More

    ಕೇಂದ್ರದ ಪ್ರಶಸ್ತಿಗೆ ಶಿಫಾರಸು ಮಾಡದ ರಾಜ್ಯ ಸರ್ಕಾರ

    ಮೈಸೂರು: ಕನ್ನಡಿಗರಲ್ಲಿ ಸಾಕಷ್ಟು ಮಹಾನ್ ವ್ಯಕ್ತಿಗಳು ಇದ್ದರೂ ಅವರ ಹೆಸರನ್ನು ಕೇಂದ್ರ ಸರ್ಕಾರ ಕೊಡ ಮಾಡುವ ನಾಗರಿಕ ಪ್ರಶಸ್ತಿಗೆ ಶಿಫಾರಸು ಮಾಡಲು ರಾಜ್ಯ ಸರ್ಕಾರ ನಿರ್ಲಕ್ಷೃ ವಹಿಸಿದೆ ಎಂದು ಸಾಹಿತಿ ಬನ್ನೂರು ಕೆ.ರಾಜು ವಿಷಾದಿಸಿದರು.
    ಶ್ರೀಬಸವೇಶ್ವರ ಸಾಂಸ್ಕೃತಿಕ ಪ್ರತಿಷ್ಠಾನದಿಂದ ಕೃಷ್ಣಮೂರ್ತಿಪುರಂನ ನಮನ ಕಲಾಮಂಟಪದಲ್ಲಿ ಬುಧವಾರ ಆಯೋಜಿಸಿದ್ದ ಡಾ.ರಾಜ್‌ಕುಮಾರ್ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
    ಕುವೆಂಪು, ಶಿವರಾಮ ಕಾರಂತ, ಡಾ.ರಾಜ್‌ಕುಮಾರ್ ಸೇರಿದಂತೆ ಅನೇಕ ಮಹಾನೀಯರು, ಸಾಹಿತಿಗಳು, ಕಲಾವಿದರು ಇದ್ದರೂ ಭಾರತರತ್ನ ಪ್ರಶಸ್ತಿಗೆ ರಾಜ್ಯ ಸರ್ಕಾರ ಶಿಫಾರಸು ಮಾಡದಿರುವುದು ದುರಂತ ಎಂದರು.
    ಕನ್ನಡಿಗರಾದ ಭೀಮಸೇನ ಜೋಶಿ ಅವರಿಗೆ ಮಹಾರಾಷ್ಟ್ರ ಸರ್ಕಾರ ಮಾಡಿದ ಶಿಫಾರಸಿನಿಂದ ಭಾರತ ರತ್ನ ದೊರೆತರೆ, ನಟಿ ಬಿ.ಸರೋಜಾದೇವಿ ಅವರಿಗೆ ಅಂಧ್ರಪ್ರದೇಶ ಸರ್ಕಾರ ಮಾಡಿದ ಶಿಫಾರಸಿನಿಂದ ಪದ್ಮಶ್ರೀ, ಪದ್ಮ ವಿಭೂಷಣ ಪ್ರಶಸ್ತಿಗಳು ದೊರೆತಿವೆ. ಆದರೆ ನಮ್ಮ ನಾಡಿನ ಸಾಹಿತಿಗಳು, ಕಲಾವಿದರ ಹೆಸರನ್ನು ಶಿಫಾರಸು ಮಾಡಲು ನಮ್ಮ ಸರ್ಕಾರ ನಿರ್ಲಕ್ಷೃ ತಾಳಿದೆ ಎಂದು ಬೇಸರವ್ಯಕ್ತಪಡಿಸಿದರು.
    ತಮ್ಮ ನಟನೆ, ಭಾಷೆಯ ಉಚ್ಚಾರಣೆ ಮೂಲಕ ಕನ್ನಡವನ್ನು ಎತ್ತರಕ್ಕೆ ಕೊಂಡೊಯ್ದ ಡಾ.ರಾಜ್‌ಕುಮಾರ್ ಅವರು ಇತರ ಭಾಷೆಯಲ್ಲಿ ನಟನೆ ಮಾಡಿದ್ದರೆ ಅಸ್ಕರ್ ಪ್ರಶಸ್ತಿಯೂ ಹುಡುಕಿ ಬರುತ್ತಿತ್ತು. ಆದರೆ ಅವರಿಗೆ ಕನ್ನಡದ ಮೇಲೆ ಇದ್ದ ಅಭಿಮಾನ, ಬದ್ಧತೆಯಿಂದ ಕನ್ನಡ ಬಿಟ್ಟು ಬೇರೆ ಭಾಷೆಯಲ್ಲಿ ನಟಿಸಲಿಲ್ಲ. ಕರ್ನಾಟಕ ಸರ್ಕಾರ ಈಗಲಾದರೂ ಮರಣೋತ್ತರವಾಗಿ ಭಾರತ ರತ್ನ ಕೊಡಿಸಲು ಕೇಂದ್ರಕ್ಕೆ ಶಿಫಾರಸು ಮಾಡಬೇಕು ಎಂದು ಒತ್ತಾಯಿಸಿದರು.
