

ಹಾಂಕಾಂಗ್: ಚೀನಾದ ಹೊಸ ರಾಷ್ಟ್ರೀಯ ಭದ್ರತಾ ಕಾನೂನಿನ ಅನ್ವಯ ಹಾಂಕಾಂಗ್ನಲ್ಲಿ ಇದೇ ಮೊದಲ ಬಾರಿಗೆ ಒಬ್ಬ ವ್ಯಕ್ತಿಯನ್ನು ಬಂಧಿಸಲಾಗಿದೆ. ಹೊಸ ಕಾಯ್ದೆ ಹಾಂಕಾಂಗ್ನಲ್ಲಿ ಪ್ರಜಾಪ್ರಭುತ್ವ ಹಕ್ಕುಗಳನ್ನು ದಮನ ಮಾಡಲಿದೆ ಎನ್ನುವ ಭೀತಿ ನಿಜ ಎನ್ನುವ ರೀತಿಯಲ್ಲಿ ವಿದ್ಯಮಾನಗಳು ನಡೆಯುತ್ತಿದ್ದು, ಮುಂದಿನ ದಿನಗಳ ಬಗ್ಗೆ ಆತಂಕ ಉಂಟಾಗಿದೆ.
ಪ್ರತಿಭಟನೆಗಳ ಮೇಲಿನ ನಿರ್ಬಂಧದ ನಡುವೆ, ಹಾಂಕಾಂಗ್ ಚೀನಾಕ್ಕೆ ಹಸ್ತಾಂತರವಾದ ವಾರ್ಷಿಕೋತ್ಸವ ಆಚರಣೆಗಳು ನಡೆದವು. ಹಾಂಕಾಂಗ್ ಸ್ವಾತಂತ್ರ್ಯ ಧ್ವಜ ಹಿಡಿದಿದ್ದ ವ್ಯಕ್ತಿಯೊಬ್ಬನನ್ನು ಬಂಧಿಸಿರುವುದಾಗಿ ಪೊಲೀಸರು ಹೇಳಿದ್ದಾರೆ. ಕೆಲವು ನಿರ್ದಿಷ್ಟ ರಾಜಕೀಯ ಅಭಿಪ್ರಾಯಗಳು ಮತ್ತು ಸಂಕೇತಗಳು ರಾತ್ರಿ ಬೆಳಗಾಗುವುದರೊಳಗೆ ಕಾನೂನುಬಾಹಿರವಾಗಿರುವುದನ್ನು ಇದು ತೋರಿಸುತ್ತದೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.
ಅಮೆರಿಕ ಟೀಕೆ: ಭಿನ್ನಮತೀಯನ ಬಂಧನಕ್ಕೆ ಟೀಕಾಕಾರರು ಮತ್ತು ಪಾಶ್ಚಾತ್ಯ ದೇಶಗಳಿಂದ ತೀಕ್ಷ್ಣ ಖಂಡನೆ ವ್ಯಕ್ತವಾಗುತ್ತಿದೆ. ಚೀನಾ ರೀತಿಯ ದಬ್ಬಾಳಿಕೆ ಆಡಳಿತ ಹಾಂಕಾಂಗ್ನಲ್ಲೂ ಸ್ಥಾಪನೆಯಾಗಲಿದೆ ಎಂದು ಅಮೆರಿಕ ಟೀಕಿಸಿದೆ.
ಒಪ್ಪಂದ ಉಲ್ಲಂಘನೆ: 1997ರಲ್ಲಿ ಬ್ರಿಟನ್ನಿಂದ ಚೀನಾಕ್ಕೆ ಹಾಂಕಾಂಗ್ ಹಸ್ತಾಂತರ ಒಪ್ಪಂದ ಏರ್ಪಟ್ಟ ಸಂದರ್ಭದಲ್ಲಿ ಹಾಂಕಾಂಗ್ಗೆ 2047ರ ವರೆಗೆ ನ್ಯಾಯಾಂಗ ಮತ್ತು ಶಾಸಕಾಂಗ ಸ್ವಾಯತ್ತೆ ಹಾಗೂ ನಾಗರಿಕ ಹಕ್ಕು ನೀಡಲಾಗುವುದೆಂದು ಚೀನಾ ಆಶ್ವಾಸನೆ ನೀಡಿತ್ತು. ‘ಒಂದು ದೇಶ, ಎರಡು ವ್ಯವಸ್ಥೆ’ ಒಪ್ಪಂದ ಎಂದು ಈ ಒಡಂಬಡಿಕೆ ಖ್ಯಾತವಾಗಿದೆ. ಆದರೆ ಅದೀಗ ಉಲ್ಲಂಘನೆಯಾಗಿರುವುದು ದೃಢಪಟ್ಟಿದೆ. ಈ ನಡುವೆ, ಹಾಂಕಾಂಗ್ನಲ್ಲಿ ಪ್ರತಿಭಟನೆಗಳನ್ನು ನಡೆಸುವಂತೆ ಪ್ರಜಾಪ್ರಭುತ್ವವಾದಿ ಕಾರ್ಯಕರ್ತರು ಬುಧವಾರ ಜನತೆಗೆ ಕರೆ ನೀಡಿದ್ದಾರೆ.