

ಚಂಡೀಗಡ : ಸರ್ಕಾರಿ ನೌಕರಿಯಲ್ಲಿರುವ ಮಹಿಳೆಯರಿಗೆ ಮೆಟರ್ನಿಟಿ ಲೀವ್ನ ಸೌಲಭ್ಯ ಎರಡು ಮಕ್ಕಳವರೆಗೆ ಮಾತ್ರ ಸಿಗಬಹುದು ಎಂದು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ತೀರ್ಪು ನೀಡಿದೆ. ಎರಡು ಮಕ್ಕಳ ತಂದೆಯನ್ನು ಮದುವೆಯಾಗಿದ್ದ ಸರ್ಕಾರಿ ನರ್ಸ್ ತನ್ನದೇ ಮಗುವಿಗೆ ಜನ್ಮ ನೀಡಿದ ಸಂದರ್ಭದ ರಜೆಗೆ ಈ ಸೌಲಭ್ಯ ನೀಡಬೇಕೆಂದು ಸಲ್ಲಿಸಿದ್ದ ಅಹವಾಲನ್ನು ಕೋರ್ಟ್ ತಿರಸ್ಕರಿಸಿದೆ.
ಚಂಡೀಗಡದ ಪೋಸ್ಟ್ ಗ್ರಾಜುಯೇಟ್ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಎಡುಕೇಷನ್ ಅಂಡ್ ರಿಸರ್ಚ್(ಪಿಜಿಐಎಂಇಆರ್)ನಲ್ಲಿ ನರ್ಸಿಂಗ್ ಅಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ಮಹಿಳೆಯೊಬ್ಬರು ಎರಡು ಮಕ್ಕಳ ತಂದೆಯನ್ನು ವಿವಾಹವಾಗಿದ್ದರು. 2019 ರಲ್ಲಿ ಅವರು ಗರ್ಭಿಣಿಯಾಗಿ ಮತ್ತೊಂದು ಮಗುವಿಗೆ ಜನ್ಮ ನೀಡಿದರು. ಈ ಸಮಯದಲ್ಲಿ ಹೆರಿಗೆ ಮತ್ತು ಶುಶ್ರೂಷೆಗಾಗಿ ಜೂನ್ ತಿಂಗಳಿಂದ ಸೆಪ್ಟೆಂಬರ್ವರೆಗೆ ತೆಗೆದುಕೊಂಡ ರಜೆಯನ್ನು ಮೆಟರ್ನಿಟಿ ಲೀವ್ ಆಗಿ ನೀಡಬೇಕೆಂದು ಕೋರಿದ್ದರು.
ಆದರೆ ಸಂಸ್ಥೆಯು ಈ ಅರ್ಜಿಯನ್ನು ತಿರಸ್ಕರಿಸಿ ಅದನ್ನು ಸಂಬಳವಿಲ್ಲದ ರಜೆಯಾಗಿ ಪರಿವರ್ತಿಸಿತ್ತು. 1972 ರ ಸೆಂಟ್ರಲ್ ಸಿವಿಲ್ ಸರ್ವೀಸಸ್ (ಲೀವ್) ನಿಯಮಗಳಡಿಯಲ್ಲಿ ಆಗಲೇ ಎರಡು ಜೀವಂತ ಮಕ್ಕಳನ್ನು ಹೊಂದಿರುವ ಮಹಿಳೆ ಮೆಟರ್ನಿಟಿ ರಜೆಗೆ ಅರ್ಹಳಲ್ಲ ಎಂದಿತ್ತು. ಈ ಆದೇಶವನ್ನು ಸಿಎಟಿ ಕೂಡ ಎತ್ತಿಹಿಡಿದಿದ್ದು, ಸದರಿ ತೀರ್ಪನ್ನು ಪ್ರಶ್ನಿಸಿ ಮಹಿಳೆ ಹೈಕೋರ್ಟ್ ಮೆಟ್ಟಿಲೇರಿದ್ದಳು.
ಅಪೀಲಿನಲ್ಲಿ ತನಗೇ ಹುಟ್ಟಿದ ಮೊದಲನೇ ಮಗುವಿಗೆ ಮೆಟರ್ನಿಟಿ ಲೀವ್ ಸೌಲಭ್ಯ ನಿರಾಕರಿಸಿರುವುದು ತಪ್ಪು. ಇದು ತನ್ನ ಕಾನೂನುಬದ್ಧ ಹಕ್ಕು ಎಂದು ನರ್ಸಿಂಗ್ ಅಧಿಕಾರಿ ವಾದಿಸಿದ್ದರು. ಮತ್ತೊಂದೆಡೆ ಪಿಜಿಐಎಂಇಆರ್, 'ಅಧಿಕೃತ ದಾಖಲೆಯಲ್ಲಿ ಮಹಿಳೆಯು ತನ್ನ ಗಂಡನ ಮೊದಲ ಮದುವೆಯ ಇಬ್ಬರು ಮಕ್ಕಳ ಹೆಸರನ್ನು ನಮೂದಿಸಿದ್ದು, ಅನೇಕ ಸಂದರ್ಭಗಳಲ್ಲಿ ಆ ಮಕ್ಕಳ ಆರೈಕೆಗೆ ರಜೆ ಮತ್ತು ಚಿಕಿತ್ಸಾ ಸೌಲಭ್ಯವನ್ನು ಪಡೆದುಕೊಂಡಿದ್ದಳು. ಹಾಗಾಗಿ ಈಗ ಹುಟ್ಟಿದ ಮಗು ಮೂರನೇ ಮಗುವೆಂದು ಪರಿಗಣಿಸಲಾಗಿದೆ' ಎಂದು ನ್ಯಾಯಾಲಯಕ್ಕೆ ತಿಳಿಸಿತ್ತು.
ವಿಚಾರಣೆ ನಡೆಸಿದ ನ್ಯಾಯಮೂರ್ತಿ ಜಸ್ವಂತ್ ಸಿಂಗ್ ಮತ್ತು ನ್ಯಾಯಮೂರ್ತಿ ಸಂತ ಪರ್ಕಾಶ್ ಅವರ ಹೈಕೋರ್ಟ್ ಪೀಠವು, "ಯಾವುದೇ ಮಹಿಳೆ ಸರ್ಕಾರದ ಮೆಟರ್ನಿಟಿ ಲೀವ್ ಸೌಲಭ್ಯವನ್ನು ಎರಡು ಅಥವಾ ಕಡಿಮೆ ಮಕ್ಕಳಿದ್ದರೆ ಮಾತ್ರ ಪಡೆಯಬಹುದು. ಆ ಮಕ್ಕಳು ತನಗೇ ಹುಟ್ಟಿದ್ದಾ ಅಲ್ಲವಾ ಅನ್ನೋ ಸಂಗತಿ ಮುಖ್ಯವಲ್ಲ" ಎಂದು ತೀರ್ಪು ನೀಡಿದೆ. (ಏಜೆನ್ಸೀಸ್)
ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್ಬುಕ್ ಪೇಜ್ ಲೈಕ್ ಮಾಡಿ