

ತುಮಕೂರು: ನಗರದ ಬಿಜಿಎಸ್ ವೃತ್ತದ ನಾಗರಕಟ್ಟೆ ದೇವಾಲಯಲ್ಲಿ ಸ್ಥಾಪಿಸಿದ್ದ ಹಿಂದು ಮಹಾಗಣಪತಿಯ ವಿಸರ್ಜನಾ ಮಹೋತ್ಸವ ಶನಿವಾರ ಅತ್ಯಂತ ವಿಜೃಂಭಣೆ ಹಾಗೂ ಶಾಂತಿಯುತವಾಗಿ ನೆರವೇರಿತು. ಮುನ್ನೆಚ್ಚರಿಕೆ ಕ್ರಮವಾಗಿ ಪ್ರಚೋದನಕಾರಿ ಭಾಷಣಕ್ಕೆ ಅವಕಾಶ ಕೊಡದಂತೆ ತುಮಕೂರು ನಗರ ಪ್ರವೇಶಿಸುವ ವೇಳೆಯೇ ರಾಷ್ಟ್ರ ರಕ್ಷಣಾ ಪಡೆಯ ಪುನೀತ್ ಕೆರೆಹಳ್ಳಿ, ವಿಎಚ್ಪಿ ಬಜರಂಗದಳ ಕಾರ್ಯಕಾರಿಣಿ ಸದಸ್ಯ ರುಸಕಲೇಶಪುರರನ್ನು ಪೊಲೀಸರು ಬಂಧಿಸಿ ಶಾಂತಿ ಕದಡುವ ಪ್ರಯತ್ನಕ್ಕೆ ಅವಕಾಶ ನೀಡಲಿಲ್ಲ. ಇನ್ನೂ ಮೆರವಣಿಗೆಗೆ ಜನಪದ ಕಲಾತಂಡಗಳು ಮೆರಗು, ಡಿಜೆ ಅಬ್ಬರಕ್ಕೆ ಹಿಂದು ಯುವಕರು, ಕಾಲೇಜು ವಿದ್ಯಾರ್ಥಿಗಳು ಕುಣಿದು ಕುಪ್ಪಳಿಸಿದರು.
ವಿಶ್ವ ಹಿಂದು ಪರಿಷತ್, ಬಜರಂಗದಳ ದ ನೇತೃತ್ವದಲ್ಲಿ ಪ್ರತಿಷ್ಠಾಪಿಸಲ್ಪಟ್ಟಿದ್ದ 7ನೇ ವರ್ಷದ ಹಿಂದು ಮಹಾ ಗಣಪತಿಯ ಅದ್ದೂರಿ ವಿಸರ್ಜನಾ ಮಹೋತ್ಸವಕ್ಕೆ ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷ ಶ್ರೀ ವೀರೇಶಾನಂದ ಸರಸ್ವತಿ ಸ್ವಾಮೀಜಿ, ಹಿರೇಮಠಾಧ್ಯಕ್ಷ ಡಾ. ಶ್ರೀ ಶಿವಾನಂದ ಶಿವಾಚಾರ್ಯ ಸ್ವಾಮೀಜಿ, ಶ್ರೀ ಅಟವೀ ಶಿವಲಿಂಗ ಸ್ವಾಮೀಜಿ, ಶ್ರೀ ಕಾರದ ವೀರಬಸವ ಸ್ವಾಮೀಜಿ ಸೇರಿದಂತೆ ಹಲವು ಮಠಾಧೀಶರುಗಳು ಚಾಲನೆ ನೀಡಿದರು. ಇದಕ್ಕು ಮುನ್ನ ಜಿಲ್ಲಾ ಉಸ್ತುವಾರಿ ಸಚಿವರು ಆದ ಗೃಹ ಸಚಿವ ಡಾ.ಜಿ.ಪರಮೇಶ್ವರ ನಾಗರಕಟ್ಟೆ ದೇವಾಲಯದ ಆವರಣದಲ್ಲಿ ಪ್ರತಿಷ್ಠಾಪಿಸಿದ್ದ ಹಿಂದು ಮಹಾಗಣಪತಿ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಿ, ಆಶೀರ್ವಾದ ಪಡೆದರು.
ಬಿಜಿಎಸ್ ವೃತ್ತದಲ್ಲಿ ಮೆರವಣಿಗೆಯಲ್ಲಿ ಕೂಡಿಕೊಂಡ ಕೇಂದ್ರ ಜಲಶಕ್ತಿ ಹಾಗೂ ರೈಲ್ವೆ ರಾಜ್ಯ ಖಾತೆ ಸಚಿವ ವಿ. ಸೋಮಣ್ಣ, ಗಣೇಶ ಮೂರ್ತಿ ಪೂಜೆ ಸಲ್ಲಿಸಿ ಮಾತನಾಡಿ, ಗಣೇಶೋತ್ಸವ ಈ ದೇಶದ ಸತ್ ಸಂಪ್ರದಾಯ. ಸ್ವಾತಂತ್ರ$್ಯ ಪೂರ್ವದಲ್ಲಿ ಬಾಲಗಂಗಾಧರನಾಥ ತಿಲಕ್ ಅವರು ಗಣೇಶಮೂರ್ತಿಯನ್ನು ಸಾರ್ವಜನಿಕವಾಗಿ ಪ್ರತಿಷ್ಠಾಪಿಸಿ ಸ್ವಾತಂತ್ರ್ತ್ರೊ್ಯತ್ಸವ ಚಳವಳಿಗೆ ನಾಂದಿ ಹಾಡಿದರು. ಸೂರ್ಯ-ಚಂದ್ರ ಎಲ್ಲಿಯವರೆಗೂ ಇರುತ್ತಾರೋ ಅಲ್ಲಿಯವರೆಗೂ ಹಿಂದು ರಾಷ್ಟ್ರದಲ್ಲಿ ಗಣೇಶೋತ್ಸವಗಳು ನಡೆಯುತ್ತವೆ. ನಗರದಲ್ಲಿ ಅಭೂತಪೂರ್ವ ಗಣೇಶೋತ್ಸವ ಮೆರವಣಿಗೆ ನಡೆದಿದೆ. ಎಲ್ಲರೂ ಒಟ್ಟಾಗಿ ಸೇರಿ ಗಣೇಶೋತ್ಸವ ಆಚರಣೆ ಮಾಡುತ್ತಿರುವುದು ಸಂತಸ ತಂದಿದೆ ಎಂದರು.
