

ವಾಷಿಂಗ್ಟನ್: ಹಿಟ್ಲರ್ ಯಾರಿಗೆ ತಾನೆ ಗೊತ್ತಿಲ್ಲ ಹೇಳಿ. ಜರ್ಮನ್ ಸರ್ವಾಧಿಕಾರಿಯಾಗಿ ಆಡಳಿತ ನಡೆಸಿದ ಆತನ ಮನೆಯಿಂದ ಅಮೆರಿಕದ ಯೋಧನೊಬ್ಬ ಲೂಟಿ ಮಾಡಿದ್ದ ವಸ್ತುಗಳನ್ನು ಇದೀಗ ಹರಾಜಿಗೆ ಇಡಲಾಗಿದೆ. ವಿಶೇಷವೆಂದರೆ ಹಿಟ್ಲರ್ ಬಳಸುತ್ತಿದ್ದ ಟಾಯ್ಲೆಟ್ ಸೀಟೊಂದಕ್ಕೇ ಬರೋಬ್ಬರಿ 13 ಲಕ್ಷ ರೂಪಾಯಿ ಬೆಲೆ ಕಟ್ಟಲಾಗಿದೆಯಂತೆ.
ಅಂದ ಹಾಗೆ ಈ ಟಾಯ್ಲೆಟ್ ಸೀಟಿಗೆ 3.5 ಲಕ್ಷ ರೂಪಾಯಿಂದ ಹರಾಜು ಕೂಗಲಾಗಿದೆ. ಹರಾಜಿನ ಕೊನೆಯಲ್ಲಿ ಅದರ ಬೆಲೆ 13 ಲಕ್ಷ ರೂಪಾಯಿಯವರೆಗೂ ಹೋಗಲಿದೆಯಂತೆ. ಎರಡನೇ ಮಹಾಯುದ್ಧದ ಕೊನೆಯಲ್ಲಿ ಹಿಟ್ಲರ್ ಸಾವನ್ನಪ್ಪಿದ ನಂತರ ಅಮೆರಿಕದ ಸೈನ್ಯವು ಬರ್ಕ್ಟೆಸ್ಗಾಡೆನ್ ತಲುಪಿತು. ಅಲ್ಲಿ ಹಿಟ್ಲರ್ ಆಗಾಗ ಬಂದು ಹೋಗುತ್ತಿದ್ದ ಮನೆಯಿದ್ದು, ಬಾಂಬ್ ಸ್ಫೋಟ ಮತ್ತು ಗುಂಡಿನ ದಾಳಿಯಿಂದಾಗಿ ಮನೆಯು ಅಳಿವಿನಂಚಿಗೆ ಬಂದಿತ್ತು. ಈ ಸಮಯದಲ್ಲಿ ಅಮೆರಿಕದ ಯೋಧ ರಾಗ್ನ್ವಾಲ್ಡ್ ಬೋರ್ಚ್ ಆ ಮನೆಯೊಳಗೆ ನುಗ್ಗಿದ್ದಾನೆ. ಅಲ್ಲಿದ್ದ ಎಲ್ಲ ವಸ್ತುಗಳನ್ನು ಲೂಟಿ ಮಾಡಿಕೊಂಡು ಬಂದಿದ್ದಾನೆ.
45 ಇಂಚು ಅಗಲವಿರುವ ಬಿಳಿ ಬಣ್ಣದ ಟಾಯ್ಲೆಟ್ ಸೀಟನ್ನು ರಾಗ್ನ್ವಾಲ್ಡ್ ಮೊದಲು ಅಮೆರಿಕಕ್ಕೆ ತಂದನು. ನ್ಯೂಜೆರ್ಸಿಯಲ್ಲಿದ್ದ ತನ್ನ ಮನೆಯ ನೆಲಮಾಳಿಗೆಯಲ್ಲಿ ಇರಿಸಿದನು. ಫೆಬ್ರವರಿ 8 ರಂದು ಕುಟುಂಬವು ಆ ಸೀಟನ್ನು ಹರಾಜಿಗೆ ಹಾಕಿದೆ. (ಏಜೆನ್ಸೀಸ್)