ಶಿಕ್ಷಕರ ಭವನದ ಅನುದಾನಕ್ಕೆ ಕೊಕ್ಕೆ

ckm gurubhavana
ಚಿಕ್ಕಮಗಳೂರಿನ ಉರ್ದು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿರುವ ಶಿಕ್ಷಕರ ಭವನ.
Published on

ಚಿಕ್ಕಮಗಳೂರು: ಶಿಥಿಲಗೊಂಡಿದ್ದ ಶಿಕ್ಷಕರ ಭವನದ ದುರಸ್ತಿ ಕೆಲಸ ಮುಗಿದಿದೆ. ಆದರೆ ನೀರು, ಶೌಚಗೃಹದ ವ್ಯವಸ್ಥೆಯಿಲ್ಲದ ಹಿನ್ನೆಲೆಯಲ್ಲಿ ಭವನವನ್ನು ಶೈಕ್ಷಣಿಕ ಕಾರ್ಯಗಳಿಗೆ ಸದ್ಬಳಕೆ ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ.

ನಗರದ ಸರ್ಕಾರಿ ಉರ್ದು ಪ್ರಾಥಮಿಕ ಶಾಲೆ ಆವರಣದಲ್ಲಿ 1975ರ ನ.7ರಂದು ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ, ಅಂದಿನ ವಿದ್ಯಾಮಂತ್ರಿ ಎಂ.ಮಲ್ಲಿಕಾರ್ಜುನಸ್ವಾಮಿ ಅವರು ಭವನ ನಿರ್ಮಾಣಕ್ಕೆ ಅಡಿಗಲ್ಲು ಹಾಕಿದ್ದರು. 1986ರ ಫೆಬ್ರವರಿಯಲ್ಲಿ ಜೆಎಂಜೆ ರಾಜನ್ ಅಧ್ಯಕ್ಷತೆಯಲ್ಲಿ ಉದ್ಘಾಟಿಸಲಾಗಿತ್ತು.
ಭವನಕ್ಕೆ ಹೊಂದಿಕೊಂಡಂತೆ ಇತ್ತೀಚೆಗೆ ಹೆಚ್ಚುವರಿ ಕಟ್ಟಡ ನಿರ್ಮಾಣವಾಗಿದೆ. ಕಟ್ಟಡ ಮೇಲ್ಭಾಗದಲ್ಲಿ ಶೌಚಗೃಹ, ಸ್ನಾನಗೃಹ ಮತ್ತು 8 ಕೊಠಡಿಗಳನ್ನು ನಿರ್ಮಿಸಲಾಗಿದೆ. ಆದರೆ ಕೆಳ ಅಂತಸ್ತಿನಲ್ಲಿ ಶೌಚಗೃಹ ನಿರ್ಮಾಣ ಸೇರಿ ಸಣ್ಣಪುಟ್ಟ ಕೆಲಸಗಳು ಬಾಕಿ ಇವೆ. ಕಳೆದ ವರ್ಷ ಸಿ.ಟಿ.ರವಿ ಅವರು ದುರಸ್ತಿಗಾಗಿ 20 ಲಕ್ಷ ರೂ. ಅನುದಾನ ಮಂಜೂರು ಮಾಡಿಸಿದ್ದರು. ದುರಸ್ತಿ ಕೆಲಸ ಇನ್ನು ಪೂರ್ಣಗೊಳ್ಳದೆ ಇರುವುದು ಶಿಕ್ಷಕರ ಅಸಮಾಧಾನಕ್ಕೆ ಕಾರಣವಾಗಿದೆ.
ಕಾಮಗಾರಿಯೇ ಪೂರ್ಣಂಡಿಲ್ಲ. ಮಳೆಗಾಲದಲ್ಲಿ ಮೂಲ ಕಟ್ಟಡದ ಛಾವಣೆಯಿಂದ ನೀರು ಸೋರುತ್ತಿದೆ. ವಿದ್ಯುತ್ ಸಂಪರ್ಕ ಮತ್ತು ಕುಡಿಯುವ ನೀರಿನ ವ್ಯವಸ್ಥೆ ಇಲ್ಲದಂತಾಗಿದೆ. ಭವನದ ಎದುರು ಅಕ್ಕ ಪಕ್ಕದ ನಿವಾಸಿಗಳು ಕಸ ಎಸೆದು ವಾತಾವರಣ ಕಲುಷಿತಗೊಳಿಸಿದ್ದಾರೆ. ಭವನದ ಸುತ್ತ ಗಿಡಗಂಟಿ ಬೆಳೆದಿವೆ. ಅನೇಕ ವರ್ಷಗಳಿಂದ ಪಾಳುಬಿದ್ದಿದ್ದ ಕಟ್ಟಡಕ್ಕೆ ಇದೀಗ ಸುಣ್ಣ-ಬಣ್ಣ ಬಳಿಯಲು ಕ್ರಮವಹಿಸಲಾಗಿದೆ.