ಶಾಸಕ ಜಿ.ಬಿ.ಜ್ಯೋತಿಗಣೇಶ್, ಮಾಜಿ ಸಚಿವ ಸೊಗಡು ಶಿವಣ್ಣ, ಕೋರಿ ಮಂಜಣ್ಣ, ಜಿ.ಕೆ. ಶ್ರೀನಿವಾಸ್, ಟಿ.ಬಿ. ಶೇಖರ್, ಡಾ. ಎಸ್.ಪರಮೇಶ್, ಎಚ್.ಎಸ್.ರವಿಶಂಕರ್, ಮಂಜು ಭಾರ್ಗವ ಸೇರಿದಂತೆ ಅನೇಕ ಭಕ್ತರು ಗಣೇಶಮೂರ್ತಿಗೆ ಪೂಜೆ ಸಲ್ಲಿಸುವ ಮುಖೇನ ಶೋಭಾಯಾತ್ರೆಯಲ್ಲಿ ಪಾಲ್ಗೊಂಡರು.
ಗಣಪತಿ ಮೂರ್ತಿಯೊಂದಿಗೆ ಸಿದ್ದಗಂಗಾ ಮಠದ ಲಿಂಗೈಕ್ಯ ಡಾ.ಶಿವಕುಮಾರಸ್ವಾಮೀಜಿ, ದತ್ತಾತ್ರೇಯ, ಬಜರಂಗಿ, ಜಟಾಯು, ವೀರ ಸಾವರ್ಕರ್ ಅವರುಗಳ ಸ್ತಬ್ದ ಚಿತ್ರಗಳ ಮೆರವಣಿಗೆ ಕೂಡ ನಡೆಯಿತು.
ಮೆರವಣಿಗೆಯಲ್ಲಿ ನಾಸಿಕ್ ಡೋಲ್, ನಂದಿ ದ್ವಜ, ವೀರಗಾಸೆ, ಡಂಕವಾದ್ಯ, ತಮಟೆವಾದ್ಯ, ಡಿ.ಜೆ.,ಪಟಾಕಿ, ಸಿಡಿಮದ್ದುಗಳು ಪ್ರದರ್ಶನ ದೊಂದಿಗೆ ನಗರದ ಬಿ.ಜಿ.ಎಸ್ ವೃತ್ತದಿಂದ ಆರಂಭಗೊಂಡು ಲಕ್ಕಪ್ಪ ವೃತ್ತದಿಂದ, ಜೆ.ಸಿ.ರಸ್ತೆ ಮೂಲಕ ಮಾರ್ಕೆಟ್ ಮಾರ್ಗವಾಗಿ ಮಂಡಿಪೇಟೆ, ಸ್ವತಂತ್ರ$್ಯ ಚೌಕ, ಆಶೋಕ ರಸ್ತೆ, ಟೌನ್ ಹಾಲ್, ಬಿ.ಎಚ್.ರಸ್ತೆ, ಎಂ.ಜಿ.ರಸ್ತೆ, ಜೈನ್ ಟೆಂಪಲ್ ರಸ್ತೆ,ರಾಮಪ್ಪ ವೃತ್ತ, ಅಂಬೇಡ್ಕರ್ ರಸ್ತೆಯ ಮೂಲಕ ಕೋಟೆ ಆಂಜನೇಯಸ್ವಾಮಿ ವೃತ್ತ ತಲುಪುವ ಹೊತ್ತಿಗೆ ರಾತ್ರಿ 10 ಗಂಟೆಯಾಗಿತ್ತು. ತದನಂತರ ಗಾರ್ಡನ್ ರಸ್ತೆ ಮಾರ್ಗವಾಗಿ ಚಿಕ್ಕಪೇಟೆಯ ಕೆ.ಎನ್.ಎಸ್.ರೈಸ್ ಮಿಲ್ ಹಿಂಭಾಗದಲ್ಲಿರುವ ಕಲ್ಯಾಣಿಯಲ್ಲಿ ವಿಸರ್ಜಿಸಲಾಯಿತು. ಅಷ್ಟರಲ್ಲಾಗಲೇ ತಡರಾತ್ರಿಯಾಗಿತ್ತು.
ಪೊಲೀಸ್ ಸರ್ಪಗಾವಲು: ಗಣೇಶೋತ್ಸವದ ಅಂಗವಾಗಿ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಜಿಲ್ಲಾ ಪೊಲೀಸ ವರಿಷ್ಠಾಧಿಕಾರಿ ಕೆ.ವಿ.ಅಶೋಕ್ ಕೆ.ವಿ. ನೇತೃತ್ವದಲ್ಲಿ ನಗರದಾದ್ಯಂತ ಬಿಗಿ ಪೊಲೀಸ್ ಬಂದೋ ಬಸ್ತ್ ವ್ಯವಸ್ಥೆ ಮಾಡಲಾಗಿತ್ತು. ಸಾವಿರಕ್ಕು ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು ಭದ್ರತೆಗೆ ನಿಯೋಜಿಸಲಾಗಿತ್ತು.