More

    ಜಿಲ್ಲಾಸ್ಪತ್ರೆಗೆ ಜಿಲ್ಲಾಧಿಕಾರಿ ಡಾ.ವೆಂಕಟೇಶ್ ದಿಢೀರ್ ಭೇಟಿ -ಡಯಾಲಿಸಿಸ್‌ನ 10 ಯಂತ್ರ ಖರೀದಿಗೆ ಸೂಚನೆ

    ದಾವಣಗೆರೆ: ಚಿಗಟೇರಿ ಜಿಲ್ಲಾ ಸಾರ್ವಜನಿಕ ಆಸ್ಪತ್ರೆಯಲ್ಲಿ ಡಯಾಲಿಸಿಸ್ ಘಟಕದಲ್ಲಿ ಅವಶ್ಯವಿರುವ ಹೆಚ್ಚುವರಿ 10 ಯಂತ್ರಗಳನ್ನು ಸಿಎಸ್‌ಆರ್ ನಿಧಿಯಡಿ ಖರೀದಿಸುವಂತೆ ಜಿಲ್ಲಾಧಿಕಾರಿ ಡಾ.ಎಂ.ವಿ. ವೆಂಕಟೇಶ್ ಸೂಚನೆ ನೀಡಿದರು.
    ಚಿಗಟೇರಿ ಜಿಲ್ಲಾ ಸಾರ್ವಜನಿಕ ಆಸ್ಪತ್ರೆಗೆ ಮಂಗಳವಾರ ದಿಢೀರ್ ಭೇಟಿ ನೀಡಿ ಪರಿಶೀಲಿಸಿದ ಡಿಸಿ, ಡಯಾಲಿಸಿಸ್ ಘಟಕದಲ್ಲಿ 13 ಯಂತ್ರಗಳಿದ್ದು, 7 ಮಾತ್ರ ಕಾರ್ಯ ನಿರ್ವಹಿಸುತ್ತಿರುವ ಬಗ್ಗೆ ವಿವರ ಪಡೆದರು.
    ರಾಜ್ಯ ಮಟ್ಟದಲ್ಲಿ ಎಸ್ಕಾಸ್ ಸಂಜೀವಿನಿ ಸಂಸ್ಥೆ ಇದರ ಟೆಂಡರ್ ಪಡೆದಿದ್ದು ಅವರೇ ಇದರ ನಿರ್ವಹಣೆ ಮಾಡಬೇಕಿದೆ. ಅನೇಕ ತಿಂಗಳಿಂದ ಅನುದಾನ ಬಾಕಿ ಇದೆ. ಈಗಿರುವ ತಾಂತ್ರಿಕ ಸಿಬ್ಬಂದಿಯನ್ನೇ 2 ತಿಂಗಳವಧಿಗೆ ಮುಂದುವರಿಸಲು ಸರ್ಕಾರ ಆದೇಶಿಸಿದೆ ಎಂದೂ ಆಸ್ಪತ್ರೆ ಅಧೀಕ್ಷಕ ಡಾ. ಸುಭಾಷ್ ಮಾಹಿತಿ ನೀಡಿದರು.
    ಡಯಾಲಿಸಿಸ್ ರೋಗಿಗಳಿಗೆ ಕೊರತೆಯಾಗದಂತೆ ನೋಡಿಕೊಳ್ಳಬೇಕು. ಈ ಸಂಬಂಧ ಹೆಚ್ಚುವರಿ ಯಂತ್ರಗಳ ಖರೀದಿ ಸಂಬಂಧ ಪ್ರಸ್ತಾವ ಸಲ್ಲಿಸುವಂತೆಯೂ ಡಿಸಿ ಸೂಚನೆ ನೀಡಿದರು. ಆಸ್ಪತ್ರೆಯ ಕೊಠಡಿಗಳು ಹಾಗೂ ಹೊರ ಆವರಣ ಸ್ವಚ್ಛತೆ ಕುರಿತು ಗಮನ ಹರಿಸಬೇಕು ಎಂದು ಹೇಳಿದರು.
    ನವಜಾತ ಶಿಶು ನಿಗಾ ಘಟಕ, ಹೃದ್ರೋಗ ತಪಾಸಣಾ ಕೊಠಡಿ, ಅಡುಗೆ ಮನೆ ಸೇರಿ ವಿವಿಧೆಡೆ ಸೋರುವ ಹಾಗೂ ಶಿಥಿಲಾವಸ್ಥೆಯಲ್ಲಿರುವ ರೂಂ. ಹಾಗೂ ಆಸ್ಪತ್ರೆ ಆವರಣದ ವಾಟರ್ ಟ್ಯಾಂಕ್ ಅನ್ನು ಡಿಸಿ ಪರಿಶೀಲನೆ ಮಾಡಿದರು. ಆಸ್ಪತ್ರೆಯ ಒಳಚರಂಡಿ ವ್ಯವಸ್ಥೆ ಹಳೆಯದಾಗಿದ್ದನ್ನು ವೀಕ್ಷಿಸಿದರು.
    ಶಿಥಿಲಾವಸ್ಥೆಯಲ್ಲಿರುವ ಕಟ್ಟಡಗಳ ದುರಸ್ತಿ ಸಂಬಂಧ 31.20 ಕೋಟಿ ರೂ. ಗಳಿಗೆ ಈ ಹಿಂದೆಯೇ ಪ್ರಸ್ತಾವ ಸಲ್ಲಿಸಲಾಗಿದ್ದು ಅನುದಾನ ಬಂದಿಲ್ಲ ಎಂದು ಆಸ್ಪತ್ರೆ ಅಧೀಕ್ಷಕರು ಮಾಹಿತಿ ನೀಡಿದರು. ಹಂತ ಹಂತವಾಗಿ ದುರಸ್ತಿ ಕಾಮಗಾರಿಗೆ ಕ್ರಮ ವಹಿಸಬೇಕಿದೆ. ಅನುದಾನ ಬಿಡುಗಡೆ ಸಂಬಂಧ ತಾವೂ ಸಹ ಪತ್ರ ಬರೆದು ಒತ್ತಡ ತರುವುದಾಗಿ ಡಿಸಿ ಹೇಳಿದರು.
    ಆಸ್ಪತ್ರೆಯ ವಿವಿಧ ವಾರ್ಡ್‌ಗಳ ರೋಗಿಗಳ ಕುಶಲೋಪರಿ ವಿಚಾರಿಸಿದರು. ಪ್ರಗತಿ ಹಂತದಲ್ಲಿರುವ ತಾಯಿ ಮತ್ತು ಮಗು ಆಸ್ಪತ್ರೆ ಹಾಗೂ ಟ್ರಾಮಾ ಕೇರ್ ಸೆಂಟರ್ ಕಾಮಗಾರಿ ವೀಕ್ಷಣೆ ಮಾಡಿದರು. ಆಸ್ಪತ್ರೆಗೆ ಅತಿ ಅವಶ್ಯಕ ಔಷಧ ಖರೀದಿಗೆ ಆರೋಗ್ಯ ರಕ್ಷಾ ನಿಧಿ ಹಾಗೂ ಎಬಿಆರ್‌ಕೆ ಅಡಿ ಹಣ ಬಳಸಲಾಗುತ್ತಿದೆ ಎಂದು ಅಧೀಕ್ಷಕರು ವಿವರಿಸಿದರು.
    ಡಿಎಚ್‌ಒ ಡಾ.ನಾಗರಾಜ್, ಆಸ್ಪತ್ರೆಯ ನಿವಾಸಿ ವೈದ್ಯಾಧಿಕಾರಿ ಮಂಜುನಾಥ ಪಾಟೀಲ್ ವೈದ್ಯಾಧಿಕಾರಿಗಳಿದ್ದರು.
    ಅಣಜಿ ಕೆರೆ ಪರಿಶೀಲನೆ
    ಇತ್ತೀಚೆಗೆ ಸುರಿದ ಮಳೆಯಿಂದಾಗಿ ತಾಲೂಕಿನ ಅಣಜಿ ಕೆರೆ ತುಂಬಿದ್ದು, ಹಿನ್ನೀರಿನಿಂದ ಬೆಳೆ ಮುಳುಗಡೆಯಾಗುವ ಆತಂಕದಲ್ಲಿದ್ದ ರೈತರು ಮನವಿ ನೀಡಿದ್ದರು. ಈ ಸಂಬಂಧ ಸ್ಥಳ ಪರಿಶೀಲನೆ ನಡೆಸಿದ ಜಿಲ್ಲಾಧಿಕಾರಿ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮ ವಹಿಸುವುದಾಗಿ ತಿಳಿಸಿದರು. ಸಮಾಜ ಕಲ್ಯಾಣ ಇಲಾಖೆಯಡಿ ನಿರ್ಮಾಣ ಹಂತದಲ್ಲಿರುವ ಮುರಾರ್ಜಿ ವಸತಿ ಶಾಲೆ ಕಾಮಗಾರಿ ವೀಕ್ಷಿಸಿ ತುರ್ತು ಕೆಲಸ ಮುಗಿಸಿ ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸುವಂತೆಯೂ ಸೂಚಿಸಿದರು. ದಾವಣಗೆರೆ ಉಪವಿಭಾಗಾಧಿಕಾರಿ ಎನ್. ದುರ್ಗಾಶ್ರೀ, ತಹಸೀಲ್ದಾರ್ ಎಂ.ಬಿ. ಅಶ್ವಥ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts