

ವಾಗ್ಭಟಾಚಾರ್ಯರು ತಮ್ಮ ಅಷ್ಟಾಂಗ ಹೃದಯ ಎಂಬ ಗ್ರಂಥದಲ್ಲಿ ಒಬ್ಬ ಮನುಷ್ಯ ರೋಗ ರಹಿತನಾಗಿ ಬದುಕಲು ಇಟ್ಟುಕೊಳ್ಳಬೇಕಾದ ನಿಯಮಗಳ ಬಗ್ಗೆ ಹೇಳಿದ್ದಾರೆ. ಅವುಗಳಲ್ಲಿ ಒಂದು ಹಿತಾಹಾರ ಸೇವನೆ. ಆದರೆ ಹಿತವಾದ ಆಹಾರ ಎಂದರೆ ಎಂತಹ ಆಹಾರ ಎಂಬುದರ ತಿಳಿವಳಿಕೆ ನಮಗೆ ಇರಬೇಕು. ಹಿತಾಹಾರವೆಂದರೆ ಮೊದಲನೆಯದಾಗಿ ಆ ಆಹಾರದಲ್ಲಿ ಬಳಸಿದ ಘಟಕಗಳು ದೇಹದ ಆರೋಗ್ಯವನ್ನು ಹೆಚ್ಚಿಸುವ ಮತ್ತು ರೋಗವನ್ನು ನಿವಾರಿಸುವ ಗುಣವನ್ನು ಹೊಂದಿರಬೇಕು. ಹಾಗಾಗಿ ಆಹಾರ ತಯಾರಿಸುವಾಗ ನಾವು ಅದರಲ್ಲಿ ಬಳಸುವ ವಸ್ತುಗಳ ಗುಣಗಳ ಬಗ್ಗೆ ಅರಿತಿರಬೇಕು. ಉದಾಹರಣೆಗೆ, ಅರಿಶಿನ, ಶುಂಠಿ, ದಾಲ್ಚಿನ್ನಿಯಂತಹ ಸಾಂಬಾರ ಪದಾರ್ಥಗಳು, ಕರಿಬೇವು, ನುಗ್ಗೆಯಂತಹ ಸೊಪ್ಪುಗಳು, ತರಕಾರಿಗಳು, ಹಣ್ಣುಗಳು, ಒಣಹಣ್ಣುಗಳು, ದೇಶೀ ತಳಿಯ, ಹುಲ್ಲು ಮೆಂದ ಆಕಳ ಹಾಲು ಮತ್ತು ಅದರ ಉತ್ಪನ್ನಗಳು ಹೀಗೆ ಇವೆಲ್ಲಾ ಧನಾತ್ಮಕ ಗುಣಗಳನ್ನು ಹೊಂದಿರುವ ಆಹಾರ ಪದಾರ್ಥಗಳು. ಆದರೆ ಅವುಗಳನ್ನು ಹೇಗೆ ಬಳಸುತ್ತೇವೆ ಎಂಬದರ ಮೇಲೆ ನಮ್ಮ ಆರೋಗ್ಯದ ಮೇಲೆ ಅವುಗಳಿಂದಾಗುವ ಪರಿಣಾಮ ನಿರ್ಧರಿತವಾಗುತ್ತದೆ. ಸಕ್ಕರೆ, ಮೈದಾ, ಹೊರಗಡೆ ಸಿಗುವ ಸಿದ್ಧ ತಿಂಡಿಗಳಲ್ಲಿ ಬಳಸುವ ರಾಸಾಯನಿಕಗಳು ಜನ್ಮತಃ ಅಹಿತವಾದವು. ಅವುಗಳನ್ನು ಹೇಗೆ ಬಳಸಿದರೂ ದೇಹಕ್ಕೆ ಹಾನಿಯಾಗುವುದು ಶತಃಸಿದ್ಧ. ಹಾಗಾಗಿ ಹಿತವಾದ ಆಹಾರವೆಂದರೆ ಇಂತಹ ರಾಸಾಯನಿಕಗಳನ್ನು ಬಳಸಿರಬಾರದು.
ಸ್ವಲ್ಪವೂ ಕೊಬ್ಬಿನ ಅಂಶವಿಲ್ಲದ ಆಹಾರವನ್ನು ಸೇವಿಸುಸುವುದು ಇಂದಿನ ಫ್ಯಾಷನ್ ಆಗಿದೆ. ಆದರೆ ನಮಗೆ ನಿತ್ಯವೂ ಕೊಬ್ಬಿನ ಅವಶ್ಯಕತೆ ಇದೆ. ನಮ್ಮ ಮಿದುಳು, ಹೃದಯ, ಮೂಳೆಗಳು ಹೀಗೆ ಇಡೀ ಶರೀರ ಸರಿಯಾಗಿ ಕಾರ್ಯನಿರ್ವಹಿಸಬೇಕೆಂದರೆ ಕೊಬ್ಬು ಬೇಕೇ ಬೇಕು. ಆದರೆ ಅದು ಒಳ್ಳೆಯ ಕೊಬ್ಬಾಗಿರಬೇಕು. ಹುಲ್ಲು ಮೆಂದ ಆಕಳ ಹಾಲು, ತುಪ್ಪ, ಬೆಣ್ಣೆ, ಗಾಣದಲ್ಲಿ ತಯಾರಿಸಿದ ಕೊಬ್ಬರಿ ಎಣ್ಣೆ, ಶೇಂಗಾ ಎಣ್ಣೆಗಳು ಮತ್ತು ಬಾದಾಮಿ, ಗೋಡಂಬಿ, ಅಕ್ರೋಟ್ನಂತಹ ನಟ್ಗಳು ಇಂತಹವುಗಳನ್ನು ಹೆಚ್ಚು ಹೆಚ್ಚಾಗಿ ಸೇವಿಸಬೇಕು. ಸಂಸ್ಕರಿತ, ಅತಿಯಾಗಿ ಕರಿದ, ಮಾರ್ಕೆಟ್ಗಳಲ್ಲಿ ಸಿಗುವ ಕೊಬ್ಬಿನ ಪದಾರ್ಥಗಳು ವಿಷಕಾರಿ ಎಂಬುದರಲ್ಲಿ ಯಾವುದೇ ಸಂಶಯವಿಲ್ಲ.
