

ಗೌಹಾಟಿ : ಈಶಾನ್ಯ ರಾಜ್ಯಗಳಲ್ಲಿ ಬಿಜೆಪಿಯ ಪ್ರಮುಖ ಚುನಾವಣಾ ತಂತ್ರಜ್ಞರಾಗಿದ್ದ ಮತ್ತು ಪಕ್ಷದ ಹಿರಿಯ ಮುಖಂಡರಾದ ಹಿಮಂತ ಬಿಸ್ವ ಸರ್ಮ ಅವರು ಅಸ್ಸಾಂನ ಮುಂದಿನ ಮುಖ್ಯಮಂತ್ರಿಯಾಗಲಿದ್ದಾರೆ. ಇಂದು ಅಸ್ಸಾಂನ ವಿಧಾನಸಭಾ ಆವರಣದಲ್ಲಿ ನಡೆದ ಹೊಸ ಶಾಸಕರ ಸಭೆಯಲ್ಲಿ ಬಿಜೆಪಿ ಶಾಸಕಾಂಗ ಪಕ್ಷದ ನಾಯಕರಾಗಿ ಸರ್ಮ ಆಯ್ಕೆಯಾಗಿದ್ದಾರೆ.
ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಸತತ ಎರಡನೇ ಅವಧಿಗೆ ಅಸ್ಸಾಂನಲ್ಲಿ ಅಧಿಕಾರಕ್ಕೆ ಮರಳಿದೆ. ಇಂದು ಗೌಹಾಟಿಯಲ್ಲಿ ಈವರೆಗೆ ರಾಜ್ಯದ ಮುಖ್ಯಮಂತ್ರಿಗಳಾಗಿದ್ದ ಸರ್ಬಾನಂದ ಸೊನೊವಾಲ್ ಮತ್ತು ಪಕ್ಷದ ನಾಲ್ಕು ಕೇಂದ್ರೀಯ ಪರಿವೀಕ್ಷಕರ ಮುಂದೆ ಶಾಸಕಾಂಗ ಪಕ್ಷದ ಸಭೆ ನಡೆಯಿತು. ಸೊನೊವಾಲ್ ಅವರೇ ಸರ್ಮ ಹೆಸರನ್ನು ಸಿಎಂ ಸ್ಥಾನಕ್ಕಾಗಿ ಪ್ರಸ್ತಾಪಿಸಿದರೆ, ಉಳಿದವರೆಲ್ಲಾ ಅದನ್ನು ಬೆಂಬಲಿಸಿದರು ಎಂದು ಸಭೆಯ ನಂತರ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ತಿಳಿಸಿದ್ದಾರೆ.
52 ವರ್ಷ ವಯಸ್ಸಿನ ಹಿಮಂತ್ ಬಿಸ್ವ ಸರ್ಮ ಅವರು ಜಲುಕ್ಬರಿ ವಿಧಾನಸಭಾ ಕ್ಷೇತ್ರದಿಂದ ಐದನೇ ಬಾರಿ ಶಾಸಕರಾಗಿ ಆಯ್ಕೆಯಾಗಿದ್ದು, ಹಿಂದಿನ ಸೊನೊವಾಲ್ ಸರ್ಕಾರದಲ್ಲಿ ಪ್ರಮುಖ ಸಚಿವರಾಗಿದ್ದರು. ನೂತನ ಸಿಎಂ ಸ್ಥಾನಕ್ಕೆ ಸರ್ಮ ಅವರ ಹೆಸರನ್ನು ಪ್ರಧಾನಿ ನರೇಂದ್ರ ಮೋದಿ ಮತ್ತು ಹಿರಿಯ ಬಿಜೆಪಿ ನಾಯಕರು ಈ ಮುನ್ನವೇ ಅನುಮೋದಿಸಿದ್ದರು ಎನ್ನಲಾಗಿದೆ.
ಃಇ