ಕರೊನಾ ಸಮರದಲ್ಲಿ ಸಾಥ್​ ನೀಡಲಿದ್ದಾರೆ 8 ಲಕ್ಷ ಆಯುಷ್​​ ವೈದ್ಯರು

ayush
Published on

ನವದೆಹಲಿ : ಕರೊನಾ ಸಮರದಲ್ಲಿ ದೇಶದ ಆರೋಗ್ಯ ವ್ಯವಸ್ಥೆಯ ಬಲ ಹೆಚ್ಚಿಸಲು ಆಯುಷ್​ ಮಂತ್ರಾಲಯದ ಅಡಿ ಬರುವ 8 ಲಕ್ಷಕ್ಕೂ ಮೀರಿದ ವೈದ್ಯರು ಮತ್ತು ವೈದ್ಯಕೀಯ ಕಾರ್ಯಕರ್ತರ ಸೇವೆಯನ್ನು ಬಳಸಿಕೊಳ್ಳಲಾಗುವುದು ಎಂದು ಆಯುಷ್​ ರಾಜ್ಯ ಸಚಿವ ಕಿರೆನ್​​ ರಿಜಿಜು ಘೋಷಿಸಿದ್ದಾರೆ. ಈಗಾಗಲೇ ಕೋವಿಡ್​ನ ಕ್ಲಿನಿಕಲ್ ನಿರ್ವಹಣೆಯಲ್ಲಿ 1 ಲಕ್ಷಕ್ಕೂ ಹೆಚ್ಚು ಆಯುಷ್​ ವೈದ್ಯರಿಗೆ ತರಬೇತಿ ನೀಡಲಾಗಿದ್ದು, ಆಯುಷ್​​ ಮಾನವ ಸಂಪನ್ಮೂಲವನ್ನು ಮುಂಚೂಣಿ ಕೋವಿಡ್​ ಕರ್ತವ್ಯಗಳಿಗೆ ನಿಯುಕ್ತಿಗೊಳಿಸುವ ಬಗ್ಗೆ ಸೂಚನೆ ಜಾರಿಯಾಗಿದೆ ಎಂದಿದ್ದಾರೆ.

ಜೊತೆಗೆ ದೇಶಾದ್ಯಂತ ಇರುವ ಆಯುಷ್​ ವೈದ್ಯಕೀಯ ಕಾಲೇಜು ಆಸ್ಪತ್ರೆಗಳನ್ನು ಕೋವಿಡ್​ ಚಿಕಿತ್ಸಾ ಘಟಕಗಳಾಗಿ ಪರಿವರ್ತಿಸುವ ನಿರ್ಧಾರವನ್ನೂ ಕೈಗೊಳ್ಳಲಾಗಿದೆ. ರಾಜ್ಯಗಳಲ್ಲಿ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿರುವ 750 ಆಯುಷ್​ ಆಸ್ಪತ್ರೆಗಳನ್ನು ಮತ್ತು ಆಯುಷ್​ನ ನ್ಯಾಷನಲ್​ ಇನ್ಸ್​​ಸ್ಟಿಟ್ಯೂಟ್​ಗಳು ಮತ್ತು ಸಂಶೋಧನಾ ಘಟಕಗಳಲ್ಲಿರುವ 86 ಕ್ಲಿನಿಕಲ್ ಫೆಸಿಲಿಟಿಗಳನ್ನು ಕೋವಿಡ್​ ಚಿಕಿತ್ಸೆಗೆ ಸೂಕ್ತವಾಗುವ ರೀತಿಯಲ್ಲಿ ಪರಿವರ್ತಿಸಲು ಆಯುಷ್​ ಮಂತ್ರಾಲಯ ಸಹಕಾರ ನೀಡಲಿದೆ. ಇದರಿಂದ ಹೊಸದಾಗಿ 50,000 ಬೆಡ್​ಗಳು ಕೋವಿಡ್​ ಚಿಕಿತ್ಸೆಗೆ ಲಭ್ಯವಾಗಲಿವೆ ಎಂದು ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.

ಆಯುರ್ವೇದ, ಯುನಾನಿ, ಹೋಮಿಯೋಪಥಿಯಂತಹ ಪರ್ಯಾಯ ಚಿಕಿತ್ಸಾ ಪದ್ಧತಿಗಳನ್ನು ಸೂಕ್ತ ಶೈಕ್ಷಣಿಕ ತರಬೇತಿಯೊಂದಿಗೆ ಅಭ್ಯಸಿಸುವ ವೈದ್ಯರು ಆಯುಷ್​ ಮಂತ್ರಾಲಯದ ಅಡಿಯಲ್ಲಿ ಬರುತ್ತಾರೆ. ಕರೊನಾ ಉಲ್ಬಣದ ಈ ಪರಿಸ್ಥಿತಿಯಲ್ಲಿ ಆಯುಷ್​​​ ಮಂತ್ರಾಲಯವು ಸುಮಾರು 8.32 ಲಕ್ಷ ಆಯುಷ್​ ವೈದ್ಯಕೀಯ ವೃತ್ತಿಪರರ ವಿವರಗಳನ್ನು ಕೇಂದ್ರ ಸರ್ಕಾರದ ಕೋವಿಡ್​ ವಾರಿಯರ್ಸ್​ ಪೋರ್ಟಲ್​ನಲ್ಲಿ ಒದಗಿಸಿದೆ ಎಂದು ಸಚಿವಾಲಯ ತಿಳಿಸಿದೆ.

ಪರೀಕ್ಷೆ ಮುಂದಕ್ಕೆ : ಕರೊನಾ ಹಿನ್ನೆಲೆಯಲ್ಲಿ ಎನ್​ಟಿಎ ನಡೆಸುವ ಆಲ್​ಇಂಡಿಯಾ ಆಯುಷ್​ ಪಿಜಿ ಎಂಟ್ರೆನ್ಸ್​ ಪರೀಕ್ಷೆಯನ್ನು 2021ರ ಆಗಸ್ಟ್​ 31 ರ ನಂತರ ಆಯೋಜಿಸುವ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸಚಿವಾಲಯ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net