

ಬೆಂಗಳೂರು: 2022 ವರ್ಷ ಮುಗಿಯುವುದಕ್ಕೆ ಕೆಲವೇ ದಿನಗಳಿವೆ. ಈ ವರ್ಷ ಕನ್ನಡ ಮತ್ತು ತುಳು ಚಿತ್ರಗಳನ್ನು ಸೇರಿಸಿದರೆ ಈಗಾಗಲೇ 200 ಪ್ಲಸ್ ಚಿತ್ರಗಳು ಬಿಡುಗಡೆಯಾಗಿವೆ. ಮುಂದಿನ ಇನ್ನೆರೆಡು ಶುಕ್ರವಾರಗಳಲ್ಲಿ ಏಳೆಂಟು ಸಿನಿಮಾಗಳು ಬಿಡುಗಡೆಯಾಗಲಿಕ್ಕಿವೆ. ಒಟ್ಟಾರೆ, ಈ ವರ್ಷ ಸಂಖ್ಯೆ 210 ಮುಟ್ಟಿದರೆ ಆಶ್ಚರ್ಯವಿಲ್ಲ.
ಈ ವರ್ಷ ಬಿಡುಗಡೆಯಾದ ಚಿತ್ರಗಳ ಮೇಲೆ 600 ಕೋಟಿ ರೂ.ಗಳಿಗೂ ಹೆಚ್ಚು ಹಣ ಹೂಡಿಕೆಯಾಗಿದೆ. ಈ ಪೈಕಿ ಅತೀ ಹೆಚ್ಚು ಗಳಿಕೆ ಮಾಡಿದ ಚಿತ್ರ ಯಾವುದು ಎಂಬ ಪ್ರಶ್ನೆ ಸಹಜವೇ. 88 ವರ್ಷಗಳ ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಅತೀ ಹೆಚ್ಚು ಗಳಿಕೆ ಮಾಡಿದ ಚಿತ್ರ ಬಿಡುಗಡೆಯಾಗಿದ್ದು 2022ರಲ್ಲಿ. ವಿಶೇಷವೆಂದರೆ, ಆ ದಾಖಲೆ ಇದೇ ವರ್ಷ ಪುಡಿಪುಡಿಯಾಗಿದೆ. ಈಗಿರುವ ದಾಖಲೆಯನ್ನು ಯಾವ ಚಿತ್ರ ಯಾವ ವರ್ಷ ಮುರಿಯುತ್ತದೋ ಎಂಬುದು ಗೊತ್ತಿಲ್ಲ. ಎಲ್ಲಕ್ಕಿಂತ ಮಹತ್ವದ ವಿಷಯವೆಂದರೆ, ಈ ಐದೂ ಚಿತ್ರಗಳು ಪ್ಯಾನ್ ಇಂಡಿಯಾ ಚಿತ್ರಗಳು.
ಈ ವರ್ಷ ಬಿಡುಗಡೆಯಾದ 200 ಪ್ಲಸ್ ಚಿತ್ರಗಳ ಪೈಕಿ ಅತೀ ಹೆಚ್ಚು ಕಲೆಕ್ಷನ್ ಮಾಡಿದ ಚಿತ್ರವೆಂದರೆ ಅದು ರಿಷಭ್ ಶೆಟ್ಟಿ ನಿರ್ದೇಶನದ 'ಕಾಂತಾರ'. ಈ ಚಿತ್ರವು ಕರ್ನಾಟಕದಲ್ಲೇ 172 ಕೋಟಿ ರೂ. ಗಳಿಕೆ ಮಾಡಿ ಮೊದಲ ಸ್ಥಾನದಲ್ಲಿದೆ. ಇದು ಬರೀ ಕನ್ನಡ ಅವತರಣಿಕೆಯ ಲೆಕ್ಕವಷ್ಟೇ. ಬೇರೆ ಭಾಷೆಗಳ ಲೆಕ್ಕ ತೆಗೆದುಕೊಂಡರೆ, ಆ ಮೊತ್ತ 400 ಕೋಟಿ ಮೀರುತ್ತದೆ.
