

ಹುಣಸೂರು: ತಾಲೂಕಿನ ಯಮಗುಂಬ ಗ್ರಾಮದ ಗ್ರಾಮದೇವತೆ ಹೊನ್ನೇತಾಳಮ್ಮ ದೇವಿ ನಂಬಿ ಬಂದ ಭಕ್ತರ ಭಾಗ್ಯದೇವಿ.. ಹರಕೆ ಹೊತ್ತ ಭಕ್ತರಿಗೆ ಇಷ್ಟಾರ್ಥ ನೆರವೇರಿಸುವ ಕರುಣಾ ಮೂರ್ತಿ.. ನೂರಾರು ವರ್ಷಗಳ ಇತಿಹಾಸ ಹೊಂದಿರುವ ಹೊನ್ನೇತಾಳಮ್ಮ ಸುತ್ತಮುತ್ತಲ ಗ್ರಾಮದ ಶಕ್ತಿದೇವತೆ ಯಾಗಿದ್ದಾಳೆ.
ಹನಗೋಡು ಹೋಬಳಿ ಕೊತ್ತೇಗಾಲ ಗ್ರಾ.ಪಂ. ವ್ಯಾಪ್ತಿಯ ಯಮಗುಂಬ ಗ್ರಾಮ ತಾಲೂಕಿನಲ್ಲಿ ಅತ್ಯಂತ ಐತಿಹಾಸಿಕ ಸ್ಥಳವಾಗಿದೆ. ಇಲ್ಲಿ ಸಾವಿರ ವರ್ಷಗಳ ಹಿಂದಿನ ಜೈನಬಸದಿ ಪುನರುತ್ಥಾನಗೊಂಡು ಕಂಗೊಳಿಸುತ್ತಿದೆ. ಜೈನಸಂಸ್ಕೃತಿಯ ನೊಗಹೊತ್ತು ಇಂದಿಗೂ ದೇಗುಲ ಪೂಜೆಯನ್ನು ಅರ್ಚಕ ದೇವಕೀರ್ತಿ ನಡೆಸುತ್ತಿದ್ದಾರೆ. ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಅಧಿಕಾರಾವಧಿಯಲ್ಲಿ ದೇಗುಲದ ಜೀರ್ಣೋದ್ಧಾರಕ್ಕೆ ಶ್ರಮವಹಿಸಲಾಯಿತು. ಜೈನಧರ್ಮದ ರಾಜನಾಗಿ ಮಂಗರಸ ಈ ಭಾಗದಲ್ಲಿ ಸಾಕಷ್ಟು ಪ್ರಭಾವಶಾಲಿಯಾಗಿ ಬದುಕಿದ್ದ ಎಂಬುದು ಇತಿಹಾಸದಲ್ಲಿ ತಿಳಿದುಬರುತ್ತದೆ.
ಪಾರ್ವತಿಯ ಮತ್ತೊಂದು ರೂಪ ಹೊನ್ನೇತಾಳಮ್ಮ: ಗ್ರಾಮದೇವತೆ ಎಂದೇ ಗುರುತಿಸಲ್ಪಟ್ಟು ಭಕ್ತರನ್ನು ಕಾಪಿಡುತ್ತಿರುವ ಹೊನ್ನೇತಾಳಮ್ಮ ದೇವಿಯ ಪ್ರಭಾವ ಇಂದಿಗೂ ಜನಮಾನಸದಲ್ಲಿ ಅಚ್ಚಳಿಯದೆ ನಿಂತಿದೆ. ದೇವಿಯ ಕೋಪಕ್ಕೆ ತುತ್ತಾದ ಘಟನೆಗಳೂ ನಡೆದಿವೆ. ದೇವಾಲಯದ ಸಂಪ್ರದಾಯವನ್ನು ಮುರಿದ ವ್ಯಕ್ತಿಗೆ ಜೀವ ಹಾರಿಹೋಗಿದ್ದು, ಅಪಘಾತದಲ್ಲಿ ಕಾಲು ಕಳೆದುಕೊಂಡಿದ್ದು ಹೀಗೆ ಹಲವಾರು ದೃಷ್ಟಾಂತಗಳನ್ನು ಜನರು ಹೇಳುತ್ತಾರೆ. ಹೊನ್ನೇತಾಳಮ್ಮ ದೇವಿ ಮೂಲತಃ ಶಿವನ ಮಡದಿ ಪಾರ್ವತಿ ಎನ್ನುವುದು ಇಲ್ಲಿನ ಜನರ ನಂಬಿಕೆ. ಜನಪದ ಸಂಸ್ಕೃತಿಯಲ್ಲಿ ನಂಬಿಕೆಗೆ ಪ್ರಾಶಸ್ತ್ಯವಿದ್ದು, ಜನಪದ ಆಚರಣೆಗಳಿಗೆ ನಂಬಿಕೆಯೇ ಮೂಲ ಆಧಾರವಾಗಿದೆ. ಹೀಗಾಗಿ ಪಾರ್ವತಿದೇವಿಯೇ ಹೊನ್ನೇತಾಳಮ್ಮನಾಗಿ ಬಂದು ಕುಳಿತಿದ್ದಾಳೆ ಎನ್ನುವುದು ಜನರ ನಂಬಿಕೆಯಾಗಿದೆ.