ಊಟದ ಪ್ರಮಾಣದ ಮೇಲೆಯೂ ನಮ್ಮ ಆರೋಗ್ಯ ಅವಲಂಬಿತವಾಗಿದೆ. ಪೌಷ್ಟಿಕ ಆಹಾರವಾಗಿದ್ದರೂ ಕಂಠಪೂರ್ತಿ ತಿಂದರೆ ಅದು ವಿಷವಾಗಿ ಪರಿಣಮಿಸುತ್ತದೆ. ಹೆಚ್ಚು ತಿಂದಷ್ಟೂ ದೇಹಕ್ಕೆ ಹೆಚ್ಚು ಪುಷ್ಟಿ ಎಂದುಕೊಂಡರೆ ಅದು ತಪ್ಪು. ಆಯುರ್ವೆದ, ನಮ್ಮ ಸಂಸ್ಕೃತಿ ಅಥವಾ ಇತ್ತೀಚಿನ ಸಂಶೋಧನೆಗಳು ಹೇಳುವುದೇನೆಂದರೆ ನಾವು ದಿನಕ್ಕೆರಡು ಬಾರಿ ಊಟ ಮಾಡಿದರೆ ಅದು ಬೇಕಾದಷ್ಟಾಯಿತು. ಉಳಿದ ಸಮಯದಲ್ಲಿ ಹಸಿವಾದರೆ ಎಳನೀರು ಅಥವಾ ಹಣ್ಣುಗಳ ಜ್ಯೂಸ್ ಸೇವಿಸಬಹುದು. ನೊಬೆಲ್ ಪಾರಿತೋಷಕ ಪಡೆದ ಜಪಾನಿನ ವಿಜ್ಞಾನಿ ಯೋಶಿನೋರಿ ಓಹ್ಸುಮಿಯ ಸಂಶೋಧನೆಯ ಪ್ರಕಾರ ಉಪವಾಸದಿಂದ ಕ್ಯಾನ್ಸರ್ನಂತಹ ರೋಗಗಳನ್ನೂ ಗೆಲ್ಲಬಹುದು. ಆಹಾರ ಸೇವಿಸುವಾಗ ನಾವು ಎಂಥ ಭಾವನೆಯಲ್ಲಿ ಸೇವಿಸುತ್ತೇವೆಯೋ ಹಾಗೇ ನಾವಾಗುತ್ತೇವೆ ಎನ್ನುತ್ತಾರೆ. ಹಾಗಾಗಿಯೇ ‘ಜ್ಞಾನ ವೈರಾಗ್ಯ ಸಿದ್ಧ್ಯರ್ಥಂ ಭಿಕ್ಷಾಂ ದೇಹೀ ಚ ಪಾರ್ವತಿ’ ಎಂದು ಪ್ರಾರ್ಥಿಸಿ ನಾವು ಆಹಾರ ಸೇವಿಸುವುದು. ಭಿಕ್ಷೆ ಕೊಟ್ಟಿದ್ದಕ್ಕೆ ದೇವಿಗೆ ಕೃತಜ್ಞನಾಗಿ, ಜ್ಞಾನ ಮತ್ತು ವೈರಾಗ್ಯ ಸಿದ್ಧಿಗೆ ಪ್ರಯತ್ನಿಸುತ್ತೇನೆ ಎಂಬ ಭಾವನೆಯಲ್ಲಿ ಊಟ ಮಾಡಬೇಕು. ಆದರೆ ಟಿವಿ, ಮೊಬೈಲ್ ನೋಡುತ್ತಾ ಮಾಡಿದ ಅಮೃತ ಸಮಾನ ಊಟವೂ ದೇಹ ಮತ್ತು ಮನಸ್ಸಿಗೆ ವಿಷಕಾರಿಯಾಗಬಲ್ಲುದು. ಆಚಾರ್ಯ ಚರಕರು ‘ತನ್ಮನಾ ಭುಂಜೀತ’ ಎಂದಿದ್ದಾರೆ. ಅಂದರೆ ಊಟ ಮಾಡುವಾಗ ಮನಸ್ಸು ಊಟದಲ್ಲೇ ಇರಬೇಕು ಎಂದು. ಹಾಗಿದ್ದಾಗ ಮಾತ್ರ ಮಾಡಿದ ಊಟವನ್ನು ಜೀರ್ಣಿಸಲು ಮತ್ತು ಹೀರಿಕೊಳ್ಳಲು ದೇಹ ತಯಾರಾಗುತ್ತದೆ.