

ಬೆಂಗಳೂರು : ಕರೊನಾ ರೋಗಿಗಳ ಚಿಕಿತ್ಸೆಗೆ ಅಗತ್ಯವಾಗಿರುವ ಆಕ್ಸಿಜನ್ ಸಿಲಿಂಡರ್ಗಳನ್ನು ಹತ್ತು ಪಟ್ಟು ಹಣ ಪಡೆದು ಮಾರುತ್ತಿದ್ದ ಗ್ಯಾಸ್ ಕಂಪೆನಿಯ ಸಿಬ್ಬಂದಿಯನ್ನು ಬೆಂಗಳೂರು ನಗರ ಪೊಲೀಸರು ಬಂಧಿಸಿದ್ದಾರೆ. ಒಂದು 47 ಲೀಟರ್ ಆಕ್ಸಿಜನ್ ಸಿಲಿಂಡರ್ಗೆ ಸರ್ಕಾರ ನಿಗದಿಪಡಿಸಿರುವ ಬೆಲೆ 300 ರೂ.ಗಳಾದರೆ, 3,000 ರೂ.ಗಳಿಗೆ ಮಾರಾಟ ಮಾಡಲಾಗುತ್ತಿತ್ತು ಎನ್ನಲಾಗಿದೆ.
ನಗರದ ಹೊರವಲಯದ ಪೀಣ್ಯ ಇಂಡಸ್ಟ್ರಿಯಲ್ ಏರಿಯಾದಲ್ಲಿರುವ ಸೀಗಾ ಗ್ಯಾಸಸ್ ಪ್ರೈ. ಲಿಮಿಟೆಡ್ ಕಂಪೆನಿಯ ಕಛೇರಿ ಮೇಲೆ ಇಂದು ನಗರ ಅಪರಾಧ ವಿಭಾಗ(ಸಿಸಿಬಿ) ಪೊಲೀಸರು ರೇಡ್ ನಡೆಸಿದರು. ಆಗ ಕಂಪೆನಿಯ ವಿಭಾಗ ಮುಖ್ಯಸ್ಥ ರವಿಕುಮಾರ್(36) ಎಂಬುವ, ಎರಡು ಆಕ್ಸಿಜನ್ ಸಿಲಿಂಡರ್ಗಳನ್ನು 6000 ರೂ.ಗಳಿಗೆ ಮಾರುತ್ತಿದ್ದು, ರೆಡ್ ಹ್ಯಾಂಡೆಡ್ ಆಗಿ ಸಿಕ್ಕಿಬಿದ್ದಿದ್ದಾನೆ.
ಪೀಣ್ಯ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 420, ಡ್ರಗ್ ಪ್ರೈಸ್ ಕಂಟ್ರೋಲ್ ಆರ್ಡರ್ನ ಸೆಕ್ಷನ್ 27 ಮತ್ತು ಇಸಿ ಕಾಯ್ದೆಯ ಸೆಕ್ಷನ್ 3, 7 ರಡಿ ಮೊಕದ್ದಮೆ ದಾಖಲಿಸಲಾಗಿದೆ.