More

  ಜನರ ಮನವಿಗೆ ಸ್ಪಂದಿಸುವ ಕೆಲಸವಾಗಲಿ

  ಸೇಡಂ: ವಿವಿಧ ಕೆಲಸ-ಕಾರ್ಯಕ್ಕಾಗಿ ಸರ್ಕಾರಿ ಕಚೇರಿಗಳಿಗೆ ಆಗಮಿಸುವ ಜನರ ಮನವಿಗೆ ಸ್ಪಂದಿಸುವ ಕೆಲಸ ಅಧಿಕಾರಿಗಳು ಮಾಡಬೇಕು. ಯಾವುದೇ ಕಾರಣಕ್ಕೂ ಅಲೆದಾಡಿಸಬೇಡಿ ಎಂದು ಲೋಕಾಯುಕ್ತ ಡಿವೈಎಸ್‌ಪಿ ಮಂಜುನಾಥ ಗಂಗಲ್ ಹೇಳಿದರು.

  ಸಹಾಯಕ ಆಯುಕ್ತರ ಕಚೇರಿ ಸಭಾಂಗಣದಲ್ಲಿ ಶನಿವಾರ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿ ಮಾತನಾಡಿದ ಅವರು, ನಿಮ್ಮ ಕೆಳ ಹಂತದ ಸಿಬ್ಬಂದಿ ಸಣ್ಣಪುಟ್ಟ ಕೆಲಸಗಳಿಗೆ ಕೈಚಾಚುವ ಅಭ್ಯಾಸ ಮಾಡಿಕೊಂಡಿದ್ದಾರೆ. ಒಬ್ಬರು ಮಾಡುವ ತಪ್ಪಿಗೆ ಇಡೀ ಕಚೇರಿಗೆ ಕೆಟ್ಟ ಹೆಸರು ಬರುತ್ತದೆ. ಹೀಗಾಗಿ ಲಂಚಕ್ಕೆ ಆಸ್ಪದ ಕೊಡಬೇಡಿ, ಸಿಬ್ಬಂದಿಗೆ ಖಡಕ್ ಎಚ್ಚರಿಕೆ ಕೊಡಿ ಎಂದು ತಾಕೀತು ಮಾಡಿದರು.

  ರಂಜೋಳದಲ್ಲಿ ಯಾವುದೇ ಕೆಲಸ ಮಾಡದೇ ೧೫ನೇ ಹಣಕಾಸು ಯೋಜನೆಯಡಿ ಬಂದಿದ್ದ ಅನುದಾನ ದುರ್ಬಳಕೆ ಮಾಡಿಕೊಳ್ಳಲಾಗಿದೆ. ಸ್ಥಳೀಯ ಅಧಿಕಾರಿಗಳಿಗೆ ದೂರು ಸಲ್ಲಿಸಿದರೂ ಯಾವುದೇ ಕ್ರಮವಹಿಸಿಲ್ಲ, ಬದಲಿಗೆ ಯಾವುದೇ ಅಕ್ರಮ ನಡೆದಿಲ್ಲ ಎಂದು ವರದಿ ನೀಡಲಾಗಿದೆ ಎಂದು ಗ್ರಾಮದ ಅಂಬೇಡ್ಕರ್ ಯುವ ಸೇನೆ ಅಧ್ಯಕ್ಷ ಗೋಪಾಲ ನಾಟೀಕಾರ ದೂರಿದರು. ಇದಕ್ಕೆ ಪ್ರತಿಕ್ರಿಯಿಸಿದ ಲೋಕಾಯುಕ್ತ ಡಿವೈಎಸ್‌ಪಿ ಗಂಗಲ್, ಸೂಕ್ತ ದಾಖಲೆಗಳೊಂದಿಗೆ ನಮ್ಮ ಕಚೇರಿಗೆ ನೇರವಾಗಿ ಬಂದು ದೂರು ಸಲ್ಲಿಸಿ ಅಕ್ರಮವೆಸಗಿದವರನ್ನ ಜೈಲಿಗೆ ಕಳುಹಿಸಲಾಗುವದು ಎಂದರು.

  ಇಟಕಾಲದಲ್ಲಿ ಜೆಜೆಎಂ ಕಾಮಗಾರಿಗಾಗಿ ರಸ್ತೆ ಅಗೆದು ಹಾಗೆಯೇ ಬಿಡಲಾಗಿದೆ. ಇದರಿಂದಾಗಿ ಜನಸಾಮಾನ್ಯರಿಗೆ ತೊಂದರೆ ಉಂಟಾಗುತ್ತಿದೆ. ಕುಡಿವ ನೀರು ಇಲಾಖೆ ಅಧಿಕಾರಿಗಳು ನಮ್ಮ ಮನವಿಗೆ ಸ್ಪಂದಿಸುತ್ತಿಲ್ಲ ಎಂದು ಗ್ರಾಪಂ ಸದಸ್ಯ ಆನಂದ ಶಿವನೋಳ ಹೇಳಿದರು. ಜನನ-ಮರಣ ಪ್ರಮಾಣ ಪತ್ರಕ್ಕಾಗಿ ತಹಸಿಲ್ ಹಾಗೂ ಪುರಸಭೆ ಕಚೇರಿಗಳಲ್ಲಿ ವಿನಾಕಾರಣ ಅಲೆದಾಡಿಸಲಾಗುತ್ತಿದೆ ಎಂದು ವಕೀಲ ಜಗನ್ನಾಥ ದೂರಿದರು.

  ಲೋಕಾಯುಕ್ತ ಇನ್ಸ್ಪೆಕ್ಟರ್ ರಾಜಶೇಖರ ಹಳಗೋಧಿ, ಸಹಾಯಕ ಆಯುಕ್ತ ಆಶಪ್ಪ ಪೂಜಾರಿ, ತಹಸೀಲ್ದಾರ್ ಶಿವಾನಂದ ಮೇತ್ರೆ, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಎ.ವೈ.ಹಂಪಣ್ಣ, ತಾಪಂ ಇಒ ಚನ್ನಪ್ಪ ರಾಯಣ್ಣವರ್, ಪುರಸಭೆ ಮುಖ್ಯಾಧಿಕಾರಿ ಶರಣಯ್ಯಸ್ವಾಮಿ, ತಾಲೂಕು ಆರೋಗ್ಯ ಅಧಿಕಾರಿ ಡಾ.ಸಂಜಯ ಪಾಟೀಲ್, ಪಶು ಇಲಾಖೆ ಸಹಾಯಕ ನಿರ್ದೇಶಕ ಡಾ.ಮಾರುತಿ ನಾಯಕ ಇತರರಿದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts