

FIR: ಕರ್ನಲ್ ಸೋಫಿಯಾ ಖುರೇಷಿ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದಕ್ಕಾಗಿ ಬಿಜೆಪಿ ಸಚಿವ ಕುನ್ವರ್ ವಿಜಯ್ ಶಾ ವಿರುದ್ಧ ಮಧ್ಯಪ್ರದೇಶ ಹೈಕೋರ್ಟ್ ಬುಧವಾರ ಎಫ್‌ಐಆರ್ ದಾಖಲಿಸಲು ಆದೇಶಿಸಿದೆ.
ಇಂದು ಸಂಜೆಯೊಳಗೆ ಕ್ರಮಕೈಗೊಳ್ಳುವಂತೆ ಪೊಲೀಸ್ ಮಹಾನಿರ್ದೇಶಕರಿಗೆ ನ್ಯಾಯಾಲಯ ಸೂಚಿಸಿದ್ದು, ಒಂದು ವೇಳೆ ಕ್ರಮಕೈಗೊಳ್ಳುವಲ್ಲಿ ವಿಫಲವಾದ್ರೆ ನ್ಯಾಯಾಂಗ ನಿಂದನೆ ಕಾಯ್ದೆಯಡಿಯಲ್ಲಿ ಕ್ರಮ ಜರುಗಿಸಲಾಗುವುದು ಎಂದು ಕೋರ್ಟ್ ಎಚ್ಚರಿಕೆ ನೀಡಿದೆ.
ನ್ಯಾಯಾಲಯದ ಆದೇಶವು ಕೇವಲ ಪತ್ರಿಕಾ ವರದಿಗಳನ್ನು ಆಧರಿಸಿದೆ ಎಂದು ಸಚಿವರ ಪರ ವಕೀಲರು ವಾದಿಸಿದರು. ಇದಕ್ಕೆ ಪ್ರತಿಕ್ರಿಯೆಯಾಗಿ, ನ್ಯಾಯಾಲಯವು ಈಗ ಅಧಿಕೃತ ದಾಖಲೆಯಲ್ಲಿ ವೀಡಿಯೊ ಲಿಂಕ್‌ಗಳನ್ನು ಸೇರಿಸುವುದಾಗಿ ಹೇಳಿದೆ.
ಅಡ್ವೊಕೇಟ್ ಜನರಲ್ ಹೆಚ್ಚಿನ ಸಮಯ ಕೋರಿದಾಗ, ನ್ಯಾಯಮೂರ್ತಿ ಅತುಲ್ ಶ್ರೀಧರನ್, "ನಾನು ನಾಳೆ ಜೀವಂತವಾಗಿರದಿರಬಹುದು" ಎಂದು ಹೇಳಿದ್ದು, ಈ ವಿಷಯದ ತುರ್ತುಸ್ಥಿತಿಯನ್ನು ಒತ್ತಿಹೇಳುತ್ತದೆ.
ಪ್ರಮುಖ ಸೇನಾ ಪ್ರದೇಶವಾದ ಮೋವ್ ಬಳಿಯ ಮನ್ಸುರ್ ಪಟ್ಟಣದಲ್ಲಿ ನಡೆದ ಸರ್ಕಾರಿ ಸಮಾರಂಭದಲ್ಲಿ ಮಾತನಾಡಿದ ವಿಜಯ್ ಷಾ, ಆಪರೇಷನ್ ಸಿಂಧೂರ ಬಗ್ಗೆ ಪ್ರಸ್ತಾಪಿಸಿ, ಏಪ್ರಿಲ್ 22ರಂದು ಕಾಶ್ಮೀರದ ಪಹಲ್ಲಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಗೆ ಪ್ರತೀಕಾರವಾಗಿ ಪ್ರಧಾನಿ ಮೋದಿ, ಅದೇ ಸಮುದಾಯದ ಸಹೋದರಿಯನ್ನು ಕಳುಹಿಸಿದ್ದಾರೆ ಎಂದು ಹೇಳಿದರು.
ಮೋದಿ ಜಿ ಸಮಾಜಕ್ಕಾಗಿ ಶ್ರಮಿಸುತ್ತಿದ್ದಾರೆ. ಪಹಲ್ಲಾಮ್‌ನಲ್ಲಿ ನಮ್ಮ ಹೆಣ್ಣುಮಕ್ಕಳನ್ನು ವಿಧವೆಯರನ್ನಾಗಿ ಮಾಡಿದವರಿಗೆ, ಪಾಠ ಕಲಿಸಲು ನಾವು ಅವರ ಸ್ವಂತ ಸಹೋದರಿಯನ್ನೇ ಕಳುಹಿಸಿದ್ದೇವೆ ಎಂದು ಷಾ ಹೇಳಿದರು. ಈ ವೇಳೆ ಅಲ್ಲಿದ್ದ ಪ್ರೇಕ್ಷಕರು ಚಪ್ಪಾಳೆಯ ಸುರಿಮಳೆಗೈದರು.
ಪಹಲ್ಲಾಮ್‌ನಲ್ಲಿ ಭಯೋತ್ಪಾದಕರು ಪ್ರವಾಸಿಗರ ಧರ್ಮವನ್ನು ಗುರುತಿಸಿ, ಗುಂಡು ಹಾರಿಸಲು ದೈಹಿಕ ತಪಾಸಣೆ ನಡೆಸಿದ್ದನ್ನು ಪ್ರಸ್ತಾಪಿಸಿದ ಷಾ, ಈಗ, ಮೋದಿಜಿ ಕೂಡ ಹಾಗೆ ಮಾಡಲು ಸಾಧ್ಯವಿಲ್ಲ. ಆದ್ದರಿಂದ ಅವರು ತಮ್ಮ ಸಮಾಜದ ಒಬ್ಬ ಸಹೋದರಿಯನ್ನು ಕಳುಹಿಸಿದರು. ನೀವು ನಮ್ಮ ಸಹೋದರಿಯರನ್ನು ವಿಧವೆಯರನ್ನಾಗಿ ಮಾಡಿದರೆ, ನಿಮ್ಮ ಸಹೋದರಿ ಬಂದು ನಿಮ್ಮ ಬಟ್ಟೆ ಬಿಚ್ಚುತ್ತಾರೆ. ಮತ್ತು ಮೋದಿ ಭಾರತವು ಅವರ ಸ್ವಂತ ಮನೆಯಲ್ಲೇ ಅವರನ್ನು ಹೊಡೆದು ಹಾಕುತ್ತದೆ ಎಂದು ಷಾ ಹೇಳಿದ್ದರು.(ಏಜೆನ್ಸೀಸ್)