ಹೊನ್ನೇಮರದಡಿ ಕುಳಿತ ಪಾರ್ವತಿ: 12ನೇ ಶತಮಾನದಲ್ಲಿ ಕಲ್ಯಾಣಕ್ರಾಂತಿಯ ಘಟನೆ ನಂತರದಲ್ಲಿ ಬಸವಣ್ಣನವರ ರಾಜ್ಯದ ಪರಿಸ್ಥಿತಿ ಅಧೋಗತಿಗಿಳಿದ ವೇಳೆ ಅಲ್ಲಿದ್ದ ತಾಯಿ ಪಾರ್ವತಿದೇವಿ ಇಲ್ಲಿ ಬಂದು ನೆಲೆಸಿದ್ದಾಳೆ ಎನ್ನುವುದು ಗ್ರಾಮಸ್ಥರ ಅಭಿಪ್ರಾಯವಾಗಿದೆ. ಈ ದೇವಾಲಯದ ಅಧ್ಯಕ್ಷ ಬಸವರಾಜಪ್ಪ ಅವರ ಪೂರ್ವಜರು ಉತ್ತರ ಕರ್ನಾಟಕದಿಂದ ಈ ದೇವಿಯನ್ನು ತಂದು ದೇವಿಯ ಇಚ್ಛೆಯಂತೆ ಪ್ರತಿಷ್ಠಾಪಿಸಿದ್ದಾರೆ. ಇಂದಿನವರೆಗೂ ಅವರ ಕುಟುಂಬದವರ ನೇತೃತ್ವದಲ್ಲೇ ದೇಗುಲದ ಸಮಸ್ತ ಕಾರ್ವೂ ನಡೆಯುತ್ತಿದೆ. ಕಲ್ಯಾಣ ಕ್ರಾಂತಿಯ ನಂತರ ಗ್ರಾಮದ ಸುತ್ತ ಇದ್ದ ದಟ್ಟ ಕಾಡಿನಲ್ಲಿ ಬಂದು ಪಾರ್ವತಿಯ ಮೂರ್ತಿ ಕುಳಿತಿತ್ತು. ಬಸವರಾಜಪ್ಪನ ಕುಟುಂಬದ ಪೂರ್ವಜರಿಗೆ ಕನಸಿನಲ್ಲಿ ಬಂದ ಪಾರ್ವತಿ ಈ ಜಾಗ ನೆಲೆಯೂರಲು ಪ್ರಶಸ್ತ ಜಾಗವಾಗಿದ್ದು, ಇಲ್ಲೇ ಗುಡಿಯನ್ನು ಕಟ್ಟಲು ಆದೇಶಿಸಿದಳಂತೆ. ಅದರಂತೆ ಬಸವರಾಜಪ್ಪನ ಕುಟುಂಬದವರು ದೇಗುಲ ಕಟ್ಟಿಸಿ ದೇವಿಯನ್ನು ಪ್ರತಿಷ್ಠಾಪಿಸಿದ್ದಾರೆ.
ಶಕ್ತಿ ಸ್ವರೂಪಿಣಿ ಹೊನ್ನೇತಾಳಮ್ಮ: ಕಾಲಾನಂತರದಲ್ಲಿ ಸುತ್ತಮುತ್ತಲ ಗ್ರಾಮಗಳಿಂದಲೂ ದೇವಿಯ ದರ್ಶನಕ್ಕೆ ಬಂದು ಭಕ್ತರು ತಮ್ಮ ಇಷ್ಟಾರ್ಥಗಳು, ದುಃಖ-ದುಮ್ಮಾನಗಳನ್ನು ದೇವಿಯಲ್ಲಿ ಹರಕೆ ಮಾಡಿಕೊಂಡು ಸಮಾಧಾನ ಪಟ್ಟುಕೊಳ್ಳುತ್ತಿದ್ದರು. ತದನಂತರ ತಮ್ಮ ಕೋರಿಕೆಯನ್ನು ಈಡೇರಿಸಿದಲ್ಲಿ ಶಕ್ತಿಸ್ವರೂಪಿಣಿ ದೇವಿಗೆ ಕಾಣಿಕೆ ನೀಡುವುದಾಗಿ ಹರಕೆ ಹೊರಲು ಆರಂಭಿಸಿದರು. ಆಗಲೇ ತಾಯಿಯ ಶಕ್ತಿ ಎಂತಹದು ಎಂದು ತಿಳಿಯಲು ಆರಂಭವಾಯಿತು. ಇದೀಗ ದೇವಿಯಲ್ಲಿ ಭಕ್ತರು ಶ್ರದ್ಧಾಭಕ್ತಿಯಿಂದ ಬೇಡಿಕೊಂಡಲ್ಲಿ ಆಗದ ಕೆಲಸವೇ ಇಲ್ಲ ಎನ್ನುತ್ತಾರೆ ಟ್ರಸ್ಟ್ ಅಧ್ಯಕ್ಷ ಬಸವರಾಜಪ್ಪ.
