ಸ್ಕೂಲ್​ಬ್ಯಾಗ್​ನಿಂದ ಬಂದೂಕು ಹೊರಗೆಳೆದಳು, ಮೂವರ ಮೇಲೆ ಗುಂಡು ಹಾರಿಸಿದಳು !

policeam
Published on

ಇಡಾಹೋ : ಅಮೆರಿಕದ ಶಾಲೆಯೊಂದರಲ್ಲಿ ಆರನೇ ತರಗತಿ ವಿದ್ಯಾರ್ಥಿನಿಯು ಸ್ಕೂಲ್​ ಬ್ಯಾಗ್​ನಿಂದ ದಿಢೀರನೇ ಬಂದೂಕು ತೆಗೆದು ಶೂಟ್​ಔಟ್​ ನಡೆಸಿದ ಘಟನೆ ನಡೆದಿದೆ. ಇಡಾಹೋ ಪ್ರಾಂತ್ಯದಲ್ಲಿ ನಿನ್ನೆ ನಡೆದ ಈ ಘಟನೆಯಲ್ಲಿ ಎರಡು ವಿದ್ಯಾರ್ಥಿಗಳು ಮತ್ತು ಒಬ್ಬ ಸಿಬ್ಬಂದಿ ಗಾಯಗೊಂಡಿದ್ದಾರೆ ಎಂದು ಸ್ಥಳೀಯ ಪೊಲೀಸರು ತಿಳಿಸಿದ್ದಾರೆ.

ಇಡಾಹೋ ಜಲಪಾತದ ಬಳಿಯಿರುವ ರಿಗ್ಬಿ ಮಿಡಲ್ ಸ್ಕೂಲ್​ನ ಆರನೇ ತರಗತಿಯ ವಿದ್ಯಾರ್ಥಿನಿಯು, ತನ್ನ ಬ್ಯಾಕ್​​ಪ್ಯಾಕ್​ನಿಂದ ಒಂದು ಹ್ಯಾಂಡ್​ಗನ್​ಅನ್ನು ಹೊರತೆಗೆದಳು. ನಂತರ ಶಾಲೆಯ ಒಳಭಾಗದಲ್ಲಿ ಮತ್ತು ಆವರಣದಲ್ಲಿ ಹಲವು ರೌಂಡ್​ ಗುಂಡು ಹಾರಿಸಿದಳು. ಸಾಹಸ ತೋರಿದ ಶಿಕ್ಷಕರೊಬ್ಬರು ಆಕೆಯಿಂದ ಬಂದೂಕು ಕಿತ್ತುಕೊಂಡು ಆಕೆಯನ್ನು ಹಿಡಿದಿಟ್ಟರು. ನಂತರ ಪೊಲೀಸರು ಬಂದು ಆಕೆಯನ್ನು ವಶಕ್ಕೆ ಪಡೆದರು ಎಂದು ಜೆಫರ್​​ಸನ್​ ಕೌಂಟಿ ಶೆರೀಫ್​ ಆದ ಸ್ಟೀವ್ ಆ್ಯಂಡರ್​ಸನ್ ಹೇಳಿದ್ದಾರೆ.

ಈ ಶೂಟ್​ಔಟ್​ನಲ್ಲಿ ಇಬ್ಬರು ವಿದ್ಯಾರ್ಥಿಗಳಿಗೆ ಮತ್ತು ಒಬ್ಬ ಸಿಬ್ಬಂದಿಗೆ ಗುಂಡೇಟು ಬಿದ್ದಿದೆ. ಆದರೆ ಯಾರ ಜೀವಕ್ಕೂ ಅಪಾಯವಾಗಿಲ್ಲ ಎನ್ನಲಾಗಿದೆ. ಘಟನೆಯ ಬಗ್ಗೆ ಸ್ಥಳೀಯ ಪೊಲೀಸರು ಮತ್ತು ಎಫ್​ಬಿಐ ತನಿಖೆ ಆರಂಭಿಸಿದೆ.

ಅಮೆರಿಕದಲ್ಲಿ ಇತ್ತೀಚಿನ ವಾರಗಳಲ್ಲಿ ಹಲವು ಶೂಟಿಂಗ್​ ಪ್ರಸಂಗಗಳು ವರದಿಯಾಗಿವೆ. ಬಂದೂಕಿನ ಹಿಂಸಾಚಾರವನ್ನು ಅಧ್ಯಕ್ಷ ಜೋ ಬಿಡೆನ್​ ಅವರು ಕಳೆದ ತಿಂಗಳು ಸಾಂಕ್ರಾಮಿಕ ಎಂದು ಕರೆದು ಅಂತರರಾಷ್ಟ್ರೀಯ ಮಟ್ಟದಲ್ಲಿ ದೇಶಕ್ಕೆ ಕೆಟ್ಟ ಹೆಸರು ತರುತ್ತಿದೆ ಎಂದು ಹೇಳಿದ್ದರು. ಕಳೆದ ವರ್ಷ ಅಮೆರಿಕದಲ್ಲಿ ಆತ್ಮಹತ್ಯೆಗಳೂ ಸೇರಿದಂತೆ 43,000 ಸಾವುಗಳು ಬಂದೂಕಿನಿಂದ ಉಂಟಾಗಿವೆ ಎನ್ನಲಾಗಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net