    ರಾಜ್‌ಗೆ ಕರ್ನಾಟಕ ರತ್ನ ಕೊಡುವುದಾಗಿ ಅಂದಿನ ಸರ್ಕಾರ ಹೇಳಿದಾಗ, ಕುವೆಂಪು ಅವರಿಗೆ ಮೊದಲು ಕೊಟ್ಟರೆ ಮಾತ್ರ ನಾನು ಪಡೆದುಕೊಳ್ಳುತ್ತೇನೆ ಎನ್ನುವ ಉದಾರತೆ ತೋರಿದರು. ನನ್ನ ಕೃತಿಯನ್ನು ನಂಜನಗೂಡಿನಲ್ಲಿ ಬಿಡುಗಡೆ ಮಾಡಲು ಜನಸಾಗರದ ಮಧ್ಯೆ ಗುರುತಿಸಿ ವೇದಿಕೆ ಕರೆಯುವಂತಹ ಸೂಕ್ಷ್ಮಮತಿಯೂ ರಾಜ್‌ಕುಮಾರ್ ಅವರಲ್ಲಿತ್ತು ಎಂದರು.
    ಕಾರ್ಯಕ್ರಮ ಉದ್ಘಾಟಿಸಿದ ಕೆ.ರಘುರಾಂ ವಾಜಪೇಯಿ ಮಾತನಾಡಿ, ಮೇರು ನಟರಾದರೂ ಸಾಮಾನ್ಯರಂತೆ ಸರಳ ಜೀವನ ನಡೆಸಿದ ಡಾ.ರಾಜ್‌ಕುಮಾರ್ ಅವರು, ಕಡಿಮೆ ಓದಿದ್ದರೂ ಯಾವುದೇ ಪಂಡಿತರಿಗೂ ಕಡಿಮೆ ಇಲ್ಲ ಎನ್ನುವಂತೆ ಸಂಭಾಷಣೆ ಹೇಳುತ್ತಿದ್ದ ಪ್ರತಿಭಾನ್ವಿತರು ಎಂದು ಹೇಳಿದರು.
    ಪದ್ಮಶ್ರೀ ಜೈನ ಮಹಿಳಾ ಸಮಾಜದ ಅಧ್ಯಕ್ಷೆ ಲತಾ ಸುದರ್ಶನ್ ಮಾತನಾಡಿ, ರಾಜ್‌ಕುಮಾರ್ ಅವರು ಕೌಟುಂಬಿಕ, ಇತರರಿಗೆ ಸ್ಫೂರ್ತಿಯಾಗುವಂತಹ ಸದಾಭಿರುಚಿತ ಕತೆಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದರು. ಹೀಗಾಗಿ ಅವರ ಬಂಗಾರದ ಮನುಷ್ಯ, ಜೀವನ ಚೈತ್ರ ಸೇರಿದಂತೆ ಅನೇಕ ಚಿತ್ರಗಳನ್ನು ನೋಡಿ ಎಷ್ಟೋ ಜನರು ಪರಿವರ್ತನೆ ಹೊಂದಿದ್ದರು ಎಂದರು.
    ರಂಗಕಲಾವಿದ ರಾಜಶೇಖರ ಕದಂಬ ಅವರನ್ನು ಸನ್ಮಾನಿಸಲಾಯಿತು. ಮೈಸೂರು ಜಿಲ್ಲಾ ಚಿನ್ನ, ಬೆಳ್ಳಿ ಕೆಲಸಗಾರರ ಅಭಿವೃದ್ಧಿ ಸಂಘದ ಅಧ್ಯಕ್ಷ ಲಯನ್ ಟಿ.ಸುರೇಶ್, ಶ್ರೀಬಸವೇಶ್ವರ ಸಾಂಸ್ಕೃತಿಕ ಪ್ರತಿಷ್ಠಾನದ ಸಂಸ್ಥಾಪಕ ಅಧ್ಯಕ್ಷ ಬಸವರಾಜೇಂದ್ರ ಸ್ವಾಮಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts