

ನವದೆಹಲಿ: ಮಹಿಳೆಯರ ಫೇರ್ನೆಸ್ ಕ್ರೀಮ್ ' ಫೇರ್ ಆ್ಯಂಡ್ ಲವ್ಲೀ'ಯಲ್ಲಿ ಇನ್ನು ಮುಂದೆ 'ಫೇರ್' ಇರೋದಿಲ್ಲ. ಹಾಗಂತಾ ಕಂಪನಿಯೇ ಘೋಷಣೆ ಮಾಡಿದೆ.
'ಫೇರ್ ಆ್ಯಂಡ್ ಲವ್ಲೀ' ಹಿಂದುಸ್ಥಾನ್ ಯುಲೀವರ್ ಕಂಪನಿಯ ಅತ್ಯಂತ ಜನಪ್ರಿಯ ಫೇರ್ನೆಸ್ ಕ್ರೀಮ್ ಆಗಿದೆ. ಬೆಳ್ಳಗೆ ಹಾಗೂ ಸುಂದರವಾಗಿ ಕಾಣಲು ಇದನ್ನೇ ಬಳಸಿ ಎಂದು ಕಂಪನಿ ದಶಕಗಳಿಂದ ಹೇಳುತ್ತ ಬಂದಿದೆ. ಆದರೆ, ಇತ್ತೀಚಿನ ದಿನಗಳಲ್ಲಿ ಇಂಥ ಸಂದೇಶ ಸಾರುವ ಜಾಹೀರಾತುಗಳಿಗೆ ವಿರೋಧ ವ್ಯಕ್ತವಾಗಿದೆ. ಜತೆಗೆ, ಇದು ಬೆಳ್ಳಗೆ ಅಥವಾ ಗೌರವರ್ಣ ಹೊಂದಿಲ್ಲದವರನ್ನು ತಾರತಮ್ಯದಿಂದ ಕಾಣುವಂತೆ ಮಾಡುತ್ತದೆ ಎನ್ನುವುದು ಈ ಕ್ರೀಮ್ ಬಗ್ಗೆ ಇರುವ ಆಕ್ರೋಶ. ಈ ಕಾರಣಕ್ಕಾಗಿಯೇ ಫೇರ್ನೆಸ್ ಕ್ರೀಮ್ನ ಹೆಸರು ಬದಲಾವಣೆಗೆ ನಿರ್ಧರಿಸಿದೆ.
'ಫೇರ್ ಆ್ಯಂಡ್ ಲವ್ಲೀ' ಎಂಬ ಹೆಸರಿನಲ್ಲಿರುವ 'ಫೇರ್' ಎಂಬ ಪದವನ್ನು ಕೈಬಿಡಲಿದೆ. ಕಂಪನಿಯು ಚರ್ಮದ ಎಲ್ಲ ವರ್ಣಗಳನ್ನು ಸಂಭ್ರಮಿಸಲು ಅಥವಾ ಗೌರವಿಲಸು ಬದ್ಧವಾಗಿದೆ ಎಂದು ಹೇಳಿಕೊಂಡಿದೆ. ಈ ಕ್ರೀಮ್ಗೆ ಹೊಸ ಹೆಸರನ್ನು ನೀಡಲಾಗಿದ್ದು, ಸಂಬಂಧಿಸಿದ ಪ್ರಾಧಿಕಾರದಿಂದ ಒಪ್ಪಿಗೆ ಪಡೆದ ಬಳಿಕ ಅನಾವರಣಗೊಳಿಸಲಾಗುವುದು ಎಂದು ಹಿಂದುಸ್ತಾನ್ ಯುನಿಲೀವರ್ ಗುರುವಾರ (ಜೂ.25) ಹೇಳಿಕೆ ನೀಡಿದೆ.
ಅಮೆರಿದಲ್ಲಿ ಕಪ್ಪು ಜನರ 'ಬ್ಲ್ಯಾಕ್ ಲೀವ್ಸ್ ಮ್ಯಾಟರ್ಸ್' ಜಗತ್ತಿನ ವಿವಿಧ ದೇಶಗಳಿಗೆ ಪಸರಿಸಿದೆ. ಚರ್ಮದ ಬಣ್ಣವನ್ನಾಧರಿಸಿ ನಡೆಯುವ ತಾರತಮ್ಯದ ವಿರುದ್ಧ ಜನರು ದನಿ ಎತ್ತಿದ್ದಾರೆ. ಹಲವು ಕಂಪನಿಗಳ ಫೇರ್ನೆಸ್ ಉತ್ಪನ್ನಗಳು ಕೂಡ ಕೆಂಗಣ್ಣಿಗೆ ಗುರಿಯಾಗಿವೆ. ಈ ಎಲ್ಲ ಕಾರಣದಿಂದಾಗಿ ಇನ್ನು ಮುಂದೆ ಶ್ವೇತ ವರ್ಣವನ್ನು ಪ್ರತಿನಿಧಿಸುತ್ತಿದ್ದ 'ಫೇರ್' ಎಂಬ ಪದವನ್ನು ಬಳಸುವುದಿಲ್ಲ ಎಂದು ಕಂಪನಿ ಸ್ಪಷ್ಟಪಡಿಸಿದೆ.
ಇದಲ್ಲದೇ, ಉತ್ಪನ್ನ ಹಾಗೂ ಅವುಗಳ ಪ್ಯಾಕೆಟ್ ಮೇಲೆ ಫೇರ್, ವೈಟ್, ವೈಟ್ನಿಂಗ್, ಲೈಟ್, ಲೈಟ್ನಿಂಗ್ ಎಂಬ ಪದಗಳನ್ನು ಬಳಸದಿರಲು ನಿರ್ಧರಿಸಿದೆ. ಚರ್ಮ ರಕ್ಷಣೆ ಉತ್ಪನ್ನಗಳು ಎಲ್ಲರನ್ನೂ, ಎಲ್ಲವನ್ನೂ ಒಳಗೊಳ್ಳುವಂತೆ ಮಾಡಲಾಗುತ್ತಿದೆ ಎಂದು ಕಂಪನಿಯ ಮುಖ್ಯಸ್ಥ ಸಂಜೀವ್ ಮೆಹ್ತಾ ಹೇಳಿದ್ದಾರೆ.