'ಕಾಂತಾರ' ನಂತರ ಅತೀ ಹೆಚ್ಚು ಕಲೆಕ್ಷನ್ ಮಾಡಿದ ಚಿತ್ರ ಎಂದರೆ ಅದು ಯಶ್ ಅಭಿನಯದ 'ಕೆಜಿಎಫ್ 2'. ಈ ಚಿತ್ರವು ಐದು ಭಾಷೆಗಳಲ್ಲಿ ಜಾಗತಿಕವಾಗಿ 1000 ಕೋಟಿ ರೂ.ಗಳಿಗೂ ಹೆಚ್ಚು ಕೆಲಕ್ಷನ್ ಮಾಡಿದೆ. ಈ ಪೈಕಿ ಕನ್ನಡ ಅವತರಣಿಕೆಯೊಂದೇ 162 ಕೋಟಿ ರೂ. ಕಲೆಕ್ಷನ್ ಮಾಡಿದೆ ಎಂದು ಹೇಳಲಾಗುತ್ತಿದೆ. ಈ ಬಾರಿ ಅತೀ ಹೆಚ್ಚು ಗಳಿಕೆ ಮಾಡಿದ 'ಕಾಂತಾರ' ಮತ್ತು ನಂತರದ ಸ್ಥಾನದಲ್ಲಿರುವ 'ಕೆಜಿಎಫ್ 2', ಈ ಎರಡೂ ಚಿತ್ರಗಳನ್ನು ನಿರ್ಮಿಸಿರುವು ಹೊಂಬಾಳೆ ಫಿಲಂಸ್ ಸಂಸ್ಥೆ.
ಅತೀ ಹೆಚ್ಚು ಗಳಿಕೆ ಮಾಡಿದ ಚಿತ್ರಗಳ ಪಟ್ಟಿಯಲ್ಲಿ ಮೂರನೆಯ ಸ್ಥಾನದಲ್ಲಿ ರಕ್ಷಿತ್ ಶೆಟ್ಟಿ ಅಭಿನಯದ '777 ಚಾರ್ಲಿ' ಚಿತ್ರವಿದೆ, ಈ ಚಿತ್ರವು 77 ಕೋಟಿ ರೂ.ಗಳಷ್ಟು ಕಲೆಕ್ಷನ್ ಮಾಡಿದೆಯಂತೆ. ಪುನೀತ್ ರಾಜಕುಮಾರ್ ಅಭಿನಯದ 'ಜೇಮ್ಸ್' ಮತ್ತು ಸುದೀಪ್ ಅಭಿನಯದ 'ವಿಕ್ರಾಂತ್ ರೋಣ' ಚಿತ್ರಗಳು ನಾಲ್ಕು ಮತ್ತು ಐದನೇ ಸ್ಥಾನಗಳಲ್ಲಿವೆ. ಈ ಚಿತ್ರಗಳು ಕ್ರಮವಾಗಿ 75.49 ಕೋಟಿ ರೂ. ಮತ್ತು 67.68 ಕೋಟಿ ರೂ.ಗಳನ್ನು ಸಂಗ್ರಹಿಸಿದೆ ಎಂದು ಹೇಳಲಾಗುತ್ತಿದೆ.
ಇದು ಈ ಚಿತ್ರಗಳ ಗ್ರಾಸ್ ಗಳಿಕೆ. ಇದರಲ್ಲಿ ಚಿತ್ರಮಂದಿರದ ಬಾಡಿಗೆ, ಟ್ಯಾಕ್ಸ್ಗಳು ಇವೆಲ್ಲ ಕಡಿತವಾಗಿ ಮೊತ್ತ ಇನ್ನಷ್ಟು ಕಡಿಮೆಯಾಗುತ್ತದೆ. ಆದರೆ, ಒಟ್ಟಾರೆ ಈ ಚಿತ್ರಗಳು ಇಷ್ಟು ಗಳಿಕೆ ಮಾಡಿವೆ ಎಂದು ಬಾಕ್ಸ್ ಆಫೀಸ್ ಪಂಡಿತರು ಅಭಿಪ್ರಾಯ ಪಡುತ್ತಾರೆ.