

ಬೆಂಗಳೂರು: ರಾಜ್ಯದಲ್ಲಿ ಅನಧಿಕೃತ ಫ್ಲೆಕ್ಸ್, ಬ್ಯಾನರ್, ಬಂಟಿಂಗ್ ತೆರವುಗೊಳಿಸದ ಬಿಬಿಎಂಪಿ ಮತ್ತು ರಾಜ್ಯ ಸರ್ಕಾರವನ್ನು ಇದೀಗ ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿದೆ. ಅನಧಿಕೃತ ಜಾಹಿರಾತು ಹಾವಳಿ ತಡೆಯಲು ಪಂಚವಾರ್ಷಿಕ ಯೋಜನೆಗೆ ಕಾಯುತ್ತಿದ್ದೀರಾ ಎಂದು ನ್ಯಾಯಾಲಯ ಪ್ರಶ್ನಿಸಿದೆ.
ಚುನಾವಣೆ ವೇಳೆ 60 ಸಾವಿರ ಅನಧಿಕೃತ ಫ್ಲೆಕ್ಸ್, ಬ್ಯಾನರ್ ಅಳವಡಿಸಲಾಗಿತ್ತು. ಕೇವಲ 134 ದೂರು ಪರಿಗಣಿಸಿ, 40 ಎಫ್‌ಐಆರ್ ದಾಖಲಿಸಲಾಗಿದೆ. ಫ್ಲೆಕ್ಸ್ ಅಳವಡಿಸಿದ ರಾಜಕೀಯ ಪಕ್ಷಗಳ ಪದಾಧಿಕಾರಿಗಳ ಮೇಲೆ ಯಾಕೆ ಇನ್ನೂ ಕ್ರಮ ಕೈಗೊಂಡಿಲ್ಲ. ಬೆಂಗಳೂರು ಸುಂದರವಾಗಿರುವುದು ಸರ್ಕಾರಕ್ಕೆ ಇಷ್ಟವಿಲ್ಲವೇ? ನಗರದ ತುಂಬೆಲ್ಲಾ ಬ್ಯಾನರ್, ಬಂಟಿಂಗ್ ಇರಬೇಕೆಂಬುದು ಸರ್ಕಾರದ ಅಪೇಕ್ಷೆಯೇ? ಎಂದು ಹೈಕೋರ್ಟ್ ಪ್ರಶ್ನಿಸಿದೆ.
ಬೆಂಗಳೂರಿನ ಬಗ್ಗೆ ಹೂಡಿಕೆದಾರರಿಗೆ ಎಂತಹ ಚಿತ್ರಣ ನೀಡುತ್ತಿದ್ದೀರಿ? ರಾಜ್ಯದ ಸ್ಥಿತಿ ಸುಧಾರಿಸದಿದ್ದರೆ, ಹೂಡಿಕೆ ಹೇಗೆ ತರುತ್ತೀರಿ. ಇನ್ನು ಮುಂದೆ ಒಂದೇ ಒಂದು ಅನಧಿಕೃತ ಫ್ಲೆಕ್ಸ್ ಕಾಣಿಸಿದರೆ ತಲಾ 50 ಸಾವಿರ ರೂ. ದಂಡ ವಿಧಿಸಲಾಗುವುದು. ಫ್ಲೆಕ್ಸ್ ಮೂಲಕ ಶುಭಾಷಯ ಕೋರುವವರ ವಿರುದ್ಧವೂ ಕ್ರಮ ಕೈಗೊಳ್ಳಬೇಕು.
ನಿರ್ಲಕ್ಷ ವಹಿಸಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಉಚ್ಚ ನ್ಯಾಯಾಲಯದ ಸಿಜೆ ಪ್ರಸನ್ನ ಬಿ. ವರಾಳೆ ಅವರು ಬಿಬಿಎಂಪಿ ಮತ್ತು ರಾಜ್ಯ ಸರ್ಕಾರಕ್ಕೆ ಆದೇಶ ಹೊರಡಿಸಿದ್ದಾರೆ,(ಏಜೆನ್ಸೀಸ್).