ಬಾಹ್ಯಾಕಾಶ ಯಾತ್ರೆಯಲ್ಲಿ ಭಾರತದ ಕೀರ್ತಿ ಪತಾಕೆ ಹಾರಿಸಿ ತಾಯ್ನಾಡಿಗೆ ಕಾಲಿಟ್ಟ ಶುಭಾಂಶು ಶುಕ್ಲಾ: ಅದ್ಧೂರಿ ಸ್ವಾಗತ! Shubhanshu Shukla

Shubhanshu Shukla
Published on

Shubhanshu Shukla : ಬಾಹ್ಯಾಕಾಶಕ್ಕೆ ಯಾತ್ರೆಯನ್ನು ಯಶಸ್ವಿಯಾಗಿ ಮುಗಿಸಿ, ಭಾರತದ ಕೀರ್ತಿ ಪತಾಕೆಯನ್ನು ಹೆಚ್ಚಿಸಿದ ಗಗನಯಾತ್ರಿ ಶುಭಾಂಶು ಶುಕ್ಲಾ ತಾಯ್ನಾಡಿಗೆ ಮರಳಿದ್ದಾರೆ. ಭಾರತಕ್ಕೆ ಬಂದಿಳಿದ ಅವರಿಗೆ ಅದ್ಧೂರಿ ಸ್ವಾಗತವನ್ನು ನೀಡಲಾಗಿದೆ.

ಅಂದಹಾಗೆ, ಶುಭಾಂಶು ಶುಕ್ಲಾ ಅವರು ಬಾಹ್ಯಾಕಾಶಕ್ಕೆ ಹೋದ ಎರಡನೇ ಭಾರತೀಯ ಮತ್ತು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಭೇಟಿ ನೀಡಿದ ಮೊದಲ ಭಾರತೀಯನೆಂಬ ಹೆಗ್ಗಳಿಕೆಯನ್ನು ಹೊಂದಿದ್ದಾರೆ.

ಶುಕ್ಲಾ ಅವರು ಭಾನುವಾರ (ಆಗಸ್ಟ್​ 17) ಮುಂಜಾನೆ ದೆಹಲಿಗೆ ಬಂದಿಳಿದರು. ಈ ವೇಳೆ ಅವರನ್ನು ಅವರ ಕುಟುಂಬ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಜಿತೇಂದ್ರ ಸಿಂಗ್, ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಆತ್ಮೀಯವಾಗಿ ಬರಮಾಡಿಕೊಂಡರು. ಇದೇ ವೇಳೆ ವಿಮಾನ ನಿಲ್ದಾಣದಲ್ಲಿ ರಾಷ್ಟ್ರಧ್ವಜ ಬೀಸುತ್ತಿದ್ದ ದೊಡ್ಡ ಜನಸಮೂಹ ಶುಭಾಂಶು ಅವರಿಗೆ ಅದ್ಧೂರಿ ಸ್ವಾಗತವನ್ನು ನೀಡಿದರು.

ಪ್ರಧಾನಿ ಮೋದಿ ಭೇಟಿ

ಭಾರತಕ್ಕೆ ಮರಳಿರುವ ಗ್ರೂಪ್ ಕ್ಯಾಪ್ಟನ್ ಶುಕ್ಲಾ, ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡುವ ನಿರೀಕ್ಷೆಯಿದೆ. ಅಲ್ಲದೆ, ಆಗಸ್ಟ್ 23 ರಂದು ರಾಷ್ಟ್ರೀಯ ಬಾಹ್ಯಾಕಾಶ ದಿನಾಚರಣೆಯಲ್ಲಿ ಭಾಗವಹಿಸುವ ನಿರೀಕ್ಷೆಯಿದೆ. ನಮ್ಮ ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ ಬಾಹ್ಯಾಕಾಶ ಕೇಂದ್ರದಿಂದ ಹಿಂತಿರುಗಿದ್ದಾರೆ. ಮುಂಬರುವ ದಿನಗಳಲ್ಲಿ ಅವರು ಭಾರತಕ್ಕೆ ಹಿಂತಿರುಗುತ್ತಿದ್ದಾರೆ ಎಂದು ಪ್ರಧಾನಿ ಮೋದಿ ಕೆಂಪು ಕೋಟೆಯಲ್ಲಿ ಮಾಡಿದ ಸ್ವಾತಂತ್ರ್ಯೋತ್ಸವದ ಭಾಷಣದಲ್ಲಿ ಭಾರತದ ಸ್ವಂತ ಬಾಹ್ಯಾಕಾಶ ಕೇಂದ್ರದ ಯೋಜನೆಗಳ ಬಗ್ಗೆ ಮಾತನಾಡುತ್ತಾ ಹೇಳಿದರು.