ಸಂತಾನ, ಭೂವ್ಯಾಜ್ಯ, ಆರೋಗ್ಯ: ಕೊಡಗು, ಮೈಸೂರು, ಬೆಂಗಳೂರಿನಿಂದಲೂ ದೇವಿಯ ದರ್ಶನಕ್ಕೆ ಮತ್ತು ಆಕೆಯ ಕೃಪಾಕಟಾಕ್ಷಕ್ಕಾಗಿ ಭಕ್ತರು ಆಗಮಿಸುತ್ತಾರೆ. ಸಂತಾನಕ್ಕಾಗಿ ಹಂಬಲಿಸುವವರು ಸಂತಾನಪ್ರಾಪ್ತಿಯಾದಲ್ಲಿ ಬೆಳ್ಳಿಯ ತೊಟ್ಟಿಲು ಮತ್ತು ಬೆಳ್ಳಿಯ ಶಿಶುವನ್ನು ನೀಡಿ ಹರಕೆ ಈಡೇರಿಸುತ್ತಾರೆ. ಬಾಯಿಗೆ ಬೀಗದ ಹರಕೆ ತೀರಿಸುವ, ದಾಸೋಹ, ದೇಗುಲ ಅಭಿವೃದ್ಧಿಗೆ ಆರ್ಥಿಕ ಸಹಕಾರ ಹೀಗೆ ತಮ್ಮ ಕೈಲಾದ ಸೇವೆಯನ್ನು ದೇವಿಯ ಪಾದಕ್ಕೆ ಅರ್ಪಿಸಿ ಕೃತಾರ್ಥರಾಗುತ್ತಾರೆ. ಅಲ್ಲದೇ ಭೂಮಿ ವ್ಯಾಜ್ಯ, ಆಸ್ತಿ ವಿವಾದ, ಆರೋಗ್ಯ ಸಮಸ್ಯೆ ಹೀಗೆ ತರಹೇವಾರಿ ಸಮಸ್ಯೆಗಳಿಗೆ ದೇವಿ ಕೃಪೆ ತೋರಿ ಸಮಸ್ಯೆಗಳನ್ನು ಪರಿಹರಿಸುತ್ತಾಳೆ. ಊರಿನಿಂದ ಮದುವೆಯಾಗಿ ಹೋದ ಊರಿನ ಹೆಣ್ಣುಮಗಳ ಕುರಿತು ದೇವಿಗೆ ಅಪಾರ ಪ್ರೀತಿ. ಹೆಣ್ಣುಮಕ್ಕಳು ತಮ್ಮ ಗಂಡಂದಿರ ಮನೆಯಿಂದಲೇ ದೇವಿಯ ಕರುಣೆಗಾಗಿ ಕೋರಿದರೆ ಅದನ್ನೂ ನೆರವೇರಿಸುತ್ತಾಳೆ ಎನ್ನುವುದು ಗ್ರಾಮಸ್ಥರ ಅನುಭವದ ಮಾತಾಗಿದೆ.
ಮೇ ತಿಂಗಳಲ್ಲಿ ವಾರಕಾಲ ದೇವಿಯ ಉತ್ಸವ ಅತ್ಯಂತ ವಿಜೃಂಭಣೆಯಿಂದ ನಡೆಯುತ್ತದೆ. ತೊಪ್ಪೆ ಓಕುಳಿ, ನೀರಿನ ಓಕುಳಿ, ದೇವರ ಉತ್ಸವ, ಪೌರಾಣಿಕ ನಾಟಕ ಪ್ರದರ್ಶನ, ದೇವಿಗೆ ಬಲಿ ಸಮರ್ಪಣೆ ಹೀಗೆ ವಿವಿಧ ಹಂತಗಳಲ್ಲಿ ಉತ್ಸವ ವಾರಕಾಲ ನಡೆದು ಇಡೀ ಗ್ರಾಮವನ್ನು ಸಂಭ್ರಮಿಸುವಂತೆ ಮಾಡುತ್ತದೆ. ಗ್ರಾಮದ ಎಲ್ಲ ಸಮಾಜದವರೂ ಉತ್ಸವದಲ್ಲಿ ಪಾಲ್ಗೊಂಡು ತಮ್ಮದೇ ರೀತಿಯಲ್ಲಿ ಹರಕೆ, ಪೂಜೆ ಧಾರ್ಮಿಕ ಕಾರ್ಯಗಳನ್ನು ನಡೆಸಿ ಧನ್ಯತೆ ಅನುಭವಿಸುತ್ತಾರೆ.