ಜಿಲ್ಲಾ ಕೇಂದ್ರದಲ್ಲಿ ನಿರ್ಮಿಸಿರುವ ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಭವನದ ಜವಾಬ್ದಾರಿಯನ್ನು ಶಿಕ್ಷಕರ ಸಂಘವೇ ವಹಿಸಿಕೊಂಡು ಸಮರ್ಪಕವಾಗಿ ನಿರ್ವಹಿಸಬೇಕು. ಆ ಮೂಲಕ ಶಿಕ್ಷಣ ಇಲಾಖೆ, ಸಂಘದ ಕಾರ್ಯಕ್ರಮಗಳ ಆಯೋಜನೆಗೆ ಕಲ್ಪಿಸಲು ಸಂಘವು ಗಮನ ಹರಿಸಬೇಕು. ಭವನದ ದುರಸ್ತಿ ಕೆಲಸವನ್ನು ಪಿಡಬ್ಲುೃಡಿಯಿಂದ ಮಾಡಲಾಗುತ್ತಿದೆ. ನಗರಸಭೆಯಿಂದ ಶೌಚಗೃಹ ನಿರ್ಮಿಸಲಾಗುತ್ತಿದೆ. ಶೌಚಗೃಹಗಳ ನಿರ್ಮಾಣ ಶೇ.50ರಷ್ಟು ಮುಗಿದಿದೆ.
ಜಿಲ್ಲೆಯ ಬೇರೆ ತಾಲೂಕುಗಳಿಂದ ಶಿಕ್ಷಕರು ಅಥವಾ ಇಲಾಖೆ ಅಧಿಕಾರಿಗಳು ಚಿಕ್ಕಮಗಳೂರಿಗೆ ಆಗಮಿಸಿದಾಗ ವಿಶ್ರಾಂತಿ ಪಡೆಯಲು ಪ್ರತ್ಯೇಕ ಕೊಠಡಿಗಳನ್ನು ಸಹ ನಿರ್ಮಿಸಲಾಗಿದೆ. ಕಟ್ಟಡದ ನೆಲ ಮಹಡಿಯಲ್ಲಿ ಸಭಾಂಗಣ, ಮೊದಲ ಅಂತಸ್ತಿನಲ್ಲಿ ಕಚೇರಿ, ವಿಶ್ರಾಂತಿ ಗೃಹ, ಶೌಚಗೃಹ ಹಾಗೂ ಮಳೆಗಾಲದಲ್ಲಿ ನೀರು ಸೋರದಂತೆ ರೂಫಿಂಗ್ ಮಾಡಲಾಗಿದೆ.
ಸುಸಜ್ಜಿತ ಭವನ ಅವಶ್ಯ: ಶಿಕ್ಷಕರ ಭವನವನ್ನು ಆಗಿನ ಶಿಕ್ಷಕರ ಸಂಖ್ಯೆಗೆ ತಕ್ಕಂತೆ ನಿರ್ಮಿಸಲಾಗಿದೆ. ಈಗ ಜಿಲ್ಲೆಯಲ್ಲಿ ಶಿಕ್ಷಕರ ಸಂಖ್ಯೆ ಹೆಚ್ಚಾಗಿದ್ದು, ಬಹೂಪಯೋಗಿ ಕಟ್ಟಡ ನಿರ್ಮಿಸಿದರೆ ಹಲವು ಕಾರ್ಯಕ್ರಮ ಆಯೋಜಿಸಲು ಅನುಕೂಲವಾಗುತ್ತದೆ. ಹಾಗಾಗಿ ಈ ಕಾಲಕ್ಕೆ ತಕ್ಕಂತೆ ಗುರುಭವನ ನಿರ್ಮಿಸಬೇಕು ಎಂಬುದು ಶಿಕ್ಷಕರ ಒತ್ತಾಯ.
ಅನುದಾನಕ್ಕೆ ತಡೆ: ಶಿಕ್ಷಕರ ಭವನದ ಬಾಕಿ ಕೆಲಸ ಪೂರ್ಣಗೊಳಿಸಲು ವಿಧಾನಸಭೆ ಚುನಾವಣೆಗೂ ಮುನ್ನ 20 ಲಕ್ಷ ರೂ. ಹೆಚ್ಚುವರಿ ಅನುದಾನ ಮಂಜೂರಾಗಿತ್ತು. ಆದರೆ ಈಗಿನ ಸರ್ಕಾರ ಅನುದಾನ ತಡೆಹಿಡಿದಿದೆ. ಇದರಿಂದ ಕೆಲಸಗಳು ನನೆಗುದಿಗೆ ಬಿದ್ದಿವೆ. ಈ ಬಗ್ಗೆ ಶಿಕ್ಷಕರ ದಿನಾಚರಣೆ ಕುರಿತು ನಡೆದ ಪೂರ್ವಭಾವಿ ಸಭೆಯಲ್ಲೂ ಚರ್ಚೆಯಾಗಿದೆ. ಮುಂದಿನ ಬಜೆಟ್‌ನಲ್ಲಿ ಮಂಜೂರು ಮಾಡಿಸುವ ಹಾಗೂ ನೂತನ ಗುರುಭವನ ನಿರ್ಮಿಸಲು ಅನುದಾನ ಕೊಡಿಸುವ ಪ್ರಯತ್ನ ಮಾಡಲಾಗುವುದು ಎಂದು ಶಾಸಕ ಎಚ್.ಡಿ.ತಮ್ಮಯ್ಯ ಭರವಸೆ ನೀಡಿದ್ದಾರೆ.
ಸದ್ಯ ಇರುವ ಶಿಕ್ಷಕರ ಭವನದ ರಿಪೇರಿ ಕೆಲಸಗಳಿಗೆ ಹೆಚ್ಚುವರಿ ಅನುದಾನ ಬೇಕು ಎಂದು ಶಿಕ್ಷಕರ ಸಂಘಟನೆಯಿಂದ ಮನವಿ ಬಂದಿದೆ. ಈ ಸಂಬಂಧ ಶಿಕ್ಷಕರ ಸಂಘದ ಪದಾಧಿಕಾರಿಗಳ ಸಭೆ ಕರೆದು ಕ್ರಮ ಕೈಗೊಳ್ಳಲಾಗುವುದು ಎಂದು ಡಿಡಿಪಿಐ ರಂಗನಾಥ ಸ್ವಾಮಿ ವಿಜಯವಾಣಿಗೆ ಮಾಹಿತಿ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net