More

  ಕಾಂಗ್ರೆಸ್ ವಿರುದ್ಧ ಸಿಡಿದೆದ್ದ ಕುರುಬರು

  ಕಲಬುರಗಿ: ಕಮಲಾಪುರ ತಾಲೂಕಿನ ಲಾಡಮುಗಳಿ ಗ್ರಾಮದಲ್ಲಿ ಅಟ್ರಾಸಿಟಿ ಕೇಸ್ ದಾಖಲಿಸಿದ್ದರಿಂದ ಹೆದರಿ ಕುರುಬ ಸಮಾಜದ ಯುವಕ ನಿಖಿಲ್ ಆತ್ಮಹತ್ಯೆ ಮಾಡಿಕೊಂಡಿರುವುದು ಹಾಲುಮತದವರನ್ನು ಕೆರಳಿಸಿದೆ. ಸುಡುವಂಥ ಖಡಕ್ ಬಿಸಿಲು ಲೆಕ್ಕಿಸದೆ ಭಾನುವಾರ ಸೂರ್ಯಸ್ನಾನ ಮಾಡುತ್ತಲೇ ನಗರದಲ್ಲಿ ಬೃಹತ್ ಪ್ರತಿಭಟನಾ ಸಭೆ ನಡೆಸಿ ಕಾಂಗ್ರೆಸ್ ವಿರುದ್ಧ ಗುಡುಗಿದರು.

  ಕುರುಬರ ಜೀವಕ್ಕೆ ಬೆಲೆ ಇಲ್ಲವೆ ಎಂದು ಪ್ರಶ್ನಿಸಿದ ಪ್ರತಿಭಟನಾಕಾರರು, ಸಿಎಂ ಸಿದ್ದರಾಮಯ್ಯ ಒಳ್ಳೆಯವರು. ಆದರೆ ಅವರ ಹೆಸರಿನಲ್ಲಿ ಅಧಿಕಾರಕ್ಕೆ ಬಂದು ಸುಳ್ಳು ಅಟ್ರಾಸಿಟಿ ಕೇಸ್ ದಾಖಲಿಸಿ ಅಮಾಯಕರ ಮೇಲೆ ದಬ್ಬಾಳಿಕೆ ನಡೆಸುತ್ತಿರುವ ಕಲಬುರಗಿ ನಾಯಕರಿಗೆ ತಕ್ಕಪಾಠ ಕಲಿಸಬೇಕು ಎಂದು ಒಕ್ಕೊರಲಿನಿಂದ ಒತ್ತಾಯಿಸಿದರು.

  ಸಾರ್ವಜನಿಕ ಉದ್ಯಾನದಲ್ಲಿರುವ ವೀರಶೈವ ಕಲ್ಯಾಣ ಮಂಪಟ ಎದುರು ನಡೆದ ಸ್ವಾಭಿಮಾನಿ ಕುರುಬರ ಪ್ರತಿಭಟನಾ ಸಮಾವೇಶದಲ್ಲಿ ಭಾಗವಹಿಸಿದ್ದ ಜಿಲ್ಲೆಯ ವಿವಿಧೆಡೆಯಿಂದ ಬಂದಿದ್ದ ಸಮಾಜದವರು ಕಾಂಗ್ರೆಸ್ ವಿರುದ್ಧ ರಣಕಹಳೆ ಊದುವ ಮೂಲಕ ಈ ಚುನಾವಣೆಯಲ್ಲಿ ತಕ್ಕಪಾಠ ಕಲಿಸಿ ನಮ್ಮ ಮೇಲೆ ಆಗುತ್ತಿರುವ ಅನ್ಯಾಯಕ್ಕೆ ಬ್ರೇಕ್ ಹಾಕೋಣ. ಸುಳ್ಳು ಅಟ್ರಾಸಿಟಿ ಕೇಸ್‌ಗಳಿಂದ ನಮ್ಮನ್ನು ಮುಕ್ತಗೊಳಿಸಲು ಸಮಾಜವನ್ನು ಎಸ್‌ಟಿ(ಪರಿಶಿಷ್ಟ ಪಂಗಡ)ಗೆ ಸೇರಿಸಬೇಕು. ನಮಗೆ ನಿಮ್ಮ ಗ್ಯಾರಂಟಿಗಳು ಬೇಡ. ಎಸ್‌ಟಿ ಬೇಕು ಎಂದು ಹಕ್ಕೊತ್ತಾಯ ಮಂಡಿಸಿದರು.

