

ಬೆಂಗಳೂರು: ಹಳೆಯ ವಾಹನಗಳಿಗೆ ಹೈ ಸೆಕ್ಯೂರಿಟಿ ನಂಬರ್ ಪ್ಲೇಟ್‌ಗಳನ್ನು ನವೆಂಬರ್ 17ರ ಒಳಗಾಗಿ ಕಡ್ಡಾಯವಾಗಿ ಅಳವಡಿಸಬೇಕೆಂದು ರಾಜ್ಯ ಸಾರಿಗೆ ಇಲಾಖೆ ಆದೇಶ ಹೊರಡಿಸಿದೆ.
2019ರ ಏಪ್ರಿಲ್ 1ಕ್ಕಿಂತ ಮುಂಚಿತವಾಗಿ ನೋಂದಣಿಯಾದ ವಾಹನಗಳಿಗೆ ಹೈ ಸೆಕ್ಯೂರಿಟಿ ನಂಬರ್ ಪ್ಲೇಟ್ ಕಡ್ಡಾಯವಾಗಿದೆ. ಶಾಶ್ವತ ಗುರುತಿನ ಸಂಖ್ಯೆ, ಹಾಲೋಗ್ರಾಮ್ ಸೇರಿದಂತೆ ಹಲವು ಹೊಸ ವೈಶಿಷ್ಟ್ಯಗೊಂದಿಗೆ ಈ ನಂಬರ್ ಪ್ಲೇಟ್ ಸಿದ್ದಪಡಿಸಲಾಗಿದ್ದು, ಟ್ಯಾಂಪರ್‌ಗೆ ಸಾಧ್ಯವಿಲ್ಲ.
ಈ ಹಿನ್ನೆಲೆಯಲ್ಲಿ ನಿಗದಿತ ದಿನಾಂಕದಲ್ಲಿ ಅಳವಡಿಸಿಕೊಳ್ಳದಿದ್ದರೇ ದಂಡ ಪಾವತಿ ಮಾಡಬೇಕಾಗುತ್ತದೆ ಎಂದು ಸಾರಿಗೆ ಅಧಿಕಾರಿಗಳು ತಿಳಿಸಿದ್ದಾರೆ.
ಹೊಸ ನಂಬರ್ ಪ್ಲೇಟ್ ಅಳವಡಿಸಲು ವಿಫಲರಾದಲ್ಲಿ ಅಂತಹವರಿಗೆ ದಂಡ ವಿಧಿಸಲಾಗುತ್ತದೆ. 500 ರಿಂದ 1,000 ರೂ. ದಂಡ ವಿಧಿಸಲಾಗುತ್ತದೆ. 2019ರ ಏಪ್ರಿಲ್ 1ಕ್ಕೂ ಮುನ್ನ 2 ಕೋಟಿ ವಾಹನಗಳು ನೋಂದಣಿಯಾಗಿವೆ. ವಾಹನ ತಯಾರಕರು ಈ ಪ್ಲೇಟ್‌ಗಳನ್ನು ವಿತರಕರಿಗೆ ಪೂರೈಸಲು ಅಧಿಕೃತ ತಯಾರಕರೊಂದಿಗೆ ಒಪ್ಪಂದ ಮಾಡಿಕೊಂಡಿದ್ದಾರೆ.
ಹಳೆಯ ವಾಹನಗಳಿಗೂ ತಯಾರಕರು ಪ್ಲೇಟ್‌ಗಳನ್ನು ಪೂರೈಸುವುದಾಗಿ ಒಪ್ಪಿಕೊಂಡಿದ್ದಾರೆ. ಹಳೆಯ ವಾಹನಗಳ ಮಾಲೀಕರು ಅಧಿಕೃತ ಡೀಲರ್‌ಗಳ ಮೂಲಕ ನಂಬರ್ ಪ್ಲೇಟ್ ಪಡೆಯಬೇಕಾಗಿದೆ. 4 ಚಕ್ರದ ವಾಹನಗಳಿಗೆ 400-500 ರೂ. ದರ ನಿಗದಿ ಮಾಡಲಾಗಿದ್ದು, ದ್ವಿಚಕ್ರ ವಾಹನಗಳಿಗೆ 250-300 ರೂ. ಇರಲಿದೆ. ಈಗಾಗಲೇ ಕೇಂದ್ರ ಸರ್ಕಾರದ ಮಾರ್ಗಸೂಚಿಗಳನ್ನು 12 ರಾಜ್ಯಗಳಲ್ಲಿ ಅನುಷ್ಠಾನಕ್ಕೆ ತರಲಾಗಿದೆ ಎಂದು ಸಾರಿಗೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.