ರೈತರ ಹೋರಾಟ ನೋಡಿದ್ರೆ ಹೊಟ್ಟೆ ಉರಿಯುತ್ತೆ! ನನಗೆ ಅಧಿಕಾರ ಇದ್ದಿದ್ರೆ ಎಲ್ಲವನ್ನೂ ಬರೆದುಕೊಡ್ತಿದ್ದೆ...

shivanna
Published on

ಬೆಂಗಳೂರು: ಸರ್ಕಾರ ರೈತರ ಪರವಾಗಿ ನಿಲ್ಲಬೇಕು. ನನ್ನ ಕೈಯಲ್ಲಿ ಅಧಿಕಾರ ಇದ್ದಿದ್ರೆ ಎಲ್ಲವನ್ನೂ ಬರೆದುಕೊಡ್ತಿದ್ದೆ ಎಂದು ಸ್ಯಾಂಡಲ್​ವುಡ್​ನ ಹ್ಯಾಟ್ರಿಕ್​ ಹೀರೋ ಶಿವರಾಜ್​ಕುಮಾರ್​ ಹೇಳಿದರು.

ಕೃಷಿ ಕಾಯ್ದೆ ಹಿಂಪಡೆಗೆ ಆಗ್ರಹಿಸಿ ಕೇಂದ್ರ ಸರ್ಕಾರದ ವಿರುದ್ಧ ರೈತರು ದೇಶವ್ಯಾಪಿ ಬೀದಿಗಿಳಿದು ಪ್ರತಿಭಟಿಸುತ್ತಿದ್ದಾರೆ. ಟ್ರ್ಯಾಕ್ಟರ್​ ರ್ಯಾಲಿ, ಹೆದ್ದಾರಿ ತಡೆ ಹೋರಾಟ ಸೇರಿದಂತೆ ನಾನಾ ಮಜಲನ್ನು ರೈತರ ಹೋರಾಟ ಪಡೆದಿದೆ. ಅನ್ನದಾತರ ಕಿಚ್ಚು ಹೊತ್ತಿಉರಿಯುತ್ತಲೇ ಇದೆ. ರೈತರ ಹೋರಾಟದ ಬಗ್ಗೆ ಮಂಗಳವಾರ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಶಿವರಾಜ್​ಕುಮಾರ್​, ರೈತರ ಹೋರಾಟ ನೋಡಿದ್ರೆ ಹೊಟ್ಟೆ ಉರಿಯುತ್ತೆ. ಪಾಪ ಅನ್ಸುತ್ತೆ ಎಂದರು.

ರೈತರ ಹೋರಾಟದ ಬಗ್ಗೆ ನಾವ್ಯಾರು ಕಮೆಂಟ್ ಮಾಡ್ತಿಲ್ಲ ಅಂತಾರೆ. ಆದ್ರೆ ಅದು ನಮ್ಮಿಂದ, ಇಂಡಸ್ಟ್ರಿಯಿಂದ ಅಥವಾ ಇಡೀ ಭಾರತೀಯ ಸಿನಿಮಾರಂಗ ಬೀದಿಗೆ ಇಳಿಯೋದ್ರಿಂದ ಸಮಸ್ಯೆ ಬಗೆಹರಿಯಲ್ಲ. ಹಾಗೆ ಆಗೋದಾದ್ರೆ ನಾವು ಬೀದಿಗಿಳಿಯಲೂ ಸಿದ್ಧ ಎಂದ ಶಿವಣ್ಣ, ರೈತರ ಸಮಸ್ಯೆಯನ್ನ ಸರ್ಕಾರವೇ ಬಗೆಹರಿಸಬೇಕು. ಈ ಬಗ್ಗೆ ಸರ್ಕಾರ ಗಮನಹರಿಸಬೇಕು ಎಂದರು.

ಇನ್ನು ಆರಂಭದಲ್ಲಿ 'ನಮ್ಮ ಸಮಸ್ಯೆಗಳನ್ನ ನಾವು ಪರಿಹಾರ ಮಾಡಿಕೊಳ್ಳೋಕೆ ಆಗುತ್ತಿಲ್ಲ, ಅಂತಹದ್ದರಲ್ಲಿ ನಮ್ಮ ಕೈಯಲ್ಲಿ ಏನಿದೆ?' ಎಂದ ಶಿವಣ್ಣ, 'ರೈತರು ಏನೇ ಮಾಡಿದ್ರು ನಮ್ಮ ಸಪೋರ್ಟ್ ಖಂಡಿತ ಇದೆ. ನನ್ನ ಕೈಯಲ್ಲಿ ಅಧಿಕಾರ ಇದ್ದಿದ್ರೆ, ಎಲ್ಲವನ್ನೂ ಬರೆದು ಕೊಡ್ತಿದ್ದೆ' ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net