  ಹಾಲುಮತ ಸಮಾಜದವರ ಪ್ರತಿಭಟನೆ ವಿಷಯ ಅರಿತ ಬಿಜೆಪಿ ಅಭ್ಯರ್ಥಿ ಡಾ.ಉಮೇಶ ಜಾಧವ್, ಪಕ್ಷದ ಮಹಾನಗರ ಜಿಲ್ಲಾಧ್ಯಕ್ಷ ಚಂದು ಪಾಟೀಲ್, ಉಪ ಮೇಯರ್ ಶಿವಾನಂದ ಪಿಸ್ತಿ ಆಗಮಿಸಿ ನಾವೂ ನಿಮ್ಮೊಂದಿಗೆ ಇದ್ದೇವೆ. ಎಲ್ಲರೂ ಸೇರಿ ಅನ್ಯಾಯದ ವಿರುದ್ಧ ಧ್ವನಿ ಎತ್ತೋಣ. ಆತ್ಮಹತ್ಯೆ ಮಾಡಿಕೊಂಡ ನಿಖಿಲ್ ಕುಟುಂಬಕ್ಕೆ ಹೆಚ್ಚಿನ ಪರಿಹಾರ ಸಿಗುವಂತೆ ಮಾಡೋಣ ಎಂದು ಅಭಯ ನೀಡಿದರು.

  ಸಮಾವೇಶ ಬಳಿಕ ಜಗತ್ ವೃತ್ತಕ್ಕೆ ಪಾದಯಾತ್ರೆ ಮೂಲಕ ತೆರಳಿದ ಸಾವಿರಾರು ಜನರು ಡಾ.ಬಿ.ಆರ್. ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಸುಮಾರು ಹೊತ್ತು ಪ್ರತಿಭಟನೆ ನಡೆಸಿದರು. ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಮನವಿ ಸ್ವೀಕರಿಸಿ ಭರವಸೆ ನೀಡಿದ ಬಳಿಕ ಪ್ರತಿಭಟನೆ ಕೊನೆಗೊಳಿಸಲಾಯಿತು.

  ಪ್ರಮುಖರಾದ ಗುರುರಾಜ ಪಟ್ಟಣಕರ್, ಸಂತೋಷ ಮಲ್ಲಾಬಾದಿ, ಹಣಮಂತ ಪೂಜಾರಿ, ಶರಣು ಬೇಲೂರ, ಆನಂದ ರಾಬೆ, ರಮೇಶ ನೀಲಗಾರ, ನಿಂಗಣ್ಣ ರದ್ದೇವಾಡಗಿ, ನಿಂಗಣ್ಣ ಪೂಜಾರಿ ಕುಸನೂರ, ಉದಯಕುಮಾರ, ಮಲ್ಲಪ್ಪ ಪೂಜಾರಿ, ಶರಣು ಪೂಜಾರಿ, ಈರಣ್ಣ ಪೂಜಾರಿ ಸೇರಿ ಜಿಲ್ಲೆಯ ವಿವಿಧ ಕಡೆಗಳಿಂದ ಆಗಮಿಸಿದ್ದ ಸಾವಿರಾರು ಜನರು ಪಾಲ್ಗೊಂಡಿದ್ದರು.

  ಕುರುಬರ ಜೀವದ ಬೆಲೆ ರು.೧೦ ಲಕ್ಷ?: ಸಮಾವೇಶದಲ್ಲಿ ಮಾತನಾಡಿದ ಹಾಲುಮತ ಮುಖಂಡರಾದ ಸಾಯಿಬಣ್ಣ ಪೂಜಾರಿ, ದಿಲೀಪ ಆರ್.ಪಾಟೀಲ್, ಸಮಾಧಾನ ಪೂಜಾರಿ, ಬಸವರಾಜ ಮದ್ರಕಿ, ಬೀರಣ್ಣ ಕೆಲ್ಲೂರ, ಹಣಮಂತ ಪೂಜಾರಿ ಇತರರು, ಅಫಜಲಪುರ, ಆಳಂದ ತಾಲೂಕುಗಳಲ್ಲಿ ನಡೆದ ನಾಲ್ಕು ಘಟನೆಗಳು ಇಡೀ ಸಮಾಜದವರನ್ನು ನೊಂದುಕೊಳ್ಳುವಂತೆ ಮಾಡಿವೆ. ನಾಲ್ವರು ಅಪ್ರಾಪ್ತೆಯರ ಮೇಲಿನ ಅತ್ಯಾಚಾರ ಮತ್ತು ಕೊಲೆ ಮಾಡಿದವರು ದಲಿತ ಯುವಕರು. ಆದರೆ ಇದುವರೆಗೆ ಇವರಿಗೆ ಕಠಿಣ ಶಿಕ್ಷೆಯಾಗಿಲ್ಲ. ಕುರುಬರ ಜೀವಕ್ಕೆ ಬೆಲೆ ಇಲ್ಲವೆ ಎಂದು ಪ್ರಶ್ನಿಸಿದರು. ಜಿಲ್ಲಾ ಉಸ್ತುವಾರಿ ಸಚಿವರು ಹೇಳಿದಂತೆ ಪೊಲೀಸರು ಕೇಳುತ್ತಿರುವುದರಿಂದಲೇ ಲಾಡಮುಗಳಿಯ ನಿಖಲ್ ಆತ್ಮಹತ್ಯೆಗೆ ಕಾರಣರಾದವರನ್ನು ಬಂಧಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಅತ್ಯಾಚಾರಕ್ಕೊಳಗಾಗಿ ಕೊಲೆಗೀಡಾದ ಅಪ್ತಾಪ್ತ ಬಾಲಕಿಯರು ಮತ್ತು ಮಹಿಳೆ ಕುಟುಂಬಕ್ಕೆ ಸರ್ಕಾರ ೫೦ ಲಕ್ಷ ರೂ. ಪರಿಹಾರ, ಕುಟುಂಬದ ಒಬ್ಬರಿಗೆ ಸರ್ಕಾರಿ ಉದ್ಯೋಗ ನೀಡಬೇಕು ಎಂದು ಆಗ್ರಹಿಸಿದರು. ಸುಳ್ಳು ಅಟ್ರಾಸಿಟಿ ಕೇಸ್‌ನಿಂದ ನೊಂದು ನೇಣಿಗೆ ಕೊರಳೊಡ್ಡಿದ ನಿಖಿಲ್ ಮನೆಗೆ ಸಚಿವ ಪ್ರಿಯಾಂಕ್ ಖರ್ಗೆ ಇತರರು ಭೇಟಿ ನೀಡಿ ಕುಟುಂಬದವರಿಗೆ ೧೦ ಲಕ್ಷ ರೂ. ಪರಿಹಾರ ನೀಡಿದ್ದಾರೆ. ಇದನ್ನು ನೋಡಿದರೆ ಕುರುಬರ ಜೀವದ ಬೆಲೆ ಕೇವಲ ೧೦ ಲಕ್ಷ ರೂಪಾಯಿನಾ ಎಂದು ಸಾಯಿಬಣ್ಣ ಪೂಜಾರಿ ಖಾರವಾಗಿ ಪ್ರಶ್ನಿಸಿದರು.

  ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ಕೊಡದಿದ್ದರೂ ಪರವಾಗಿಲ್ಲ. ನಮಗೆ ರಕ್ಷಣೆ ಬೇಕು. ಮುಖ್ಯಮಂತ್ರಿ ನಮ್ಮವರು ಎಂದು ಬಂದಾಗ ಡೊಳ್ಳು ಬಾರಿಸಿ ಭಂಡಾರ ಹಾರಿಸಿ ಸಂಭ್ರಮಿಸುತ್ತೇವೆ. ಆದರೆ ನಮ್ಮನ್ನು ಕಲಬುರಗಿ ಜಿಲ್ಲೆಯಲ್ಲಿ ವ್ಯವಸ್ಥಿತವಾಗಿ ತುಳಿಯುವ ಕೆಲಸ ಕಾಂಗ್ರೆಸ್‌ನ ಖರ್ಗೆ ಪರಿವಾರ ಮಾಡುತ್ತಿದೆ. ಒಬ್ಬರನ್ನು ಎಂಎಲ್‌ಸಿ ಸಹ ಮಾಡಲಿಲ್ಲ. ದಬ್ಬಾಳಿಕೆ ಕೊನೆಯಾಗಲೇಬೇಕು. ಇಲ್ಲದಿದ್ದರೆ ಗಂಭೀರ ಪರಿಣಾಮ ಎದುರಿಸಬೇಕಾದೀತು.
  | ಸಾಯಿಬಣ್ಣ ಪೂಜಾರಿ ಹಾಲುಮತ ಮುಖಂಡ

  ಎಸ್‌ಟಿ ಸೇರ್ಪಡೆ ಪ್ರಕ್ರಿಯೆ ಅಂತಿಮ ಹಂತಕ್ಕೆ: ಬಿಸಿಲಲ್ಲೇ ಪ್ರತಿಭಟನಾ ಸಮಾವೇಶ ಮಾಡುತ್ತಿರುವುದನ್ನು ಕಂಡ ಸಂಸದ ಡಾ.ಉಮೇಶ ಜಾಧವ್, ನಾವು-ನೀವು ಒಂದೇ. ಬಿಸಿಲಿನಲ್ಲಿ ಬಾಟಲಿ ನೀರು ತೆಗೆದುಕೊಂಡು ಹೋಗಿ ಅಡವಿಯಲ್ಲಿ ಕುರಿ ಮೇಯಿಸುವರು ನಾವು. ಇಂತಹ ಬಿಸಿಲಿನಲ್ಲಿ ನಿಮ್ಮೊಂದಿಗೆ ಬಂದು ನಿಲ್ಲಲು ಕಾಂಗ್ರೆಸ್ ಅಭ್ಯರ್ಥಿ ರಾಧಾಕೃಷ್ಣ ದೊಡ್ಡಮನಿ ಅವರಿಗೆ ಆಗಲ್ಲ. ಎಸಿಯಲ್ಲಿ ಕುಳಿತವರು ನಿಮ್ಮೊಂದಿಗೆ ಹೇಗೆ ಬರುತ್ತಾರೆ? ಅಂತಹವರಿಂದ ನ್ಯಾಯ ಸಿಗಲು ಸಾಧ್ಯವೇ? ಒಮ್ಮೆ ಯೋಚಿಸಿ ಎಂದರು. ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಜಿಲ್ಲೆಯಲ್ಲಿ ಲಿಂಗಾಯತರು, ಕುರುಬರು, ಕೋಲಿ ಸೇರಿ ಸಣ್ಣ ಜಾತಿಯವರ ಮೇಲೆ ದೌರ್ಜನ್ಯ ಹೆಚ್ಚಿದೆ. ಸಚಿವ ಪ್ರಿಯಾಂಕ್ ಖರ್ಗೆ ಕುಮ್ಮಕ್ಕೇ ಇದಕ್ಕೆ ಕಾರಣ ಎಂದು ಗುಡುಗಿದ ಡಾ.ಜಾಧವ್, ಇಂಥ ಘಟನೆ ಮರುಕಳಿಸದಿರಲು ಬಿಜೆಪಿಗೆ ಮತ ನೀಡಿ ಗೆಲ್ಲಿಸುವ ಮೂಲಕ ಮತ್ತೊಮ್ಮೆ ನರೇಂದ್ರ ಮೋದಿ ಅವರನ್ನು ಪ್ರಧಾನಿ ಮಾಡುವ ಅಗತ್ಯವಿದೆ. ಇನ್ನು ಬಹುವರ್ಷಗಳ ಬೇಡಿಕೆ ಕುರುಬ-ಗೊಂಡ ಪದಗಳನ್ನು ಎಸ್‌ಟಿಗೆ ಸೇರಿಸುವ ಪ್ರಕ್ರಿಯೆ ಅಂತಿಮ ಹಂತದಲ್ಲಿದೆ ಎಂದು ಹೇಳಿದರು.

  ಬನ್ನಿ ಎಂದು ಕರೆದಾಕ್ಷಣ ಈ ಚಂದು ಹಾಜರ್: ಯಾವುದೇ ಸಮಾಜದವರಿಗೆ ಅನ್ಯಾಯ ಇಲ್ಲವೆ ಮೋಸ ಆಗಿದ್ದರೆ ನ್ಯಾಯ ಕೊಡಿಸಲು ಬನ್ನಿ ಎಂದು ಕರೆದಾಕ್ಷಣ ಅಲ್ಲಿಗೆ ಹೋಗಿ ಅವರ ಧ್ವನಿಯಾಗಿ ಕೆಲಸ ಮಾಡುವುದಾಗಿ ಬಿಜೆಪಿ ಕಲಬುರಗಿ ಮಹಾನಗರ ಜಿಲ್ಲಾಧ್ಯಕ್ಷ ಚಂದು ಪಾಟೀಲ್ ಹೇಳಿದರು. ಕೋಟನೂರಿನಲ್ಲಿ ವೀರಶೈವ-ಲಿಂಗಾಯತರ ಮೇಲೆ ದಬ್ಬಾಳಿಕೆ ಆಗಿದೆ ಬನ್ನಿ ಎಂದರು. ಹೋದೆವು. ನಂತರ ಲಾಡಮುಗಳಿಯಲ್ಲಿ ಕುರುಬ ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಬನ್ನಿ ಎಂದರು. ನಾವೆಲ್ಲರೂ ಹೋಗಿ ಹೋರಾಟಕ್ಕಿಳಿದೆವು. ಇಂದು ಕುರುಬರು ಅನ್ಯಾಯದ ವಿರುದ್ಧ ಹೋರಾಟ ನಡೆಸಿದ್ದೇವೆ ಬನ್ನಿ ಎಂದರು. ಬಂದಿದ್ದೇನೆ. ದಲಿತರು ಸೇರಿ ಯಾವ ಸಮಾಜದವರು ಅನ್ಯಾಯಕ್ಕೊಳಗಾದರೆ ಬನ್ನಿ ಎಂದರೆ ಅವರೊಂದಿಗೆ ಹೋಗಿ ನಿಲ್ಲುತ್ತೇನೆ ಎಂದು ಅಭಯ ನೀಡಿದರು. ಮೃತ ನಿಖಿಲ್ ಕುಟುಂಬಕ್ಕೆ ೫೦ ಲಕ್ಷ ರೂ.ಪರಿಹಾರ ಸಿಗುವಂತಾಗಲು ಸಂಘಟಿತರಾಗಿ ಹೋರಾಟ ಮಾಡೋಣ ಎಂದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts