'ಟೈಟಾನಿಕ್​' ಚಿತ್ರದಲ್ಲಿ ನಾಯಕ ಸಾಯುವುದೇಕೆ? ಪ್ರಯೋಗದ ಮೂಲಕ ಸಾಬೀತು ಮಾಡಲು ಹೊರಟ ಕ್ಯಾಮರಾನ್​

Titanic
Published on

ಟೊರಾಂಟೊ: 25 ವರ್ಷಗಳ ಹಿಂದೆಯೇ ಹಲವರು ತಗಾದೆ ತೆಗೆದಿದ್ದರು. 'ಟೈಟಾನಿಕ್​' ಚಿತ್ರದಲ ಕ್ಲೈಮ್ಯಾಕ್ಸ್​ ಸರಿ ಇಲ್ಲ, ನಾಯಕನನ್ನು ಸಾಯಿಸಿದ್ದು ಸರಿಯಾಗಲಿಲ್ಲ, ನಾಯಕ-ನಾಯಕಿ ಇಬ್ಬರನ್ನೂ ಬದುಕಿಸಬೇಕಿತ್ತು ಎಂಬ ಅಭಿಪ್ರಾಯವನ್ನು ಹಲವರು ವ್ಯಕ್ತಪಡಿಸಿದ್ದರು. ಅದಕ್ಕೆ ಸರಿಯಾಗಿ, ನಾಯಕ-ನಾಯಕಿ ಇಬ್ಬರೂ ಬದುಕುವುದು ಸಾಧ್ಯವೇ ಇರಲಿಲ್ಲ ಎಂದು ನಿರ್ದೇಶಕ ಜೇಮ್ಸ್​ ಕ್ಯಾಮರನ್​ ವಾದಿಸಿದ್ದರು. ಈಗ ಈ ವಿಷಯವನ್ನು ವೈಜ್ನಾನಿಕವಾಗಿ ಅವರು ಪ್ರೂವ್​ ಮಾಡಿದ್ದಾರಂತೆ.

ಚಿತ್ರದ ಕ್ಲೈಮ್ಯಾಕ್ಸ್​ನಲ್ಲಿ ಸಮುದ್ರದಲ್ಲಿ ಮುಳುಗುತ್ತಿರುವ ನಾಯಕ-ನಾಯಕಿಗೆ ಒಂದು ಸಣ್ಣ ಮರದ ಬಾಗಿಲು ಸಿಗುತ್ತದೆ. ಅದರ ಮೇಲೆ ನಾಯಕಿಯನ್ನು ಕೂರಿಸುವ ನಾಯಕ, ನೀರನಲ್ಲೇ ಉಳಿಯುತ್ತಾರೆ. ಆ ಕೊರೆಯುವ ಚಳಿಗೆ ಹಿಮಗಟ್ಟಿ ಸಾಯುತ್ತಾನೆ. ಒಂದು ಪಕ್ಷ, ನಾಯಕನಿಗೂ ನಾಯಕಿ ಬಾಗಿಲ ಮೇಲೆ ಒಂದಿಷ್ಟು ಸ್ಥಳ ಕೊಟ್ಟಿದ್ದರೆ, ಅವನು ಬದುಕಬಹುದಿತ್ತು ಎಂಬ ವಾದ ಕೇಳಿ ಬಂದಿತ್ತು. ಸ್ವಲ್ಪ ವೈಜ್ನಾನಿಕವಾಗಿ ಯೋಚಿಸಬಹುದಿತ್ತು ಎಂದು ಹೇಳಲಾಗಿತ್ತು.

