ಧನಂಜಯ್​ ಯಾಕೆ ಅಷ್ಟೊಂದು ಸಿನಿಮಾಗಳನ್ನು ಮಾಡ್ತಾರೆ? ಅವರೇ ಉತ್ತರ ಹೇಳ್ತಾರೆ ಕೇಳಿ …

Dhananjay 5
Published on

ಬೆಂಗಳೂರು: ಧನಂಜಯ್​ ಅಭಿನಯದ 'Once Upon A Time In ಜಮಾಲಿಗುಡ್ಡ' ಚಿತ್ರವು ಇದೇ ಡಿ. 30ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಈ ವರ್ಷ ಬಿಡುಗಡೆಯಾಗುತ್ತಿರುವ ಆರನೇ ಚಿತ್ರ ಅವರದ್ದು. 'ತೋತಾಪುರಿ' ಚಿತ್ರದ ಅತಿಥಿ ಪಾತ್ರ ಹೊರತುಪಡಿಸಿದರೆ, ಮಿಕ್ಕಂತೆ ಐದು ಚಿತ್ರಗಳಲ್ಲಿ ಪೂರ್ಣಪ್ರಮಾಣದ ಹೀರೋ ಆಗಿ ಅವರು ಕಾಣಿಸಿಕೊಂಡಿದ್ದಾರೆ. ಬೇರೆ ಹೀರೋಗಳು ವರ್ಷಕ್ಕೋ, ಎರಡು ವರ್ಷಕ್ಕೋ ಒಂದು ಚಿತ್ರದಲ್ಲಿ ನಟಿಸುವಾಗ, ಧನಂಜಯ್​ ಮಾತ್ರ ಯಾಕೆ ಅಷ್ಟೊಂದು ಚಿತ್ರಗಳಲ್ಲಿ ನಟಿಸುತ್ತಾರೆ ಎಂಬ ಪ್ರಶ್ನೆ ಸಹಜ. ಈ ಪ್ರಶ್ನೆಯನ್ನು ಅವರಿಗೂ ಹಲವರು ಕೇಳಿದ್ದಾರಂತೆ. ಈ ಪ್ರಶ್ನೆಗೆ ಅವರು ಇದೀಗ ಉತ್ತರ ಕೊಟ್ಟಿದ್ದಾರೆ.

'ಯಾಕೆ ಅಷ್ಟೊಂದು ಸಿನಿಮಾ ಮಾಡುತ್ತೀಯ ಎಂದು ಎಲ್ಲರೂ ಕೇಳುತ್ತಾರೆ. ನನಗೆ ಎಲ್ಲ ಸಿನಿಮಾ ಒಂದೇ ಬಿಜಿನೆಸ್​ ಮಾಡೋಕೆ ಆಗಲ್ಲ. ಒಂದೊಂದು ಒಂದೊಂದು ರೀತಿಯ. ಎಲ್ಲ ಸಿನಿಮಾಗಳು ದೊಡ್ಡ ಹಿಟ್​ ಎಂದು ಹೇಳುವುದು ಕಷ್ಟ. ನಿರ್ಮಾಪಕರು ಸೇಫ್​ ಆಗಿರುವುದು ಬಹಳ ಮುಖ್ಯ. ಈ ವರ್ಷ ರಿಲೀಸ್​ ಆಗಿರುವ ನನ್ನ ಎಲ್ಲ ಸಿನಿಮಾಗಳ ನಿರ್ಮಾಪಕರು ಸಹ ಸೇಫ್​ ಆಗಿದ್ದಾರೆ. ಅದು ಖುಷಿ. ಒಬ್ಬರು ಒಂದು ರೂಪಾಯಿ ಲಾಭ ಮಾಡಿದರೆ, ಇನ್ನೊಬ್ಬರು ಎರಡು ರೂಪಾಯಿ ಮಾಡಿದ್ದಾರೆ. ಆ ಮಟ್ಟಿಗೆ ಸೇಫ್​ ಎನ್ನುತ್ತಾರೆ ಧನಂಜಯ್​.

ಈ ಕುರಿತು ಮತ್ತಷ್ಟು ವಿವರಣೆ ನೀಡುವ ಅವರು, 'ಆರು ಸಿನಿಮಾ ಮಾಡಿದ್ದೀನಿ ಎಂದರೆ, ನಾನು ಸಹ ಕೆಲಸ ಮಾಡಬೇಕು. ಒಳ್ಳೆಯ ತಂಡಗಳು ಮತ್ತು ಕಥೆಗಳು ಬಂದಾಗ ಇಲ್ಲ ಎನ್ನುವುದಕ್ಕೆ ಆಗುವುದಿಲ್ಲ. ನಾನು ಸಹ ನಿರ್ಮಾಣ ಮಾಡಬೇಕು. ಇಲ್ಲೇ ದುಡಿದು, ಇಲ್ಲೇ ಹಾಕಬೇಕು. ಹೆಚ್ಚು ಸಿನಿಮಾಗಳನ್ನು ಮಾಡುವುದು ಸರಿಯೂ ಹೌದು. ಒಂದೊಂದು ಸಿನಿಮಾ ಹೊರಬಂದಾಗಲೂ ಒಂದಿಷ್ಟು ಜನರಿಗೆ ಕೆಲಸ ಸಿಗುತ್ತದೆ. ಹೊಸಬರು ಚಿತ್ರರಂಗಕ್ಕೆ ಬರುತ್ತಾರೆ. ಈ ಚಿತ್ರದ ನಿರ್ದೇಶಕರು, ಛಾಯಾಗ್ರಾಹಕರು ಎಲ್ಲರೂ ಹೊಸಬರು. ಇದರಿಂದ ಚಿತ್ರರಂಗಕ್ಕೆ ಬಹಳ ಅನುಕೂಲವಾಗುತ್ತದೆ. ನಿರ್ಮಾಪಕರಿಗೆ ಲಾಭ ಬಂದರೆ ಅವರು ಇನ್ನಷ್ಟು ಚಿತ್ರಗಳನ್ನು ಮಾಡುತ್ತಾರೆ. ಹಾಗಾಗಿ, ಹೆಚ್ಚೆಚ್ಚು ಸಿನಿಮಾ ಮಾಡುತ್ತಿರುವ ಬಗ್ಗೆ ಖುಷಿ ಇದೆ, ಹೆಮ್ಮೆ ಇದೆ' ಎನ್ನುತ್ತಾರೆ.

'Once Upon A Time In ಜಮಾಲಿಗುಡ್ಡ' ಬಗ್ಗೆ ಮಾತನಾಡುವ ಅವರು, 'ಕಳೆದ ವರ್ಷ ಇದೇ ಸಮಯದಲ್ಲಿ ಬಡವ ರಾಸ್ಕಲ್​ ಚಿತ್ರ ಬಿಡುಗಡೆಯಾಗಿತ್ತು. ಈಗ ಈ ಚಿತ್ರ ಬಿಡುಗಡೆಯಾಗುತ್ತಿದೆ. ಇದೊಂದು ಫ್ಯಾಮಿಲಿ ಎಂಟರ್​ಟೈನರ್​. ಚಿತ್ರಮಂದಿರಕ್ಕೆ ಕುಟುಂಬ ಸಮೇತ ಬಂದು ಚಿತ್ರ ನೋಡಿ' ಎನ್ನುತ್ತಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net