬಿದನೂರು ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸ್ಥಳಕ್ಕೆ ಗೌರಿಬಿದನೂರು ಹಾಗೂ ಕೊರಟಗೆರೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.