ಆದರೆ, ಇದೊಂದು ರೋಮಿಯೋ-ಜ್ಯೂಲಿಯಟ್​ ಮಾದರಿಯ ಕಥೆಯಾದ್ದರಿಂದ, ಇಲ್ಲಿ ಪ್ರೀತಿಯ ಜತೆಗೆ ತ್ಯಾಗವು ಸಹ ಪ್ರಮುಖ ಪಾತ್ರ ವಹಿಸುತ್ತದೆ ಎಂದು ನಿರ್ದೇಶಕರು ವಾದಿಸಿದ್ದರು. ಇಲ್ಲಿ ಅವರಿಬ್ಬರ ಪ್ರೀತಿ ಎಂಥದ್ದು ಎಂಬುದನ್ನು ತ್ಯಾಗ ನಿರೂಪಿಸುತ್ತದೆ, ಇದೊಂದು ಸೃಜನಶೀಲ ಕಲ್ಪನೆಯೇ ಹೊರತು, ಇಲ್ಲಿ ಫಿಸಿಕ್ಸ್​ಗೆ ಜಾಗವಿಲ್ಲ ಎಂದು ನಿರ್ದೇಶಕ ಕ್ಯಾಮರಾನ್​ ಹೇಳಿದ್ದರು. ಈಗ ಅವರು ತಮ್ಮ ವಾದಕ್ಕೆ ವೈಜ್ನಾನಿಕವಾದ ಪುರಾವೆಗಳನ್ನು ಒದಗಿಸಿದ್ದಾರೆ.

ಹೌದು, ಈ ನಿಟ್ಟಿನಲ್ಲಿ ಕ್ಯಾಮರಾನ್​ ಒಂದು ಸಂಶೋಧನೆ ಮಾಡಿದ್ದಾರೆ. ಅಂತಹ ವಾತಾವರಣದಲ್ಲಿ ಇಬ್ಬರು ಆ ರಾತ್ರಿ ಬದುಕುವುದಕ್ಕೆ ಸಾಧ್ಯವೇ ಇಲ್ಲ ಎಂದು ಅವರು ಪ್ರೂವ್​ ಮಾಡಿದ್ದಾರೆ. 'ಈ ಬಗ್ಗೆ ತಕರಾರು ಕೇಳಿ ಬಂದ ಹಿನ್ನೆಲೆಯಲ್ಲಿ ನಾವು ಒಂದು ಪ್ರಯೋಗ ಮಾಡಿದ್ದೇವೆ. ಇಡೀ ಸನ್ನಿವೇಶವನ್ನು ಮರುಸೃಷ್ಟಿ ಮಾಡಿದ್ದೇವೆ. ಅದರಲ್ಲಿ ಇಬ್ಬರಲ್ಲಿ ಒಬ್ಬರು ಮಾತ್ರ ಬದುಕುವುದಕ್ಕೆ ಸಾಧ್ಯವಿತ್ತು ಎಂದು ಪ್ರೂವ್​ ಮಾಡಿದ್ದೇವೆ' ಎನ್ನುತ್ತಾರೆ.

ಆದರೆ, ಅವರು ಈ ವಿಷಯವನ್ನು ಈಗಲೇ ಬಹಿರಂಗ ಮಾಡುವುದಿಲ್ಲ. ಮುಂದಿನ ಫೆಬ್ರವರಿಯಲ್ಲಿ ಅವರು ತಮ್ಮ ಸಂಶೋಧನೆಯ ಪೂರ ಸಾರವನ್ನು ತಿಳಿಸಲಿದ್ದಾರಂತೆ. ಫೆಬ್ರವರಿಯಲ್ಲೇ ಹಾಗೆ ಮಾಡುವುದಕ್ಕೆ ಕಾರಣವೂ ಇದೆ. 2023ರ ಪ್ರೇಮಿಗಳ ದಿನದಂದು ಅವರು 'ಟೈಟಾನಿಕ್​' ಚಿತ್ರವನ್ನು 4ಕೆ ರೆಸಲ್ಯೂಷನ್​ನಲ್ಲಿ ಪುನಃ ಬಿಡುಗಡೆ ಮಾಡುತ್ತಿದ್ದಾರೆ. ಈ ಸಂದರ್ಭದಲ್ಲಿ ಜಾಕ್​ ಯಾಕೆ ಬದುಕುವುದಕ್ಕೆ ಸಾಧ್ಯವಾಗಲಿಲ್ಲ ಎಂದು ಅವರು ವೈಜ್ನಾನಿಕವಾಗಿ ತಿಳಿಸಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net