ಆಕ್ಸಿಯಮ್​-4 ಮಿಷನ್​

ಅಂದಹಾಗೆ, ಐತಿಹಾಸಿಕ ಬಾಹ್ಯಾಕಾಶ ಯಾತ್ರೆಯನ್ನು ಯಶಸ್ವಿಯಾಗಿ ಮುಗಿಸಿದ ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲಾ ಜುಲೈ 15ರಂದು ಭೂಮಿಗೆ ಬಂದಿಳಿದರು. ಆಕ್ಸಿಯಮ್​-4 ಸಿಬ್ಬಂದಿಯನ್ನು ಹೊತ್ತ ಸ್ಪೇಷ್​ ಎಕ್ಸ್​ ಗ್ರೇಸ್​ ಕ್ಪಾಪ್ಸುಲ್​ ಸ್ಯಾನ್​ ಡಿಯಾಗೋ ಬಳಿಯ ಕ್ಯಾಲಿಫೋರ್ನಿಯಾದ ಕರಾವಳಿಯಲ್ಲಿ ಭಾರತೀಯ ಕಾಲಮಾನ ಮಧ್ಯಾಹ್ನ 3 ಗಂಟೆಗೆ ಯಶಸ್ವಿಯಾಗಿ ಇಳಿಯಿತು.

ಭಾರತೀಯ ವಾಯುಪಡೆಯ ಪೈಲಟ್ ಆಗಿರುವ ಗ್ರೂಪ್ ಕ್ಯಾಪ್ಟನ್ ಶುಕ್ಲಾ, 1984 ರಲ್ಲಿ ವಿಂಗ್ ಕಮಾಂಡರ್ ರಾಕೇಶ್ ಶರ್ಮಾರ ಬಳಿಕ ಬಾಹ್ಯಾಕಾಶಕ್ಕೆ ಭೇಟಿ ನೀಡಿದ ಎರಡನೇ ಭಾರತೀಯನೆಂಬ ದಾಖಲೆ ಸೃಷ್ಟಿಸಿದ್ದಾರೆ. ಈ ಕಾರ್ಯಾಚರಣೆಗೆ ಭಾರತ ಸುಮಾರು 70 ಮಿಲಿಯನ್ ಡಾಲರ್​ ವ್ಯಯಿಸಿದೆ. ಈ ಒಂದು ಐತಿಹಾಸಿಕ ಭೇಟಿಗೆ ನಾಸಾ ಮತ್ತು ಇಸ್ರೋಗೆ ಮಧ್ಯವರ್ತಿಯಾಗಿ ಖಾಸಗಿ ಬಾಹ್ಯಾಕಾಶ ಕಂಪನಿ ಆಕ್ಸಿಯಮ್ ಸ್ಪೇಸ್ ಕೆಲಸ ಮಾಡಿದೆ. ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದೊಂದಿಗೆ ಡಾಕಿಂಗ್ ಮಾಡಿದಾಗಿನಿಂದ ಸುಮಾರು 12.2 ಮಿಲಿಯನ್ ಕಿಲೋಮೀಟರ್‌ಗಳನ್ನು ಕ್ರಮಿಸಿ ಭೂಮಿಯ ಸುತ್ತ ಸರಿಸುಮಾರು 433 ಗಂಟೆಗಳು, 18 ದಿನಗಳು ಮತ್ತು 288 ಕಕ್ಷೆಗಳನ್ನು ಸುತ್ತಿದ ಬಳಿಕ ಆಕ್ಸಿಯಮ್ ಮಿಷನ್ 4 (ಆಕ್ಸ್-4) ಸಿಬ್ಬಂದಿ ಮನೆಗೆ ಮರಳಿದ್ದಾರೆ.

