More

    ನೇಹಾ ಹತ್ಯೆ ಖಂಡಿಸಿ ಬಿಜೆಪಿ ಮಹಿಳಾ ಮೋರ್ಚಾ ಪ್ರತಿಭಟನೆ

    ಮೈಸೂರು: ಹುಬ್ಬಳ್ಳಿಯ ವಿದ್ಯಾರ್ಥಿನಿ ನೇಹಾ ಹಿರೇಮಠ ಹತ್ಯೆ ಖಂಡಿಸಿ ಬಿಜೆಪಿ ನಗರ ಮಹಿಳಾ ಮೋರ್ಚಾದಿಂದ ಮಂಗಳವಾರ ನಗರದ ಜಿಲ್ಲಾ ಪಂಚಾಯಿತಿ ಮುಂಭಾಗ ಮೇಣದ ಬತ್ತಿ ಹಿಡಿದು ಪ್ರತಿಭಟನೆ ನಡೆಸಲಾಯಿತು.
    ಬಿಜೆಪಿ ರಾಜ್ಯ ಉಪಾಧ್ಯಕ್ಷೆ ಮಾಳವಿಕ ಅವಿನಾಶ್ ಮಾತನಾಡಿ, ನೇಹಾ ಹಿರೇಮಠ ಸೇರಿದಂತೆ ಇನ್ನಿತರೆ ಹಿಂದು ಹೆಣ್ಣು ಮಕ್ಕಳ ಮೇಲಿನ ದೌರ್ಜನ್ಯ, ಕೊಲೆ, ಅತ್ಯಾಚಾರವನ್ನು ತಡೆಯಲು ಕಾಂಗ್ರೆಸ್ ಸರ್ಕಾರ ವಿಫಲವಾಗಿದೆ. ಒಂದು ಸಮುದಾಯವನ್ನು ಓಲೈಕೆ ಮಾಡುವ ರಾಜಕಾರಣವನ್ನು ಮಾಡುತ್ತಿದೆ ಎಂದು ಟೀಕಿಸಿದರು.
    ಕಾಲೇಜಿಗೆ ಪರೀಕ್ಷೆ ಬರೆಯಲು ಹೋದ ಯುವತಿಯನ್ನು ಕ್ರೂರವಾಗಿ ಕೊಲೆ ಮಾಡಲಾಗಿದೆ. ರಾಜ್ಯ ಸರ್ಕಾರ ತಮ್ಮ ಮತ ಬ್ಯಾಂಕ್‌ಗಾಗಿ ಆರೋಪಿಯ ಬಗ್ಗೆ ಮೃದು ಧೋರಣೆ ತಾಳಿದೆ. ಹಿಂದು ಹೆಣ್ಣು ಮಕ್ಕಳ ರಕ್ಷಣೆ ವಿಷಯ ಬಂದಾಗ ಅಸಡ್ಡೆ ಮನೋಭಾವ ಹೊಂದಿದೆ. ಒಂದು ಸಮುದಾಯದ ತುಷ್ಟೀಕರಣಕ್ಕಾಗಿ, ರಾಜ್ಯದ ಹೆಣ್ಣು ಮಕ್ಕಳ ಸುರಕ್ಷತೆಯನ್ನೇ ಬಲಿ ಕೊಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
    ನೇಹಾಳನ್ನು ವಾಪಸ್ ಕರೆತರಲು ಸಾಧ್ಯವಿಲ್ಲ. ಆದರೆ ಅವಳ ಆತ್ಮಕ್ಕೆ ಶಾಂತಿ ಸಿಗುವಂತೆ ಮಾಡಬೇಕು. ತಂದೆ, ತಾಯಿಗೆ ನ್ಯಾಯ ಸಿಗಬೇಕಾದರೆ ಆರೋಪಿಗೆ ಕಠಿಣ ಶಿಕ್ಷೆ ಆಗಬೇಕು. ಸಿಎಂ ಸಿದ್ದರಾಮಯ್ಯ ಧೋರಣೆ ನೋಡಿದರೆ ನೇಹಾಳ ಕುಟುಂಬಕ್ಕೆ ನ್ಯಾಯ ಸಿಗುವಂತೆ ಕಾಣುತ್ತಿಲ್ಲ. ಹತ್ಯೆ ನಡೆದು ಒಂದು ವಾರದ ಬಳಿಕ ಒತ್ತಾಯದ ಮೇರೆಗೆ ನೇಹಾಳ ತಂದೆಯನ್ನು ಮಾತನಾಡಿಸಿದ್ದಾರೆ. ಸಿದ್ದರಾಮಯ್ಯ ಅವರಿಗೆ ಸಾಂತ್ವನ ಹೇಳುವ ಮನಸ್ಸು, ಸಮಯ ಎರಡೂ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
    ನೇಹಾಳ ತಂದೆ ಕಾಂಗ್ರೆಸ್ ಕಾರ್ಪೋರೇಟರ್ ಆಗಿದ್ದರೂ ನಮಗೆ ಸರ್ಕಾರದಿಂದ ನ್ಯಾಯ ಸಿಗುವುದಿಲ್ಲ ಎಂದು ಅವರೇ ಅಳಲು ತೋಡಿಕೊಂಡಿದ್ದಾರೆ. ಹೀಗಾಗಿ, ನಾವು ಆ ಕುಟುಂಬಕ್ಕೆ ನ್ಯಾಯ ಕೊಡಿಸುವ ಕೆಲಸ ಮಾಡಬೇಕು. ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕು. ಆರೋಪಿಗೆ ಕಠಿಣ ಶಿಕ್ಷೆ ನೀಡಿ ಕುಟುಂಬಕ್ಕೆ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿದರು.
    ನಗರ ಮಹಿಳಾ ಮೋರ್ಚಾ ಅಧ್ಯಕ್ಷೆ ರೇಣುಕಾ, ಪ್ರಧಾನ ಕಾರ್ಯದರ್ಶಿ ಚಂದ್ರಕಲಾ, ನಗರಪಾಲಿಕೆ ಮಾಜಿ ಸದಸ್ಯರಾದ ಪ್ರಮೀಳಾ ಭರತ್, ಸೌಮ್ಯಾ ಉಮೇಶ್, ಪ್ರಮುಖರಾದ ರಜನಿ ರಾಜ್, ಝಾನ್ಸಿ ರಾಣಿ, ಯಶೋಧಾರಾಜ್, ಪುಷ್ಪಾ ವೆಂಕಟೇಶ್, ಪೂರ್ಣಿಮಾ ಚಂದ್ರಪ್ಪ, ಸರಸ್ವತಿ ಪ್ರಸಾದ್, ಸವಿತಾಗೌಡ, ಲಕ್ಷ್ಮೀ, ಮಾಲಿನಿ ಪಾಲಾಕ್ಷ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts