ಹಿರಿಯೂರಿನಲ್ಲಿ ಬಿ.ಸಿ.ಶಿವಣ್ಣ ಶೈಕ್ಷಣಿಕ ಪ್ರೋತ್ಸಾಹ ಪ್ರಶಸ್ತಿ ಪ್ರದಾನ

HYR prathibha puraskara
Published on

ಹಿರಿಯೂರು: ವಿದ್ಯಾರ್ಥಿಗಳು ಉತ್ತಮ ಅಂಕ ಗಳಿಸುವ ಜತೆಗೆ ಜೀವನ ಮೌಲ್ಯ ಅಳವಡಿಸಿಕೊಂಡು ಸಮಾಜದ ಆಸ್ತಿಯಾಗಬೇಕು ಎಂದು ಡಿಡಿಪಿಐ ರವಿಶಂಕರ್ ರೆಡ್ಡಿ ಹೇಳಿದರು.

ನಗರದ ರೋಟರಿ ಸಭಾಭವನದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ-ಬಿ.ಸಿ.ಶಿವಣ್ಣ ಶೈಕ್ಷಣಿಕ ಪ್ರೋತ್ಸಾಹ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಭವಿಷ್ಯ ಉಜ್ವಲಗೊಳ್ಳಲು ಶಿಕ್ಷಣದಿಂದ ಮಾತ್ರ ಸಾಧ್ಯ. ಈ ಸತ್ಯವನ್ನು ವಿದ್ಯಾರ್ಥಿಗಳು ಅರಿತು ವಿದ್ಯಾಭ್ಯಾಸದಲ್ಲಿ ಹೆಚ್ಚು ಆಸಕ್ತಿ ಬೆಳೆಸಿಕೊಳ್ಳಬೇಕು.

ಮಕ್ಕಳಿಗೆ ಉತ್ತಮ ಸಂಸ್ಕಾರ, ನಾಯಕತ್ವ ಗುಣ, ನೈತಿಕ ಮೌಲ್ಯ, ಸಂಸ್ಕೃತಿ, ಒಳ್ಳೆಯ ನಡೆ-ನುಡಿ ಕಲಿಸುವ ಜವಾಬ್ದಾರಿ ಶಿಕ್ಷಕರು, ಪಾಲಕರ ಮೇಲಿದೆ ಎಂದರು.

ಸಮಾಜಕ್ಕೆ ದಿವಂಗತ ಬಿ.ಸಿ.ಶಿವಣ್ಣ ಸೇವೆ ಅಪಾರ. ಅವರ ಜೀವನದ ಹೆಜ್ಜೆ ಗುರುತು ಇತರರಿಗೆ ಪ್ರೇರಣೆ. ಅವರ ಹಾದಿಯಲ್ಲಿಯೇ ನಾವೆಲ್ಲರೂ ಸಾಗಬೇಕು. ಸಮಾಜ ಸೇವೆ ಮಾಡಬೇಕೆಂಬ ಹಂಬಲ ಹೆಚ್ಚಿಸಿಕೊಳ್ಳಬೇಕು ಹೇಳಿದರು.

ಜಿಲ್ಲಾ ವಕೀಲರ ಸಂಘದ ಮಾಜಿ ಅಧ್ಯಕ್ಷ ಬಿ.ಎಸ್.ನಾಗರಾಜ್ ಮಾತನಾಡಿ, ವಿದ್ಯೆ ವ್ಯಕ್ತಿತ್ವ ರೂಪಿಸುವ ಸಾಧನವಾದಾಗ ಮಾತ್ರ ಬದುಕಿನಲ್ಲಿ ಸುಖ, ಶಾಂತಿ, ನೆಮ್ಮದಿ ಸಿಗಲು ಸಾಧ್ಯ ಎಂದರು.

ಹಿರಿಯೂರು ತಾಲೂಕಿನ ಸರ್ಕಾರಿ ಪ್ರೌಢಶಾಲೆಗಳಲ್ಲಿ ವಿದ್ಯಾಭ್ಯಾಸ ಮಾಡಿ, ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ 2023ನೇ ಸಾಲಿನ ಬಿ.ಸಿ.ಶಿವಣ್ಣ ಶೈಕ್ಷಣಿಕ ಪ್ರೋತ್ಸಾಹ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಕಲ್ಪನಾ, ಡಾ.ರಾಮೇಶ್ವರಪ್ಪ, ಮಮತಾ, ರೈತ ಸಂಘದ ತಾಲೂಕಾಧ್ಯಕ್ಷ ಕೆ.ಟಿ.ತಿಪ್ಪೇಸ್ವಾಮಿ, ಬಿಇಒ ಎಸ್.ನಾಗಭೂಷಣ್ ಇತರರಿದ್ದರು.

ವಿದ್ಯಾರ್ಥಿಗಳನ್ನು ಗುರುತಿಸಿ, ಪ್ರೋತ್ಸಾಹಿಸಿ, ವಿದ್ಯಾಭ್ಯಾಸಕ್ಕೆ ಅಗತ್ಯ ಸಹಕಾರ ನೀಡಿದರೆ ಬಹುದೊಡ್ಡ ಸಾಧನೆ ಮಾಡುತ್ತಾರೆ. ಇದಕ್ಕೆ ಚಿತ್ರದುರ್ಗ ಜಿಲ್ಲೆ ಈ ಬಾರಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ನಂ.1 ಸ್ಥಾನ ಪಡೆದಿರುವುದು ಉತ್ತಮ ಉದಾಹರಣೆ. ಈ ಸಾಧನೆ ಕಾಯ್ದುಕೊಳ್ಳಲು ಪಾಲಕರು, ಶಿಕ್ಷಕರು, ಇಲಾಖೆ ಒಟ್ಟುಗೂಡಿ ಕೆಲಸ ಮಾಡಬೇಕು.ಡಾ.ಬಿ.ಎಸ್.ತ್ರಿವೇಣಿ, ಅಧ್ಯಕ್ಷೆ, ಬಿ.ಸಿ.ಶಿವಣ್ಣ ಫೌಂಡೇಷನ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net