ಕ್ಯಾಪ್ಸುಲ್​ ಬಾಹ್ಯಾಕಾಶ ನಿಲ್ದಾಣದಿಂದ ಭೂಮಿಗೆ ಪ್ರಯಾಣಿಸಲು ಸುಮಾರು 22.5 ಗಂಟೆಗಳನ್ನು ತೆಗೆದುಕೊಂಡಿತು. ಗ್ರೂಪ್ ಕ್ಯಾಪ್ಟನ್ ಶುಕ್ಲಾ ಜೊತೆಗೆ ಅಮೆರಿಕದ ಗಗನಯಾತ್ರಿ ಕಮಾಂಡರ್ ಪೆಗ್ಗಿ ವಿಟ್ಸನ್ ಮತ್ತು ಮಿಷನ್ ಸ್ಪೆಷಲಿಸ್ಟ್‌ಗಳಾದ ಪೋಲೆಂಡ್‌ನ ಸ್ಲಾವೋಸ್ಜ್ ಉಜ್ನಾನ್ಸ್ಕಿ-ವಿಸ್ನಿಯೆವ್ಸ್ಕಿ ಮತ್ತು ಹಂಗೇರಿಯ ಟಿಬೋರ್ ಕಾಪು ಕೂಡ ಈ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.

ಐಎಸ್‌ಎಸ್‌ನಲ್ಲಿದ್ದಾಗ, ಶುಕ್ಲಾ ಅವರು ಭಾರತದ 7 ನಿರ್ದಿಷ್ಟ ಮೈಕ್ರೋಗ್ರಾವಿಟಿ ಪ್ರಯೋಗಗಳನ್ನು ನಡೆಸಿದರು. ಇದು ಬಾಹ್ಯಾಕಾಶ ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಭಾರತದ ಬೆಳೆಯುತ್ತಿರುವ ಸಾಮರ್ಥ್ಯಗಳನ್ನು ಪ್ರದರ್ಶಿಸುತ್ತದೆ. ಭವಿಷ್ಯದ ಗ್ರಹ ಕಾರ್ಯಾಚರಣೆಗಳು ಮತ್ತು ದೀರ್ಘಾವಧಿಯ ಬಾಹ್ಯಾಕಾಶ ವಾಸಕ್ಕಾಗಿ ನಿರ್ಣಾಯಕ ಡೇಟಾವನ್ನು ಉತ್ಪಾದಿಸಲು ಈ ಪ್ರಯೋಗಗಳನ್ನು ವಿನ್ಯಾಸಗೊಳಿಸಲಾಗಿತ್ತು. ಬಾಹ್ಯಾಕಾಶದಿಂದ ಮರಳಿದ ಬಳಿಕ ಗುರುತ್ವಾಕರ್ಷಣೆಗೆ ಹೊಂದಿಕೊಳ್ಳಲು ಗ್ರೂಪ್ ಕ್ಯಾಪ್ಟನ್ ಶುಕ್ಲಾ ಸುಮಾರು ಒಂದು ವಾರದ ವೈದ್ಯಕೀಯ ಪುನರ್ವಸತಿಗೆ ಒಳಗಾಗಿದ್ದರು. ಸಹಜ ಸ್ಥಿತಿಗೆ ಮರಳಿದ್ದು, ಇದೀಗ ಭಾರತಕ್ಕೆ ವಾಪಾಸ್ಸಾಗಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net