More

    ಕೊತ್ತಲ ಬಸವನ ರಥೋತ್ಸವ ಸಂಭ್ರಮ

    ಸೇಡಂ: ಶ್ರೀ ಕೊತ್ತಲ ಬಸವೇಶ್ವರ ಜಾತ್ರೋತ್ಸವ ನಿಮಿತ್ತ ಭಾನುವಾರ ಸಂಜೆ ಅಪಾರ ಭಕ್ತರ ಜೈಘೋಷದ ಮಧ್ಯೆ ಅದ್ದೂರಿಯಾಗಿ ಕೊತ್ತಲ ಬಸವನ ಮಹಾ ರಥೋತ್ಸವ ನೆರವೇರಿತು.

    ಬೆಳಗ್ಗೆ ಶ್ರೀ ಕೊತ್ತಲ ಬಸವೇಶ್ವರ ದೇವರಿಗೆ ವಿಶೇಷ ಪೂಜೆ, ಅಭಿಷೇಕ, ಅಲಂಕಾರ ಸೇರಿ ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆದವು. ೮ಗಂಟೆಗೆ ಕೆಂಡ ಹಾಯುವ ಅಗ್ಗಿ ಕಟ್ಟೆಗೆ ಪೀಠಾಧಿಪತಿ ಶ್ರೀ ಸದಾಶಿವ ಸ್ವಾಮೀಜಿ, ಶಿವಶಂಕರ ಮಠದ ಶ್ರೀ ಶಿವಶಂಕರ ಶಿವಾಚಾರ್ಯರು ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಅಪಾರ ಭಕ್ತರೊಂದಿಗೆ ಸದಾಶಿವ ಶ್ರೀಗಳು ಅಗ್ನಿ ಹಾಯ್ದರು.

    ಸಂಜೆ ೪ಕ್ಕೆ ಹಾರೆಗಳನ್ನು ಹೊತ್ತು ವಡ್ಡರ ಜನಾಂಗದವರು ಎರಡು ಬೀದಿಗಳಲ್ಲಿ ಸಂಚರಿಸಿ ದೇವಸ್ಥಾನಕ್ಕೆ ಆಗಮಿಸಿದರು. ಊಡಗಿ ರಸ್ತೆಯ ಗುಂಪಾದಿಂದ ಬಂದ ನಂದಿಕೋಲುಗಳ ಕುಣಿತ ನೆರೆದವರ ಗಮನಸೆಳೆದವು. ಬಳಿಕ ಪಲ್ಲಕ್ಕಿಯಲ್ಲಿದ್ದ ವೀರಭದ್ರ ದೇವರ ಮೂರ್ತಿಯನ್ನು ತೇರಿನಲ್ಲಿ ಪ್ರತಿಷ್ಠಾಪಿಸಲಾಯಿತು. ರಥದ ಮುಂಭಾಗದಲ್ಲಿ ಕುಂಭ ಪೂಜೆ ನಡೆಸಲಾಯಿತು. ೬ಗಂಟೆಗೆ ಅಸಂಖ್ಯಾತ ಭಕ್ತರ ಮಧ್ಯೆ ಅದ್ದೂರಿ ರಥೋತ್ಸವಕ್ಕೆ ಪೂಜ್ಯರು ಚಾಲನೆ ನೀಡಿದರು. ಅಪಾರ ಜನರು ಜೈಘೋಷಗಳೊಂದಿಗೆ ಕೊತ್ತಲ ಬಸವನ ರಥವನೆಳೆದು ಕೃತಾರ್ಥರಾದರು. ಕೊತ್ತಲ ಬಸವೇಶ್ವರ ಮಹಾರಾಜ್ ಕಿ ಜೈ.. ಸೇರಿ ವಿವಿಧ ಘೋಷಣೆ ಮೊಳಗಿದವು. ಜನರು ರಥಕ್ಕೆ ಉತ್ತತ್ತಿ, ಬಾಳೆಹಣ್ಣು, ನಾಣ್ಯಗಳನ್ನು ಎಸೆದು ಭಕ್ತಿ ಸಮರ್ಪಿಸಿದರು.

    ವೈದ್ಯಕೀಯ ಶಿಕ್ಷಣ ಸಚಿವ ಸಚಿವ ಡಾ.ಶರಣಪ್ರಕಾಶ ಪಾಟೀಲ್, ಮಾಜಿ ಸಂಸದ ಬಸವರಾಜ ಪಾಟೀಲ್, ಮಾಜಿ ಶಾಸಕ ರಾಜಕುಮಾರ ಪಾಟೀಲ್ ತೆಲ್ಕೂರ ಇತರರಿದ್ದರು.

    ಭಗವಂತನಲ್ಲಿ ತನ್ಮಯವಾಗಿಸುವ ಭಜನೆ: ಭಜನೆ ಹಾಗೂ ಸತ್ಸಂಗದಿಂದ ಭಗವಂತನ ಕೃಪಾಶೀರ್ವಾದ ಪಡೆಯಲು ಸಾಧ್ಯ. ಹಾಡು ಹಾಗೂ ನೃತ್ಯದಿಂದ ದೇವರು ತನ್ಮಯನಾಗುತ್ತಾನೆ ಎಂದು ಶ್ರೀ ಸದಾಶಿವ ಸ್ವಾಮೀಜಿ ಹೇಳಿದರು. ಕೊತ್ತಲ ಬಸವೇಶ್ವರ ದೇವಸ್ಥಾನ ಆವರಣದಲ್ಲಿ ಶನಿವಾರ ರಾತ್ರಿ ಔಸಾ ಲಾತೂರಿನ ವೀರನಾಥ ಮಲ್ಲಿನಾಥ ಮಹಾರಾಜ ಸಂಸ್ಥಾನದ ಪೀಠಾಧಿಪತಿ ಶ್ರೀ ಗುರು ಬಾಬಾ ಮಹಾರಾಜ ನೇತೃತ್ವದ ತಂಡದಿಂದ ಹಮ್ಮಿಕೊಂಡಿದ್ದ ವಿಶೇಷ ಚಕ್ರ ಭಜನೆ ಕಾರ್ಯಕ್ರಮಲ್ಲಿ ಮಾತನಾಡಿ, ಜಾತ್ರೆ ಎಂದರೆ ಮೂರು ಕೆಟ್ಟದ್ದನ್ನು ಬಿಟ್ಟು ಮೂರು ಒಳಿತನ್ನು ಪಡೆದುಕೊಳ್ಳುವುದಾಗಿದೆ. ಅಗ್ನಿ ಪ್ರವೇಶ ಮಾಡುವುದು ನಮ್ಮಲ್ಲಿನ ಕೋಪ, ತಾಪ, ಅಹಂಕಾರ ಅಳಿಯುವುದಕ್ಕಾಗಿ ಮತ್ತು ಹರಕೆ ತಿರಿಸುವುದಕ್ಕಾಗಿ ಮಾಡುವಂತದ್ದಾಗಿದೆ ಎಂದರು. ಮಾಜಿ ಸಂಸದ ಡಾ.ಬಸವರಾಜ ಪಾಟೀಲ್ ಸೇಡಂ ಮಾತನಾಡಿ, ಭಜನೆ ಎಂದರೆ ಭಕ್ತ ಭಗವಂತನಲ್ಲಿ ಲೀನನಾಗುವುದು ಎಂಬುವುದಾಗಿದೆ. ಚಕ್ರ ಭಜನೆ ದೇಶದಾದ್ಯಂತ ತನ್ನದೇ ಆದ ಛಾಪನ್ನು ಮೂಡಿಸಿದೆ. ಅಂತಹ ಕಾರ್ಯಕ್ರಮ ನಮ್ಮಲ್ಲಿ ನಡೆಯುತ್ತಿರುವುದು ಸಂತೋಷ ತಂದಿದೆ ಎಂದರು. ಶಿವಶಂಕರ ಮಠದ ಶ್ರೀ ಶಿವಶಂಕರ ಶಿವಾಚಾರ್ಯರು, ಹಾಲಪ್ಪಯ್ಯ ಮಠದ ಶ್ರೀ ಪಂಚಾಕ್ಷರ ಸ್ವಾಮೀಜಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts